ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತ್ತೆ ಅಧಿಕಾರಕ್ಕೆ ಏರುವ ಉತ್ಸಾಹದಲ್ಲಿರುವ ತೃಣಮೂಲ ಕಾಂಗ್ರೆಸ್ನ 291 ಅಭ್ಯರ್ಥಿಗಳ ಪಟ್ಟಿಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ನಂದಿಗ್ರಾಮ ಕ್ಷೇತ್ರದಿಂದ ಮಾತ್ರವೇ ದೀದಿ ಸ್ಪರ್ಧಿಸಲಿದ್ದು, ಭವಾನಿಪುರ್ ಕ್ಷೇತ್ರದಲ್ಲೂ ಸ್ಪರ್ಧಿಸಲಿದ್ದಾರೆ ಎಂಬ ಊಹೆ ಸುಳ್ಳಾಗಿದೆ. 294 ಕ್ಷೇತ್ರಗಳ ಪೈಕಿ 291 ಕ್ಷೇತ್ರಗಳಲ್ಲಿ ಟಿಎಂಸಿ ಸ್ಪರ್ಧಿಸಲಿದ್ದು, ಮೂರು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ಅವಕಾಶ ನೀಡಿದೆ. 50 ಮಹಿಳೆಯರು, 79 ಎಸ್ಸಿ, 17 ಎಸ್ಟಿ ಮತ್ತು 42 ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಟಿಎಂಸಿ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಒದಗಿಸಿದೆ.
ಮಾರ್ಚ್ 9ರಂದು ಮಮತಾ ಬ್ಯಾನರ್ಜಿ ನಂದಿಗ್ರಾಮಕ್ಕೆ ತೆರಳಲಿದ್ದು, ಮರುದಿನ ನಾಮಪತ್ರ ಸಲ್ಲಿಸಲಿದ್ದಾರೆ. ಜತೆಗೆ, ತಮಗೆ ಬೆಂಬಲ ವ್ಯಕ್ತಪಡಿಸಿದ ಆರ್ಜೆಡಿಯ ತೇಜಸ್ವಿ ಯಾದವ್, ಆಮ್ಆದ್ಮಿಯ ಅರವಿಂದ್ ಕೇಜ್ರೀವಾಲ್, ಶಿವಸೇನೆ ಪಕ್ಷಗಳಿಗೆ ಅವರು ಧನ್ಯವಾದ ತಿಳಿಸಿದ್ದಾರೆ.
ಅಭ್ಯರ್ಥಿಗಳು ಮಾರ್ಚ್ 9ರ ಒಳಗೆ ನಾಮಪತ್ರ ಸಲ್ಲಿಸಬೇಕಿದ್ದು, ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸುವ ದಿನಾಂಕವನ್ನು ಇದುವರೆಗೂ ಸ್ಪಷ್ಟಪಡಿಸಿಲ್ಲ.
294 ಕ್ಷೇತ್ರಗಳಿರುವ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಹಾಗೂ ಏಪ್ರಿಲ್ 29ರಂದು ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಹೆಚ್ಚು ಕಟ್ಟುನಿಟ್ಟಾಗಿ ಚುನಾವಣೆ ನಡೆಸಬೇಕು ಎನ್ನುವ ಕಾರಣಕ್ಕೆ 8 ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ.
ಚುನಾವಣಾ ದಿನಾಂಕ ಘೋಷಣೆ ಮಾಡಿದ್ದ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರಾ, ಎಲ್ಲಾ ಕಡೆಗಳಲ್ಲಿ ದಕ್ಷ ಅಧಿಕಾರಿಗಳನ್ನು ನೇಮಕ ಮಾಡುತ್ತೇವೆ. ಈ ಮೂಲಕ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ಇದಾದ ಮರುದಿನವೇ ಪಶ್ಚಿಮ ಬಂಗಾಳದ ಎಡಿಜಿ ಮತ್ತು ಐಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಜಾವೇದ್ ಶಮೀಮ್ ಅವರನ್ನು ಚುನಾವಣಾ ಆಯೋಗ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಸ್ಥಾನಕ್ಕೆ ಐಪಿಎಸ್ ಅಧಿಕಾರಿ ಜಗ್ ಮೋಹನ್ ಅವರನ್ನು ತರಲಾಗಿದೆ.
ಬಿಜೆಪಿ ನಿಯೋಗವು ಸಿಇಒ ಅರಿಜ್ ಅಫ್ತಾಬ್ ಅವರನ್ನು ಭೇಟಿಯಾಗಿ ಪಕ್ಷಪಾತ ಮಾಡುವ ಪೊಲೀಸ್ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದಿಂದ ತೆಗೆದುಹಾಕುವಂತೆ ಒತ್ತಾಯಿಸಿತ್ತು. ಇದಾದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿತ್ತು.
ಇದನ್ನೂ ಓದಿ: ದೀದಿಗೆ ಶಿವಸೇನಾ ಬೆಂಬಲ; ಮಮತಾ ಬ್ಯಾನರ್ಜಿಯನ್ನು ಬಂಗಾಳದ ಹುಲಿ ಎಂದ ಶಿವಸೇನಾ ಸಂಸದ
ಮಮತಾ ಬ್ಯಾನರ್ಜಿ ಅಹಂಕಾರಕ್ಕೆ ಪಶ್ಚಿಮ ಬಂಗಾಳದ ಜನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ: ಅಬ್ಬಾಸ್ ಸಿದ್ದಿಕಿ