ಊಟಕ್ಕಾಗಿ ಕಿಲಾಡಿ ಗಜಪಡೆಯ ಹೊಸ ಪ್ಲಾನ್​, ಹಣ್ಣು ವ್ಯಾಪಾರಿಗಳಿಗೆ ಶುರುವಾಯ್ತು ತಲೆನೋವು

ಕೊಡಗು: ಇತ್ತೀಚಿನ ದಿನಗಳಲ್ಲಿ ಪ್ರಾಣಿ-ಮಾನವ ಸಂಘರ್ಷದ ಘಟನೆಗಳು ಹೆಚ್ಚುತ್ತಲೇ ಇದೆ. ಅರಣ್ಯ ನಾಶವಾಗುತ್ತಾ ಹೋದಂತೆ ವನ್ಯಜೀವಿಗಳು ಆಹಾರ ಅರಸಿ ಜನ ನಿಬಿಡ ಪ್ರದೇಶಗಳಿಗೆ ಕಾಲಿಡುತ್ತಿರೆ. ಇಂಥ ಒಂದು ಸಂಘರ್ಷದ ಪ್ರಮುಖ ಸ್ಥಾನ ಕೊಡಗು.

ಜಿಲ್ಲೆಯ ಗದ್ದೆ ಮತ್ತು ಕಾಫಿ ತೋಟಗಳಿಗೆ ಸದಾ ಕಾಲ ಕಾಡಾನೆಗಳು ನುಗ್ಗಿ ಮನಬಂದಂತೆ ಮೇಯುತ್ತಾ ಬೆಳೆ ನಾಶ ಸಹ ಮಾಡುತ್ತಿವೆ. ಇವುಗಳ ಉಪಟಳದಿಂದ ಬೇಸತ್ತು ಹೋದ ಹಲವಾರು ರೈತರು ಮತ್ತು ಎಸ್ಟೇಟ್​ ಮಾಲೀಕರು ತಮ್ಮ ತೋಟಗಳಿಗೆ ವಿದ್ಯುತ್​ ಬೇಲಿಗಳನ್ನ ಅಳವಡಿಸಿ ಕೊಂಚ ಮಟ್ಟಿಗೆ ಅವುಗಳ ಕಾಟದಿಂದ ತಪ್ಪಿಸಿಕೊಂಡಿದ್ದಾರೆ.

ಊಟಕ್ಕಾಗಿ ತಮ್ಮ ವರಸೆಯನ್ನೇ ಬದಲಿಸಿದ ಕಿಲಾಡಿ ಕಾಡಾನೆಗಳು
ಆದರೆ, ಊಟದ ದಾರಿಗೆ ಕಲ್ಲುಬಿದ್ದ ಕಾಡಾನೆಗಳು ಅಷ್ಟು ಸುಲಭವಾಗಿ ಸೋಲನ್ನು ಒಪ್ಪಿಕೊಂಡಿಲ್ಲ. ಬದಲಿಗೆ ತಮ್ಮ ದಾಳಿಯ ದಿಕ್ಕನ್ನೇ ಬದಲಿಸಿಕೊಂಡಿದೆ. ಹೌದು, ಕಿಲಾಡಿ ಗಜಪಡೆಯ ಕಣ್ಣಿಗೆ ಈಗ ಬಿದ್ದಿರೋದು ಹಣ್ಣಿನ ಮಳಿಗೆಗಳು.
ಹೀಗಾಗಿ, ಯಾವುದೇ ತಂತಿ ಬೇಲಿ ಇಲ್ಲದೆ, ಸುಲಭವಾಗಿ ಆಹಾರ ದೊರಕುವ ಈ ಹಣ್ಣಿನ ಅಂಗಡಿಗಳಿಗೆ ನುಗ್ಗಿ ಹೊಟ್ಟೆ ತುಂಬಿಸಿಕೊಳ್ಳಲು ಮುಂದಾಗಿವೆ.

ಮಾವು ಮತ್ತು ಸೇಬಿನ ಹಣ್ಣುಗಳು ಕಾಡಾನೆಗಳ ಫೇವರೇಟ್
ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ-ಪೊನ್ನಂಪೇಟೆ ರಸ್ತೆಯಲ್ಲಿರುವ ಅರ್ವತೋಕ್ಲು ಎಂಬಲ್ಲಿ ಹಾರುನ್ ಎಂಬುವವರಿಗೆ ಸೇರಿದ ಅಂಗಡಿಗೆ ಕಳೆದ 3 ದಿನಗಳಿಂದ ಕಾಡಾನೆಗಳು ದಾಳಿ ಮಾಡುತ್ತಿವೆ. ಅಂಗಡಿಯಲ್ಲಿನ ಮಾವು, ಸೇಬು ಮತ್ತು ಇತರ ಹಣ್ಣುಗಳನ್ನು ತಿನ್ನೋದಲ್ಲದೆ ಉಳಿದ ಹಣ್ಣಿನ ಬಾಕ್ಸ್​ಗಳನ್ನ ಧ್ವಂಸ ಮಾಡಿವೆ. ರಾತ್ರಿ ವೇಳೆ ದಾಳಿ ನಡೆಸುತ್ತಿರುವ ಕಾಡಾನೆಗಳು ಅಂಗಡಿಯ ಹೊರ ಭಾಗದಲ್ಲಿ ಕ್ರೇಟ್​ಗಳಲ್ಲಿ ಇಟ್ಟಿದ್ದ ಹಣ್ಣುಗಳನ್ನೂ ತಿಂದಿವೆ. ಜೊತೆಗೆ ಸಮೀಪದ ಗೋದಾಮಿನ ಹೊರಗೆ ಎರಡು ಗೂಡ್ಸ್ ವಾಹನದಲ್ಲಿ ಸುಮಾರು 400 ಕೆ. ಜಿ. ಮಾವಿನ ಹಣ್ಣನ್ನು ಶೇಖರಿಸಿಟ್ಟಿದ್ದರು. ಇವು ಕೂಡ ಖಾಲಿ!

ಗಜಪಡೆಯ ಚೆಲ್ಲಾಟ, ಹಣ್ಣಿನ ವರ್ತಕರಿಗೆ ಆರ್ಥಿಕ ಸಂಕಷ್ಟ
ಕಾಡಾನೆಗಳ ಕಾಟದಿಂದ ತಮಗೆ 50 ಸಾವಿರ ರೂಪಾಯಿಗಳಿಗೂ ಅಧಿಕವಾಗಿ ನಷ್ಟವಾಗಿದೆ ಎಂದು ಅಂಗಡಿ ಮಾಲೀಕ ಹಾರುನ್ ತಿಳಿಸಿದ್ದಾರೆ. ಸದ್ಯಕ್ಕೆ ಸಮೀಪವಿರುವ ಕಾಫಿ ತೋಟಗಳಲ್ಲಿ ಅಡಗಿಕೊಂಡಿರುವ ಕಾಡಾನೆಗಳ ಹಿಂಡು ರಾತ್ರಿ ವೇಳೆ ದಾಳಿ ನಡೆಸುತ್ತಿವೆ. ಹೀಗಾಗಿ ಅವುಗಳ ಉಪದ್ರವದಿಂದ ತಪ್ಪಿಸಿಕೊಳ್ಳಲು ವರ್ತಕರು ಪರದಾಡುವಂತಾಗಿದೆ  -ಬಿ. ಸುರೇಶ್

Related Tags:

Related Posts :

Category:

error: Content is protected !!