Self Employment Tips: ಈ ಕೌಶಲಗಳು ನಿಮ್ಮಲ್ಲಿದ್ದರೆ ನಿಮಗೆ ನೀವೇ ಬಾಸ್!
ಕೊವಿಡ್ಡು, ಲಾಕ್ಡೌನು ಉತ್ಸಾಹಿಗಳನ್ನು ಕೊಂಚ ಅಲುಗಾಡಿಸಿದ್ದು ಹೌದು. ಆದರೆ ‘ಏನಾದರೂ ಮಾಡಬೇಕು’ ಎಂಬುದೊಂದೇ ಜೀವನದ ಉತ್ಕಟ ಮಂತ್ರವಾದರೆ ಪರಿಸ್ಥಿತಿ ಎಂಥದ್ದೇ ಇರಲಿ, ಎಂಥದ್ದೇ ಬರಲಿ ನೀವು ಸರ್ವೈವ್ ಆಗಬಹುದು. ಮತ್ತು ಆಗಲೇಬೇಕು. ಅಂತಹ ಕೆಲವು ಐಡಿಯಾಗಳು ಇಲ್ಲಿವೆ.
ಅತ್ತ ಕಾಲೇಜು ಮುಗಿದಿದೆ, ಇತ್ತ ಕೆಲಸ ಸಿಕ್ಕಿಲ್ಲ. ಸಿಕ್ಕರೂ ದೊರೆಯುವ ಸಂಬಳದ ಬಗ್ಗೆ ತೃಪ್ತಿಯಿಲ್ಲ. ಮನೆಯಲ್ಲಿ ಕೂರಲು ಮನಸಿಲ್ಲ. ಮಾಡಬೇಕು, ಏನಾದರೂ ಮಾಡಬೇಕು ಎಂಬ ಅದಮ್ಯ ಇಚ್ಛೆ, ಹಂಬಲ ಸುಮ್ಮನೇ ಕೂರಲು ಕೊಡುತ್ತಲೂ ಇಲ್ಲ. ಮತ್ತು ಈಗ ಇರುವಂತೆಯೇ ಇದ್ದರೆ ಜೀವನದ ಮೆಟ್ಟಿಲು ಹತ್ತಲಾಗದು; ಇಂತಹುದೇ ಪರಿಸ್ಥಿತಿಯನ್ನು ಎಷ್ಟೆಲ್ಲ ಯುವಕರು ಅನುಭವಿಸುತ್ತಿದ್ದಾರೆಂದರೆ..ಲೆಕ್ಕವಿಲ್ಲ. ಕೊವಿಡ್ಡು, ಲಾಕ್ಡೌನು ಉತ್ಸಾಹಿಗಳನ್ನು ಕೊಂಚ ಅಲುಗಾಡಿಸಿದ್ದು ಹೌದು. ಆದರೆ ‘ಏನಾದರೂ ಮಾಡಬೇಕು’ ಎಂಬುದೊಂದೇ ಜೀವನದ ಉತ್ಕಟ ಮಂತ್ರವಾದರೆ ಪರಿಸ್ಥಿತಿ ಎಂಥದ್ದೇ ಇರಲಿ, ಎಂಥದ್ದೇ ಬರಲಿ ನೀವು ಸರ್ವೈವ್ ಆಗಬಹುದು. ಮತ್ತು ಆಗಲೇಬೇಕು. ಅಂತಹ ಕೆಲವು ಐಡಿಯಾಗಳು ಇಲ್ಲಿವೆ.
1. ಬ್ಲಾಗಿಂಗ್ ಕೈಯಲ್ಲೊಂದು ಸ್ಮಾರ್ಟ್ಫೋನ್, ಉತ್ತಮ ವೇಗದ ಇಂಟರ್ನೆಟ್ ಇದೆ ಅಂತಾದಲ್ಲಿ ನೀವು ಮಾಡಬಹುದಾದ ಹಲವು ಕೆಲಸಗಳನ್ನು ನೀವೇ ರೂಪಿಸಿಕೊಳ್ಳಬಹುದು. ಅದರಲ್ಲಿ ಬ್ಲಾಗಿಂಗ್ ಬಹಳ ಉತ್ತಮ ಆಯ್ಕೆ. ಆದರೆ ನಿಮಗೆ ಆಕರ್ಷಕ ಬರವಣಿಗೆಯ ಕೌಶಲ ಅಗತ್ಯ. ಜತೆ ಜತೆಗೆ ಕ್ಯಾಮರಾ ಎದುರು ವಿಷಯ ನಿರೂಪಣೆಯ ಚಾಕಚಕ್ಯತೆಯೂ ನಿಮ್ಮಲ್ಲಿರಲಿ. ಬ್ಲಾಗಿಂಗ್ ಬಗ್ಗೆ ಗೂಗಲ್ ಮೂಲಕ ಆರಾಮಾಗಿ ನೀವೇ ಅರಿತುಕೊಳ್ಳಬಹುದು. ಹೇಗೆ ಕಂಟೆಂಟ್ ಕ್ಯುರೇಶನ್ ಮಾಡಬೇಕು? ನಮ್ಮ ಬರಹವನ್ನು ಯಾರು ಓದುತ್ತಾರೆ? ಅಂತೆಲ್ಲ ಸದ್ಯ ಯೋಚನೆ ಬೇಡ. ವರ್ಡ್ಪ್ರೆಸ್ ಅಥವಾ ಬ್ಲಾಗರ್ ಎಂಬೆರಡು ವೇದಿಕೆಗಳು ನಿಮಗೆ ನಿಮ್ಮದೇ ಬ್ಲಾಗ್ ಸೃಷ್ಟಿಸುವ ಅವಕಾಶ ಮಾಡಿಕೊಡುತ್ತವೆ. ಅದೂ ಉಚಿತವಾಗಿ. ಬ್ಲಾಗ್ ಅಭಿವೃದ್ಧಿ, ಪ್ರಚಾರ ಪಡೆದಂತೆ ಗೂಗಲ್ ಜಾಹೀರಾತು, ಸ್ಥಳೀಯ ಜಾಹೀರಾತು ಕಂಟೆಂಟ್ ಮಾರ್ಕೆಟಿಂಗ್ ಸೇರಿದಂತೆ ಹಲವು ಬಾಗಿಲುಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ಆದರೆ ನಿಮ್ಮ ಶ್ರಮ ಮತ್ತು ಜಾಣ್ಮೆಯಷ್ಟೇ ನಿಮ್ಮ ಬಾಗಲಿನ ಚಿಲಕದವರೆಗೆ ಕೊಂಡೊಯ್ಯಬಲ್ಲದು.
2. ಆನ್ಲೈನ್ ಕೋಚಿಂಗ್ ನೀವು ಪದವೀಧರರು ಅಥವಾ ಸ್ನಾತಕೋತ್ತರ ಪದವೀಧರರು. ನಿಮಗೆ ಬೋಧನೆಯಲ್ಲಿ ಆಸಕ್ತಿಯಿದೆ. ಆದರೆ ಕೊವಿಡ್ ಮತ್ತು ಲಾಕ್ಡೌನ್ನಿಂದ ಶಾಲಾ ಕಾಲೇಜುಗಳು ಬಾಗಿಲು ಹಾಕಿವೆ. ಇಂತಹ ಪರಿಸ್ಥಿತಿಯಲ್ಲಿ ಸಾಂಪ್ರದಾಯಿಕ ಬೋಧನಾ ಉದ್ಯೋಗವನ್ನೇ ನೆಚ್ಚಿಕೊಳ್ಳಬೇಕಿಲ್ಲ. ಬೈಜುವಿನಂತಹ ಹಲವು ಆ್ಯಪ್ಗಳಲ್ಲಿ ಮನೆಯಲ್ಲೇ ಕುಳಿತು ನೀವು ಕೋಚಿಂಗ್ ಕೊಡಬಹುದು. ಅದಕ್ಕೂ ಹೆಚ್ಚಾಗಿ ನಿಮ್ಮದೇ ಯೂಟ್ಯೂಬ್ ಚಾನಲ್ ಮೂಲಕ ವಿವಿಧ ಪರೀಕ್ಷೆಗಳ ಕುರಿತು ಆಳ ತಿಳಿವಳಿಕೆ ಒದಗಿಸಬಹುದು. ಹಿಂದಿನ ವರ್ಷಗಳ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ ವಿಡಿಯೋ ಪಾಠ ಮಾಡಬಹುದು. ನೇರವಾಗಿ ಇಂತಹ ವಿಡಿಯೋಗಳ ಮೂಲಕ ಹಣ ಗಳಿಸಬಹುದು. ಜತೆಗೆ ಯೂಟ್ಯೂಬ್ ವ್ಯೂಸ್ ಮೂಲಕವೂ ನೀವು ಹಣಗಳಿಕೆ ಮಾಡಬಹುದು. ಈ ಪ್ರಕ್ರಿಯೆಯಲ್ಲಿ ವಿಡಿಯೋ ನಿರ್ಮಾಣ, ಎಡಿಟಿಂಗ್ ಮತ್ತು ಇನ್ನಿತರ ಟೆಕ್ನಿಕಲ್ ಕೌಶಲಗಳನ್ನು ನೀವು ಕಲಿಯಬೇಕು. ಹೀಗೆ ತಮ್ಮದೇ ಯೂಟ್ಯೂಬ್ ವಾಹಿನಿಯ ಮೂಲಕ ಯಶಸ್ಸು ಗಳಿಸುತ್ತಿದ್ದಾರೆ ಸದ್ಯ ಗುಜರಾತಿನಲ್ಲಿ ನೆಲೆಸಿರುವ ಉತ್ತರ ಕನ್ನಡ ಜಿಲ್ಲೆಯ ಮಾನಸಾ ಹೆಗಡೆ. ಗುಜರಾತಿನಲ್ಲಿದ್ದರೂ ಕನ್ನಡದಲ್ಲಿ ವಿದ್ಯಾರ್ಥಿಗಳಿಗಾಗಿ ಅತ್ಯಂತ ಉಪಯುಕ್ತ ವಿಡಿಯೊ ನಿರ್ಮಿಸುತ್ತಿದ್ದಾರೆ ಅವರು. ಅವರು ಯೂಟ್ಯೂಬ್ ಚಾನಲ್ ಲಿಂಕನ್ನು ನೀವು ಒಮ್ಮೆ ಗಮನಿಸಿ: https://www.youtube.com/c/CHEMTIMEWITHMANASA
3. ಯೂಟ್ಯೂಬ್ ಚಾನಲ್ ಯೂಟ್ಯೂಬ್ ನೋಡದವರು ಯಾರಿಲ್ಲ? ಯೂಟ್ಯೂಬ್ನಲ್ಲಿ ಸಿಗದ ವಿಷಯವಿಲ್ಲ. ಈಗಂತೂ ನಮ್ಮ ಮನೆಯ ಸುತ್ತಮುತ್ತಲಿನ ಆಸಕ್ತಿಕರ ವಿಷಯಗಳನ್ನೂ ಜಗತ್ತಿಗೇ ಪ್ರದರ್ಶಿಸಬಹುದು. ಮತ್ತು ಅದೂ ಹಿಟ್ ಆಗಬಲ್ಲದು. ಆದರೆ ನಿಮ್ಮಲ್ಲಿ ಉತ್ತಮ ಕ್ಯಾಮರಾ ಸಾಮರ್ಥ್ಯದ ಸ್ಮಾರ್ಟ್ಫೋನ್ ಮತ್ತು ವಿಡಿಯೋ ಸೆರೆಹಿಡಿಯುವ ಕೌಶಲ ಇರಬೇಕು. ವಿಡಿಯೋ ಎಡಿಟಿಂಗ್ನ್ನು ಸಹ ಹಂತ ಹಂತವಾಗಿ ಕಲಿತು ನೀವೇ ವಿಡಿಯೊ ನಿರ್ಮಿಸಬಹುದು. ಪ್ರಸಕ್ತ ವಿದ್ಯಮಾನಗಳ ಮೇಲೆ ಹಿಡಿತ ಇದ್ದಲ್ಲಿ ನಿಮ್ಮದೇ ಆಡಿಯೆನ್ಸ್ಗಳನ್ನು ಸೃಷ್ಟಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ಕಿಸಿ: YouTube: ಯುಟ್ಯೂಬ್ ಚಾನೆಲ್ ಆರಂಭಿಸಿ ಹಣ ಸಂಪಾದಿಸುವುದು ಹೇಗೆ?
4 . ವೆಬ್ಸೈಟ್/ ಆ್ಯಪ್ ಡೆವಲೆಪ್ಮೆಂಟ್ ನೀವು ಸ್ವಲ್ಪ ಹೆಚ್ಚೇ ಟೆಕ್ ಸ್ಯಾವಿಯಾಗಿದ್ದಲ್ಲಿ ಸ್ವತಃ ನೀವೇ ಒಂದಷ್ಟು ಕೆಲಸಗಳನ್ನು ರೂಪಿಸಿಕೊಳ್ಳಬಹುದು. ಜತೆಗೊಂದಿಷ್ಟು ಕೌಶಲಗಳೂ ನಿಮ್ಮಲ್ಲಿರಬೇಕು. ಆದರೆ ವೆಬ್ಸೈಟ್, ಆ್ಯಪ್ ಡೆವಲಪ್ಮೆಂಟ್ನಂತಹ ಕೆಲಸಕ್ಕೆ ಅಂತಹ ಕೋರ್ಸ್ಗಳನ್ನು ನೀವು ಕಲಿಯಲೇಬೇಕು. ಈ ಕೌಶಲಗಳು ನಿಮಗೆ ಕರಗತವಾದಲ್ಲಿ ನಿಮ್ಮದೇ ಊರಿನಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ವೆಬ್ಸೈಟ್ ಆ್ಯಪ್ಗಳನ್ನು ರೂಪಿಸಿಕೊಡಿ.
ಇದನ್ನೂ ಓದಿ: Self Employment Tips: ಸರಳ ಮತ್ತು ಉತ್ತಮ ಸ್ವಯಂ ಉದ್ಯೋಗ ರೂಪಿಸಿಕೊಳ್ಳಲು ಇಲ್ಲಿದೆ 5 ಐಡಿಯಾ
Published On - 8:21 pm, Sun, 3 October 21