500 ವಿಕೆಟ್ ಸರದಾರನಾದ ಇಂಗ್ಲೆಂಡ್​ನ Stuart Broad

ಇಂಗ್ಲೆಂಡ್ ತಂಡದ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್​ನಲ್ಲಿ 500ನೇ ವಿಕೆಟ್ ಕಬಳಿಸಿ ಸಾಧನೆ ಮಾಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ 500 ವಿಕೆಟ್ ಪಡೆದ ವಿಶ್ವದ 7ನೇ ಬೌಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಓಲ್ಡ್ ಟ್ರ್ಯಾಫರ್ಡ್​ನಲ್ಲಿ ನಡೆಯುತ್ತಿರೋ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಕೊನೆಯ ದಿನದ ಆಟದಲ್ಲಿ ಸ್ಟುವರ್ಟ್ ಬ್ರಾಡ್, ಕ್ರೇಗ್ ಬ್ರಾಥ್​ವೇಟ್​ನ ವಿಕೆಟ್ ಪಡೆಯೋ ಮೂಲಕ ಈ ಮೈಲಿಗಲ್ಲು ತಲುಪಿದ್ದಾರೆ. ಇಂಗ್ಲೆಂಡ್​ನ ಮತ್ತೊಬ್ಬ ಹಿರಿಯ ವೇಗಿ ಜೇಮ್ಸ್ ಌಂಡರ್ಸನ್ ಬಳಿಕ ಈ ಸಾಧನೆ ಮಾಡಿರುವ 2ನೇ ಬೌಲರ್ ಅನ್ನೋ ಕೀರ್ತಿಗೆ ಬ್ರಾಡ್ ಪಾತ್ರರಾಗಿದ್ದಾರೆ.

ಅಚ್ಚರಿಯ ಸಂಗತಿಯೆಂದರೆ, ತನ್ನ 140ನೇ ಟೆಸ್ಟ್ ಪಂದ್ಯದಲ್ಲಿ ಬ್ರಾಡ್ ಕ್ರೇಗ್ ಬ್ರಾಥ್​ವೇಟ್ ವಿಕೆಟ್ ಪಡೆದು ಈ ಸಾಧನೆ ಮಾಡಿದ್ರೆ, ಜೇಮ್ಸ್ ಌಂಡರ್ಸನ್ 500ನೇ ವಿಕೆಟ್ ಕೂಡಾ ಇದೇ ಕ್ರೇಗ್ ಬ್ರಾಥ್​ವೇಟ್ ಅವರದ್ದೇ ಆಗಿತ್ತು.

ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಮುತ್ತಯ್ಯ ಮುರಳೀಧರನ್ (800). ನಂತರ ಶೇನ್ ವಾರ್ನ್ (708), ಅನಿಲ್ ಕುಂಬ್ಳೆ ( 619) ಌಂಡರ್ಸನ್ (619), ಗ್ಲೆನ್ ಮೆಕ್ ಗ್ರಾಥ್ ( 563) ಹಾಗೂ ಕೋರ್ಟ್ನಿ ವಾಲ್ಶ್ (519) ಇದ್ದಾರೆ. ಇದೀಗ ಈ ಗುಂಪಿಗೆ ಸ್ಟುವರ್ಟ್ ಬ್ರಾಡ್ ಕೂಡ ಸೇರ್ಪಡೆಯಾಗಿದ್ದಾರೆ.

Related Tags:

Related Posts :

Category:

error: Content is protected !!