ಹಿರಿಯ ನಟಿ ಜಯಂತಿಗೆ ಹುಟ್ಟುಹಬ್ಬದ ಸಂಭ್ರಮ; ಸಿನಿ ಅಂಗಳದಲ್ಲಿ ಇವರ ಹೆಜ್ಜೆ ಗುರುತು ಅಳಿಸಲಾಗದ್ದು..

ಅಳು, ನಗು, ಬೋಲ್ಡ್​, ಪಕ್ಕಾ ಗೃಹಿಣಿ, ಸೊಕ್ಕಿನ ಹೆಣ್ಣು.. ಹೀಗೆ ವಿವಿಧ ಪಾತ್ರಗಳಿಗೆ ಜೀವತುಂಬಿ, ಸೈ ಎನಿಸಿಕೊಂಡ ಜಯಂತಿ ಇನ್ನಷ್ಟು ವರ್ಷ ಖುಷಿಯಾಗಿ ಬಾಳಲಿ ಎಂದು ಹಾರೈಸೋಣ..

  • TV9 Web Team
  • Published On - 20:00 PM, 6 Jan 2021
ನಟಿ ಜಯಂತಿ

‘ಜಯಂತಿ’ ಎಂದ ತಕ್ಷಣ ಕಣ್ಣೆದುರು ಬರುವುದು ಅವರ ಮುಖ ಭಾವಾಭಿನಯ.. ಎಂಥ ಪಾತ್ರದಲ್ಲೂ ತೋರುವ ಅದ್ಭುತ ನಟನೆ. ಬಳ್ಳಾರಿಯವರಾದ ಇವರು, 1960ರಲ್ಲಿ  ಯಾನೈ ಪಾಗನ್  ತಮಿಳು ಸಿನಿಮಾ  ಮೂಲಕ ಸಿನಿರಂಗಕ್ಕೆ ಕಾಲಿಟ್ಟವರು ಸುಮಾರು 50 ವರ್ಷಗಳ ಕಾಲ  ಕನ್ನಡ, ತೆಲುಗು, ಮಲಯಾಳಂ, ಹಿಂದಿ, ತಮಿಳು ಚಿತ್ರರಂಗದಲ್ಲಿ ಮಿಂಚಿದ್ದಾರೆ.

ಈ ಹಿರಿಯ ನಟಿ ಜಯಂತಿಯವರಿಗೆ ಇಂದು 76ನೇ ಹುಟ್ಟುಹಬ್ಬದ ಸಂಭ್ರಮ. ಇತ್ತೀಚೆಗೆ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಜಯಂತಿ ಸಾರ್ವಜನಿಕ ಜೀವನದಿಂದ ದೂರವೇ ಉಳಿದಿದ್ದಾರೆ. ಆದರೆ ಅವರ ಸಿನಿಮಾಗಳು ಮಾತ್ರ ಎಂದೆಂದಿಗೂ ಜನಮಾನಸದಲ್ಲಿ ಉಳಿಯುವಂಥವುಗಳು.

ಜೇನುಗೂಡು ಮೊದಲ ಸಿನಿಮಾ
1960ರಲ್ಲಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಜಯಂತಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದು 1963ರಲ್ಲಿ, ಜೇನುಗೂಡು ಸಿನಿಮಾ ಮೂಲಕ. ಆ ಸಮಯದಲ್ಲಿ ಅವರ ಹೆಸರು ಕಮಲಾ ಕುಮಾರಿ ಎಂದಾಗಿತ್ತು. ನಂತರ 1964ರಲ್ಲಿ ಚಂದವಳ್ಳಿಯ ತೋಟದಲ್ಲಿನಾಯಕಿಯಾಗಿ ಅಭಿನಯ ಮಾಡಿದರು. ಈ ಸಿನಿಮಾದಲ್ಲಿ ಡಾ. ರಾಜಕುಮಾರ್, ಉದಯ್​ಕುಮಾರ್​ ಅವರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡರು. ಚಿತ್ರವೂ ಅದ್ಭುತ ಯಶಸ್ಸು ಗಳಿಸಿ, ರಾಷ್ಟ್ರಪತಿ ಪದಕ ಪುರಸ್ಕೃತಗೊಂಡಿತು. ಅದಾದ ಬಳಿಕ 1965 ರಲ್ಲಿ ಎಂ. ಆರ್. ವಿಟ್ಟಲ್ ನಿರ್ದೇಶನದ ಮಿಸ್. ಲೀಲಾವತಿ ಚಿತ್ರದಲ್ಲಿ ಅಭಿನಯಿಸಿದರು. ಅದರಲ್ಲೂ ಶೀರ್ಷಿಕೆ ಪಾತ್ರದಲ್ಲಿ ನಟಿಸಿ,  ಗಮನಸೆಳೆದರು. ಈ ಸಿನಿಮಾದಲ್ಲಿ ಜಯಂತಿ ಟೀ-ಶರ್ಟ್​, ಸ್ಕರ್ಟ್​ಗಳನ್ನು ಧರಿಸುವ ಮೂಲಕ ಬೋಲ್ಡ್​ ಪಾತ್ರ ನಿರ್ವಹಿಸಿದರು.

ಹೀಗೆ ನಾಲ್ಕು ಚಿತ್ರರಂಗದಲ್ಲಿ ಒಂದರ ಬೆನ್ನಿಗೆ ಮತ್ತೊಂದು ಯಶಸ್ವಿ ಚಿತ್ರಗಳನ್ನು ಕೊಟ್ಟ ಜಯಂತಿ, 1962-1979ರ ಅವಧಿಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದರು. ಈ ಮಧ್ಯೆ 1973ರಲ್ಲಿ ತೆರೆಕಂಡ ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಜಯಂತಿಯವರ ಇಮೇಜ್​ನ್ನೇ ಬದಲಿಸಿಬಿಟ್ಟಿತ್ತು. ಒಬ್ಬ ಮದುವೆಯಾದ ಹೆಂಗಸು, ಯುವಕನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಳ್ಳುವ ಈ ಸಿನಿಮಾವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದಾರೆ. ಇದರಲ್ಲಿ ಜಯಂತಿ-ಆರತಿ ಅಕ್ಕ-ತಂಗಿಯರಾಗಿ ಮನೋಜ್ಞವಾಗಿ ಅಭಿನಯಿಸಿದ್ದಾರೆ.  ಇನ್ನು ಈ ಸಿನಿಮಾದಿಂದ ಜಯಂತಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಎಡಕಲ್ಲು ಗುಡ್ಡ ಮೇಲೆ ಸಿನಿಮಾಕ್ಕೆ ಸೇರಿ ಒಟ್ಟು 4 ಬಾರಿ ಉತ್ತಮ ನಟಿ ಪ್ರಶಸ್ತಿ ಪಡೆದ ಜಯಂತಿ, ಎರಡು ಸಲ, ಉತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2005ರಲ್ಲಿ  ಡಾ.ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಸಾವಿನ ಸುದ್ದಿ ಹರಿದಾಡಿತ್ತು
ಕೆಲವೊಮ್ಮೆ ಗಣ್ಯರ ಸಾವಿನ ಬಗ್ಗೆ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿಬಿಡುತ್ತವೆ. ಇದೇ ಸನ್ನಿವೇಶವನ್ನು ಜಯಂತಿಯವರೂ ಎದುರಿಸಿದ್ದಾರೆ. 2018ರ ಮಾರ್ಚ್​ 27ರಂದು ಜಯಂತಿ ಮೃತಪಟ್ಟಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗಿತ್ತು. ಅವರ ಅಭಿಮಾನಿಗಳಂತೂ ಶ್ರದ್ಧಾಂಜಲಿಯನ್ನೂ ಸಲ್ಲಿಸಿದ್ದರು. ಆದರೆ ನಂತರ ಜಯಂತಿ ಕುಟುಂಬ ಸ್ಪಷ್ಟನೆ ನೀಡಿತ್ತು. ಜಯಂತಿಯವರಿಗೆ ಅಸ್ತಮಾ ಸಮಸ್ಯೆ ಇದ್ದು, ಆಗಾಗ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಕುಟುಂಬದವರೊಂದಿಗೆ ಕಾಲ ಕಳೆಯುತ್ತಿದ್ದಾರೆ.

ಅಳು, ನಗು, ಬೋಲ್ಡ್​, ಪಕ್ಕಾ ಗೃಹಿಣಿ, ಸೊಕ್ಕಿನ ಹೆಣ್ಣು.. ಹೀಗೆ ವಿವಿಧ ಪಾತ್ರಗಳಿಗೆ ಜೀವತುಂಬಿ, ಸೈ ಎನಿಸಿಕೊಂಡ ಜಯಂತಿ ಇನ್ನಷ್ಟು ವರ್ಷ ಖುಷಿಯಾಗಿ ಬಾಳಲಿ ಎಂದು ಹಾರೈಸೋಣ..