ಬಟ್ಟೆಗಳ ವಿಚಾರದಲ್ಲಿ ಸೆಲೆಬ್ರಿಟಿಗಳು ಸಖತ್ ಕಾಳಜಿ ವಹಿಸುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಧರಿಸಲು ಅತ್ಯಂತ ಕಾಳಜಿಯಿಂದ ವಿನ್ಯಾಸಗೊಳಿಸಲಾದ ಕಾಸ್ಟ್ಯೂಮ್ಗಳನ್ನು ನಟ-ನಟಿಯರು ಆಯ್ಕೆ ಮಾಡಿಕೊಳ್ಳುತ್ತಾರೆ. ಬ್ರ್ಯಾಂಡೆಡ್ ಬಟ್ಟೆಗಳಿಗೆ ಅವರು ಹೆಚ್ಚು ಒತ್ತು ನೀಡುತ್ತಾರೆ. ಅಷ್ಟೇ, ಬಹುತೇಕ ಸೆಲೆಬ್ರಿಟಿಗಳು ಒಮ್ಮೆ ಧರಿಸಿದ ಬಟ್ಟೆಯನ್ನು ಮತ್ತೊಮ್ಮೆ ಧರಿಸಲ್ಲ! ಹೌದು, ಈ ರೀತಿಯ ಟ್ರೆಂಡ್ ಮೊದಲಿನಿಂದಲೂ ಜಾರಿಯಲ್ಲಿದೆ. ಒಂದೇ ಬಟ್ಟೆಯನ್ನು ಧರಿಸಿ ಪದೇ ಪದೇ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅವರನ್ನು ಫ್ಯಾಷನ್ ಲೋಕ ಬೇರೆಯದೇ ರೀತಿಯಲ್ಲಿ ನೋಡುತ್ತದೆ. ಆದರೆ ಈ ಗೊಡ್ಡು ಮನಸ್ಥಿತಿಗೆ ನಟಿ ಕನಿಹಾ ಅವರು ಸವಾಲು ಹಾಕಿದ್ದಾರೆ.
ಬಹುಭಾಷೆಯ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವ ಕನಿಹಾ ಅವರಿಗೆ ಇದೆ. ಕನ್ನಡದ ‘ಸೈ’, ‘ಅಣ್ಣಾವ್ರು’, ‘ರಾಜಕುಮಾರಿ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿರುವ ಅವರು ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ. ನಿಜಜೀವನದಲ್ಲಿ ಧರಿಸುವ ಕಾಸ್ಟ್ಯೂಮ್ಗಳ ಬಗ್ಗೆ ಅವರು ತಮ್ಮದೇ ನಿಲುವು ಹೊಂದಿದ್ದಾರೆ. ಆ ಬಗ್ಗೆ ಸಾರ್ವಜನಿಕವಾಗಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಯಾರೋ ಏನೋ ಅಂದುಕೊಳ್ಳುತ್ತಾರೆ ಎಂಬ ಕಾರಣದಿಂದ ಪ್ರತಿ ಬಾರಿ ಬೇರೆ ಬೇರೆ ಬಟ್ಟೆ ಧರಿಸಿದರೆ ಅದರಿಂದ ಅನಗತ್ಯ ಖರ್ಚ ಆಗುತ್ತದೆ. ಅಗತ್ಯಕ್ಕಿಂತ ಹೆಚ್ಚಿನದನ್ನು ಖರೀದಿಸಿದರೆ ಪರಿಸರಕ್ಕೂ ಹಾನಿ ಆಗುತ್ತದೆ. ಹಾಗಾಗಿ ಬಟ್ಟೆಯನ್ನು ರಿಪೀಟ್ ಮಾಡುವುದರಲ್ಲಿ ತಪ್ಪೇನೂ ಇಲ್ಲ ಎಂಬುದನ್ನು ಕನಿಹಾ ಪ್ರತಿಪಾದಿಸುತ್ತಿದ್ದಾರೆ.
‘ಹೌದು, ನಾನು ಬಟ್ಟೆಗಳನ್ನು ರಿಪೀಟ್ ಮಾಡುತ್ತೇನೆ. ಬಟ್ಟೆಗಳನ್ನು ಮರುಬಳಕೆ ಮಾಡುತ್ತೇನೆ. ಬ್ರ್ಯಾಂಡೆಡ್ ಮತ್ತು ಡಿಸೈನರ್ ಬಟ್ಟೆಗಳನ್ನು ಒಳಗೊಂಡ ಫ್ಯಾನ್ಸಿ ವಾರ್ಡ್ರೋಬ್ ನನ್ನ ಬಳಿ ಇಲ್ಲ. ಹಳೇ ಸೂತ್ರಗಳನ್ನು ನಾನು ಮುರಿಯುತ್ತೇನೆ. ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಜನಪ್ರಿಯ ವ್ಯಕ್ತಿಗಳು ಹೀಗೆಯೇ ಡ್ರೆಸ್ ಮಾಡಿಕೊಳ್ಳಬೇಕು ಅಂತ ಹೇಳಿದ್ದು ಯಾರು? ನಿಮಗೆ ಕಂಫರ್ಟ್ ಎನಿಸುವಂತಹ ಮತ್ತು ಆತ್ಮವಿಶ್ವಾಸ ನೀಡುವಂತಹ ಬಟ್ಟೆಗಳನ್ನೇ ಧರಿಸಿ. ಎಲ್ಲದಕ್ಕೂ ನಿಮ್ಮ ಆಟಿಟ್ಯೂಡ್ ಉತ್ತರವಾಗಿರಲಿ. ಬಹುತೇಕರು ಕೇಳುವ ಪ್ರಶ್ನೆಗೆ ಇದೇ ನನ್ನ ಉತ್ತರ’ ಎಂದು ಕನಿಹಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಕನಿಹಾ ಅವರ ಮಾತಿಗೆ ಸಹಮತ ಸೂಚಿಸಿದ್ದಾರೆ. ಈ ರೀತಿ ಮಾಡುವುದರಿಂದ ಸುಸ್ಥಿರ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ. ಪರಿಸರ ಉಳಿಯುತ್ತದೆ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ. ವಿವಿಧ ಸಂದರ್ಭದಲ್ಲಿ ತಾವು ಕಾಸ್ಟ್ಯೂಮ್ ರಿಪೀಟ್ ಮಾಡಿದಕ್ಕೆ ಸಾಕ್ಷಿಯಾಗಿ ಕೆಲವು ಫೋಟೋಗಳನ್ನು ಕೂಡ ಈ ಬರಹದ ಜೊತೆಗೆ ಕನಿಹಾ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:
ಎಷ್ಟು ಕೋಟಿ ಕೊಟ್ಟರೂ ಈ ಮದುಮಗಳು ಧರಿಸಿದ ಸೀರೆಗೆ ಬೆಲೆ ಕಟ್ಟೋಕಾಗಲ್ಲ; ಏನಿದರ ವಿಶೇಷ?
ಎಷ್ಟೇ ಟ್ರೋಲ್ ಮಾಡಿದ್ರೂ ಜಗ್ಗಲ್ಲ ಈ ಯುವತಿ; ಇಷ್ಟೊಂದು ನೆಗೆಟಿವ್ ಕಮೆಂಟ್ ಬರಲು ಕಾರಣ ಏನು?