ಹೈದರಾಬಾದ್ನ ಸಂಧ್ಯಾ ಥಿಯೇಟರ್ ಬಳಿ ‘ಪುಷ್ಪ 2’ ಪ್ರೀಮಿಯರ್ ವೇಳೆ ಉಂಟಾದ ಕಾಲ್ತುಳಿತದಲ್ಲಿ ರೇವತಿ ಹೆಸರಿನ ಮಹಿಳೆ ನಿಧನ ಹೊಂದಿದ್ದಳು. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಕೂಡ ಆರೋಪಿ ಆಗಿದ್ದು, ಅವರಿಗೆ ಸಂಕಷ್ಟ ಹೆಚ್ಚುತ್ತಿದೆ. ಅಲ್ಲು ಅರ್ಜುನ್ ಅವರನ್ನು ಇಂದು (ಡಿಸೆಂಬರ್ 13) ಮುಂಜಾನೆ ಬಂಧಿಸಿದ್ದು ಸಾಕಷ್ಟು ಸಂಚಲನ ಸೃಷ್ಟಿ ಮಾಡಿದೆ. ಈ ಬೆನ್ನಲ್ಲೇ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಪೊಲೀಸರು ಕೋರ್ಟ್ಗೆ ಹಾಜರು ಪಡಿಸಿದ್ದಾರೆ. ಅವರನ್ನು, 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ನಾಂಪಲ್ಲಿ ಕೋರ್ಟ್ ಆದೇಶ ನೀಡಿದೆ. ‘ಪುಷ್ಪ 2’ ಗೆಲುವಿನ ಖುಷಿಯಲ್ಲಿ ಇದ್ದ ಅಲ್ಲು ಅರ್ಜುನ್, ಈಗ ಜೈಲು ಪಾಲಾಗಿದ್ದಾರೆ.
ಅಲ್ಲು ಅರ್ಜುನ್ ಅವರಿಗೆ ನ್ಯಾಯಾಂಗ ಬಂಧನ ಒದಗಿಸಿರುವುದು ಕೆಳ ಹಂತದ ಕೋರ್ಟ್. ಅವರು ಈಗಾಗಲೇ ತಮ್ಮ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಒಂದೊಮ್ಮೆ ಹೈಕೋರ್ಟ್ ಈ ಪ್ರಕರಣಕ್ಕೆ ತಡೆ ನೀಡಿದರೆ ಅಲ್ಲು ಅರ್ಜುನ್ ಅವರಿಗೆ ಬಿಗ್ ರಿಲೀಫ್ ಸಿಗಲಿದೆ.
ಹೈಕೋರ್ಟ್ನಲ್ಲಿ ಈ ಪ್ರಕರಣಕ್ಕೆ ಬ್ರೇಕ್ ಬೀಳದೆ ಇದ್ದರೆ ಅವರು ಚಂಚಲಗೂಡ ಜೈಲಿಗೆ ಶಿಫ್ಟ್ ಆಗಲಿದ್ದಾರೆ. ಶನಿವಾರ (ಡಿಸೆಂಬರ್ 14) ಹಾಗೂ ಭಾನುವಾರ (ಡಿಸೆಂಬರ್ 14) ಕೋರ್ಟ್ ಕಲಾಪ ನಡೆಯುವುದಿಲ್ಲ. ಆ ಸಂದರ್ಭದಲ್ಲಿ ಅಲ್ಲು ಅರ್ಜುನ್ಗೆ ಜಾಮೀನು ಸಿಗುವುದಿಲ್ಲ. ಆಗ ಅವರು ಸೋಮವಾರದವರೆಗೆ ಕಾಯಬೇಕಾಗುತ್ತದೆ.
ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರದ ಪ್ರೀಮಿಯರ್ನ ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಅಲ್ಲು ಅರ್ಜುನ್ ಬರುತ್ತಾರೆ ಎಂದು ತಿಳಿದ ಫ್ಯಾನ್ಸ್ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಇದು ಕಾಲ್ತುಳಿತಕ್ಕೆ ಕಾರಣ ಆಯಿತು. ಈ ಘಟನೆಗೆ ಅಲ್ಲು ಅರ್ಜುನ್ ಕಾರಣ ಎನ್ನುವ ಆರೋಪ ಇದೆ. ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಸದ್ಯ ಅಲ್ಲು ಅರ್ಜುನ್ ಅವರು ಆತಂಕದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:29 pm, Fri, 13 December 24