ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಿಲೆಜೆನ್ಸ್) ಬಗ್ಗೆ ವಿಶ್ವದಾದ್ಯಂತ ಜೋರು ಚರ್ಚೆಗಳು ನಡೆಯುತ್ತಿವೆ. ಅದರಲ್ಲಿಯೂ ಚಾಟ್ ಜಿಪಿಟಿ (ChatGpt) ಬಂದ ಮೇಲಂತೂ ಕೃತಕ ಬುದ್ಧಿಮತ್ತೆಯ (Artificial Intelligence) ಸಾಮರ್ಥ್ಯ ಸಾಮಾನ್ಯ ಮೊಬೈಲ್ ಬಳಕೆದಾರರಿಗೂ ಅರ್ಥವಾಗುತ್ತಿದ್ದು, ಅದರ ಭವಿಷ್ಯದ ಸಾಧ್ಯತೆಗಳ ಬಗ್ಗೆ ಆತಂಕ ಹಾಗೂ ಕುತೂಹಲ ಏಕಕಾಲಕ್ಕೆ ಹುಟ್ಟಿಕೊಂಡಿವೆ. ಮನರಂಜನಾ ಕ್ಷೇತ್ರದ ಮೇಲೂ ಈ ಏಐಗಳು ಗುರುತರ ಪ್ರಭಾವ ಬೀರಲಿವೆ ಎಂದು ಅಂದಾಜಿಸಲಾಗಿದ್ದು. ಈಗಾಗಲೇ ಚಾಟ್ ಜಿಪಿಟಿ ದಕ್ಷಿಣ ಭಾರತದ ಇಬ್ಬರು ಸ್ಟಾರ್ ಹೀರೋಗಳಿಗಾಗಿ ಒಂದು ಮಾಸ್ ಕತೆ ರಚಿಸಿದ್ದು, ಸಿನಿಮಾ ಕತೆಗಾರರ ಎದೆಯಲ್ಲಿ ಸಣ್ಣ ನಡುಕ ಹುಟ್ಟಿಸಿದೆ.
ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಅವರಿಗಾಗಿ ಒಂದು ಮಾಸ್ ಕತೆಯನ್ನು ಚಾಟ್ ಜಿಪಿಟಿ ಬರೆದಿದೆ. ಕೆಲವು ಪೂರಕ ಮಾಹಿತಿಗಳನ್ನಷ್ಟೆ ಚಾಟ್ ಜಿಪಿಟಿಗೆ ಒದಗಿಸಲಾಗಿದ್ದು, ಅದನ್ನು ಬಳಸಿ ಪಕ್ಕಾ ಕಮರ್ಶಿಯಲ್ ಕತೆಯೊಂದನ್ನು ಚಾಟ್ ಜಿಪಿಟಿ ಬರೆದು ಕೊಟ್ಟಿದೆ.
ಕತೆ ಇಂತಿದೆ, ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಇಬ್ಬರೂ ಭಾರತದ ಪ್ರಮುಖ ತನಿಖೆ ಮತ್ತು ಭದ್ರತಾ ಸಂಸ್ಥೆಯೊಂದರ ಅಧಿಕಾರಿಗಳು. ಇಬ್ಬರೂ ಅಂಡರ್ಕವರ್ ಏಜೆಂಟ್ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರಿಗೂ ಪರಸ್ಪರ ಪರಿಚಯವಿಲ್ಲ. ಆದರೆ ಇಲಾಖೆಯಲ್ಲಿ ಇವರಿಬ್ಬರ ಹೆಸರು ಬಹಳ ಜನಪ್ರಿಯ.
ಇದೇ ಸಮಯದಲ್ಲಿ ದೊಡ್ಡ ಅಂಡರ್ವರ್ಲ್ಡ್ ಗ್ಯಾಂಗ್ ಒಂದು ಭಾರತದ ಒಳಕ್ಕೆ ಡ್ರಗ್ಸ್ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿರುತ್ತದೆ. ಈ ಗ್ಯಾಂಗ್ ಅನ್ನು ಹೆಡೆ ಮುರಿ ಕಟ್ಟಲು ಉನ್ನತ ಅಧಿಕಾರಿಯೊಬ್ಬ ಈ ಇಬ್ಬರನ್ನು ನೇಮಿಸುತ್ತಾರೆ. ಆದರೆ ಪವನ್-ಮಹೇಶ್ ಊಹಿಸಿದಷ್ಟು ಸಣ್ಣ ಗ್ಯಾಂಗ್ ಅಥವಾ ನೆಟ್ವರ್ಕ್ ಆ ಗ್ಯಾಂಗ್ನದ್ದಾಗಿರುವುದಿಲ್ಲ.
ಗ್ಯಾಂಗ್ನ ವಿರುದ್ಧ ಇಬ್ಬರು ಹೀರೋಗಳು ಕಾರ್ಯಾಚರಣೆ ಚುರುಕು ಗೊಳಿಸುತ್ತಲೇ, ಪವನ್ ಕಲ್ಯಾಣ್ ಹಾಗೂ ಮಹೇಶ್ ಬಾಬು ಮೇಲೆ ಸತತ ದಾಳಿಗಳು ಆರಂಭವಾಗುತ್ತವೆ. ತಮ್ಮದೇ ಇಲಾಖೆಯ ಅಧಿಕಾರಿಗಳು ಸಹ ಇಬ್ಬರನ್ನು ಕೊಲ್ಲಲು ನೋಡುತ್ತಾರೆ. ಇದಕ್ಕೆ ಕಾರಣ ಆ ಗ್ಯಾಂಗ್ನ ಲೀಡರ್ ಇಬ್ಬರನ್ನು ಕೊಂದವರಿಗೆ ಭಾರಿ ದೊಡ್ಡ ಬಹುಮಾನ ನೀಡುವುದಾಗಿ ಘೋಷಿಸಿರುತ್ತಾನೆ. ಆದರೆ ಫೈಟ್ ಹಾಗೂ ಶಸ್ತ್ರಾಸ್ತ್ರಗಳನ್ನು ಬಳಸುವಲ್ಲಿ ನಿಪುಣರಾಗಿರುವ ಹೀರೋಗಳು ತಮ್ಮನ್ನು ಕೊಲ್ಲಲು ಬಂದವರನ್ನೆಲ್ಲ ಹೆಡೆಮುರಿ ಕಟ್ಟುತ್ತಾರೆ.
ಕೊನೆಗೆ ಗ್ಯಾಂಗ್ ಲೀಡರ್ನ ಅಡುಗು ತಾಣವಾದ ದೊಡ್ಡ ಹೆಡ್ ಕ್ವಾಟರ್ ಅನ್ನು ಕಂಡು ಹಿಡಿಯುವ ಹೀರೋಗಳು ಸೂಕ್ತ ಯೋಜನೆ ಒಂದನ್ನು ರಚಿಸಿ, ನಾಯಕಿಯರ ಸಹಾಯವನ್ನು ತೆಗೆದುಕೊಂಡು ಹೆಡ್ಕ್ವಾಟರ್ ಮೇಲೆ ದಾಳಿ ಮಾಡುತ್ತಾರೆ. ಅಚಾನಕ್ಕಾದ ಈ ದಾಳಿಗೆ ಕಂಗಾಲಾದ ಗ್ಯಾಂಗ್ನ ತಂಡವನ್ನು ದೊಡ್ಡ ಬಂದೂಕು, ಬಾಂಬರ್ಗಳಿಂದ ನಿರ್ಣಾಮ ಮಾಡಿ, ಅಂತಿಮವಾಗಿ ಮಹಾಬಲಶಾಲಿಯಾದ ಗ್ಯಾಂಗ್ನ ಲೀಡರ್ ಅನ್ನು ಇಬ್ಬರೂ ಹೀರೋಗಳು ಸೇರಿ ಮುಗಿಸುತ್ತಾರೆ.
Published On - 12:40 pm, Mon, 27 February 23