ಖ್ಯಾತ ನಟ ನಾಸರ್ (Nassar) ಅವರು ಬಹುಭಾಷೆಯಲ್ಲಿ ಫೇಮಸ್ ಆಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿದ ಅನುಭವ ನಾಸರ್ ಅವರಿಗೆ ಇದೆ. ದಕ್ಷಿಣ ಭಾರತದಲ್ಲಿ ಅವರಿಗೆ ಭರ್ಜರಿ ಬೇಡಿಕೆ ಇದೆ. ಬಣ್ಣದ ಲೋಕದಲ್ಲಿ ಅವರು ಹೊಂದಿರುವ ಅನುಭವ ಅಪಾರ. ಮೂಲತಃ ಚೆನ್ನೈನವರಾದ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಬಗ್ಗೆ ಈಗೊಂದು ಬ್ಯಾಡ್ ನ್ಯೂಸ್ ಕೇಳಿಬಂದಿದೆ. ಸಿನಿಮಾ ಶೂಟಿಂಗ್ ವೇಳೆ ನಾಸರ್ ಪೆಟ್ಟು ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಈ ವಿಷಯ ತಿಳಿದು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಗೆ ಆತಂಕ ಆಗಿದೆ. ನಾಸರ್ ಹೆಲ್ತ್ ಅಪ್ಡೇಟ್ (Nassar Health Update) ತಿಳಿಯಲು ಎಲ್ಲರೂ ಕಾದಿದ್ದಾರೆ. ಆದಷ್ಟು ಬೇಗ ಅವರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಲಾಗುತ್ತಿದೆ.
ವರದಿಗಳ ಪ್ರಕಾರ, ತೆಲಂಗಾಣ ಪೊಲೀಸ್ ಅಕಾಡೆಮಿಯಲ್ಲಿ ನಾಸರ್ ಅವರು ಸಿನಿಮಾ ಶೂಟಿಂಗ್ ಮಾಡುತ್ತಿದ್ದರು. ಅವರ ಜೊತೆ ಸುಹಾಸಿನಿ ಮಣಿರತ್ನಂ, ಮೆಹ್ರೀನ್ ಪೀರ್ಜಾದಾ, ಸಯ್ಯಾಜಿ ಶಿಂಧೆ ಮುಂತಾದ ಕಲಾವಿದರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಈ ಸಂದರ್ಭದಲ್ಲಿ ನಾಸರ್ ಅವರು ಮೆಟ್ಟಿಲುಗಳ ಮೇಲಿಂದ ಬಿದ್ದರು. ಅವರ ಕಣ್ಣಿನ ಭಾಗಕ್ಕೆ ಪೆಟ್ಟಾಯಿತು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ. ಈ ಘಟನೆ ಬಗ್ಗೆ ಚಿತ್ರತಂಡದವರು ಅಥವಾ ನಾಸರ್ ಕುಟುಂಬದವರು ಇನ್ನಷ್ಟೇ ಅಧಿಕೃತ ಹೇಳಿಕೆ ನೀಡಬೇಕಿದೆ.
ಶಸ್ತ್ರ ಚಿಕಿತ್ಸೆ ಬಳಿಕ ನಾಸರ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಆತಂಕಕ್ಕೆ ಒಳಗಾಗಬೇಕಾದ ಅವಶ್ಯಕತೆ ಇಲ್ಲ. ಶೀಘ್ರದಲ್ಲೇ ಹೆಲ್ತ್ ಅಪ್ಡೇಟ್ ನೀಡಲಾಗುವುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಪ್ರಸ್ತುತ ಅನೇಕ ಸಿನಿಮಾಗಳಲ್ಲಿ ನಾಸರ್ ಬ್ಯುಸಿ ಆಗಿದ್ದಾರೆ. ಪೋಷಕ ಪಾತ್ರಗಳನ್ನು ನಿಭಾಯಿಸುವ ಮೂಲಕ ಅವರು ಸಖತ್ ಜನಪ್ರಿಯತೆ ಪಡೆದುಕೊಂಡಿದ್ದಾರೆ.
‘ಬಾಹುಬಲಿ’ ಸಿನಿಮಾದಲ್ಲಿ ನಾಸರ್ ಮಾಡಿದ ಬಿಜ್ಜಳದೇವನ ಪಾತ್ರ ತುಂಬ ಜನಪ್ರಿಯವಾಗಿತ್ತು. ಶಿವಗಾಮಿಯ ಪತಿಯಾಗಿ, ಬಲ್ಲಾಳದೇವನ ತಂದೆಯಾಗಿ ಅವರು ನಟಿಸಿ ಗಮನ ಸೆಳೆದಿದ್ದರು. ನಾಸರ್ ಅವರ ನಟನೆಗೆ ಅನೇಕ ಪ್ರಶಸ್ತಿಗಳು ಸಂದಿವೆ. ತಮಿಳುನಾಡು ಸರ್ಕಾರ ನೀಡುವ ರಾಜ್ಯ ಚಲನಚಿತ್ರ ಪ್ರಶಸ್ತಿಗೆ 6 ಬಾರಿ ಅವರು ಭಾಜನರಾಗಿದ್ದಾರೆ. ವಿಲನ್ ಪಾತ್ರಕ್ಕೆ ‘ನಂದಿ ಪ್ರಶಸ್ತಿ’ ಪಡೆದಿದ್ದಾರೆ. ನಿರ್ದೇಶಕನಾಗಿಯೂ ಅವರು ಕೆಲಸ ಮಾಡಿದ್ದಾರೆ. ಕೆಲವು ಸಿನಿಮಾಗಳಿಗೆ ನಾಸರ್ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.