ಸೋನು ಸೂದ್ ಢಾಬಾದಲ್ಲಿ ತಯಾರಾಗ್ತಿದೆ ಬಿಸಿಬಿಸಿ ತಂದೂರಿ ರೋಟಿ: ವಿಡಿಯೊ ವೈರಲ್

Sonu Sood dhaba: ತಂದೂರಿ ಒಲೆಯಲ್ಲಿ ರೊಟ್ಟಿ ಬೇಯಿಸಿದ ನಂತರ ನನಗಿಂತ ಚೆನ್ನಾಗಿ ಯಾರೂ ತಂದೂರಿ ರೋಟಿ ಮಾಡಲಾರರು. ನಿಮಗೆ ಇದನ್ನು ತಿನ್ನಬೇಕು ಅನಿಸಿದರೆ ಬೇಗ ಬನ್ನಿ ಎಂದಿದ್ದಾರೆ ಸೋನು ಸೂದ್.

  • TV9 Web Team
  • Published On - 17:50 PM, 22 Feb 2021
ಸೋನು ಸೂದ್ ಢಾಬಾದಲ್ಲಿ ತಯಾರಾಗ್ತಿದೆ ಬಿಸಿಬಿಸಿ ತಂದೂರಿ ರೋಟಿ: ವಿಡಿಯೊ ವೈರಲ್
ನಟ ಸೋನು ಸೂದ್

ಮುಂಬೈ: ಲಾಕ್ ಡೌನ್ ವೇಳೆ ವಲಸೆ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಿ ಅವರಿಗೆ ಸಹಾಯ ಮಾಡುವ ಮೂಲಕ ಬಾಲಿವುಡ್ ನಟ ಸೋನು ಸೂದ್ ಜನರ ಮನಸ್ಸು ಗೆದ್ದಿದ್ದರು. ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸೋನು ಸೂದ್, ನಿಜ ಜೀವನದಲ್ಲಿ ಹೀರೊ ಆಗಿದ್ದರು. ಕೋವಿಡ್ ಸಂಕಷ್ಟ ಮತ್ತು ಲಾಕ್​ಡೌನ್ ಇವೆರಡರ ಮಧ್ಯೆ ಜನರು ಒದ್ದಾಡುತ್ತಿದ್ದಾಗ ಅವರ ನೆರವಿಗಾಗಿ ಧಾವಿಸಿದ್ದ ಸೋನು, ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು ಬಸ್ ವ್ಯವಸ್ಥೆ ಮಾಡಿದ್ದರು. ಯಾರೊಬ್ಬರೂ ಸಹಾಯ ಕೇಳಿದರೆ ಸೋನು ಇಲ್ಲ ಎನ್ನುತ್ತಿರಲಿಲ್ಲ. ಯಾವುದೇ ಹಮ್ಮು ಬಿಮ್ಮು ಇಲ್ಲದೆ ಸಾಮಾನ್ಯ ಜನರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಜನರ ನೆರವಿಗೆ ನಿಂತಿದ್ದ ಈ ನಟ ಇತ್ತೀಚೆಗೆ ವಿಡಿಯೊವೊಂದನ್ನು ಶೇರ್ ಮಾಡಿದ್ದಾರೆ.

‘ಸೋನು ಕಾ ಢಾಬಾ’ ಎಂಬ ಶೀರ್ಷಿಕೆಯಲ್ಲಿ ಟ್ವೀಟ್ ಮಾಡಿರುವ ಈ ವಿಡಿಯೊದಲ್ಲಿ ಸೋನು ಗೋಧಿ ಹಿಟ್ಟು ಲಟ್ಟಿಸಿ ತಂದೂರಿ ರೋಟಿ ಮಾಡುತ್ತಿರುವ ದೃಶ್ಯ ಇದೆ. ತಂದೂರಿ ಒಲೆಯಲ್ಲಿ ರೊಟ್ಟಿ ಬೇಯಿಸಿದ ನಂತರ ನನಗಿಂತ ಚೆನ್ನಾಗಿ ಯಾರೂ ತಂದೂರಿ ರೋಟಿ ಮಾಡಲಾರರು, ನಿಮಗೆ ಇದನ್ನು ತಿನ್ನಬೇಕು ಅನಿಸಿದರೆ ಬೇಗ ಬನ್ನಿ ಎಂದಿದ್ದಾರೆ. ಸೋನು ಸೂದ್ ಅವರ ಈ ವಿಡಿಯೊ ವೈರಲ್ ಆಗಿದ್ದು, ಜನರು ರೋಟಿ ಮಾಡುವ ವಿಧಾನ ನೋಡಿ ಭೇಷ್ ಅಂದಿದ್ದಾರೆ.

ಈ ಹಿಂದೆ ಬಟ್ಟೆ ಹೊಲಿಯುತ್ತಿರುವ ವಿಡಿಯೊವೊಂದನ್ನು ಸೋನು ಟ್ವೀಟ್ ಮಾಡಿದ್ದರು. ಸೋನು ಸೂದ್ ಟೈಲರ್ ಶಾಪ್. ಇಲ್ಲಿ ಉಚಿತವಾಗಿ ಬಟ್ಟೆ ಹೊಲಿದುಕೊಡಲಾಗುತ್ತದೆ. ಹೊಲಿದದ್ದು ಪ್ಯಾಂಟ್ ಬದಲು ಚಡ್ಡಿ ಆದರೆ ಅದಕ್ಕೆ ನಾನು ಜವಾಬ್ದಾರನಲ್ಲ ಎಂದು ಈ ವಿಡಿಯೊಗೆ ಶೀರ್ಷಿಕೆ ನೀಡಿದ್ದರು.

ಐ ಆ್ಯಮ್​ ನೋ​ ಮೆಸ್ಸಿಯಾ
ನಟ ಸೋನು ಸೂದ್​ ಲಾಕ್​ಡೌನ್ ಸಂದರ್ಭದಲ್ಲಿ ತಮಗಾದ ಅನುಭವವನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ಲೇಖಕಿ ಮೀನಾ ಅಯ್ಯರ ಸಹಭಾಗಿತ್ವದಲ್ಲಿ ಸೋನು ಸೂದ್​ ಬರೆದ ‘ಐ ಆ್ಯಮ್​ ನೋ​ ಮೆಸ್ಸಿಯಾ..’ (I am no Messiah) ಪುಸ್ತಕ, ಹೊಸವರ್ಷದ ಮೊದಲನೇ ದಿನ ಬಿಗ್​ ಬಿ ಅಮಿತಾಬ್​ ಬಚ್ಚನ್​ರ ಕೌನ್ ಬನೇಗಾ ಕ್ರೋರ್​ಪತಿ ಸೆಟ್​ನಲ್ಲಿ ಅನಾವರಣಗೊಂಡಿದೆ.

Messiah ಎಂದರೆ ಉದ್ಧಾರಕ. ಮಹಾಪುರುಷ, ಮಹಾತ್ಮ ಎಂಬ ಅರ್ಥ ಇದೆ. ಕೊರೊನಾ ಲಾಕ್​ಡೌನ್​ನಲ್ಲಿ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿ, ಅವರೆಲ್ಲರ ಕಣ್ಣಲ್ಲೂ ಮಹಾಪುರುಷನೇ ಆಗಿಹೋಗಿರುವ ಸೋನು ಸೂದ್​, ತಮ್ಮ ಅನುಭವ ಹಂಚಿಕೊಂಡ ಪುಸ್ತಕದಲ್ಲಿ ನಾನು ಉದ್ಧಾರಕನಲ್ಲ ಎಂದಿದ್ದಾರೆ. ಈ ಪುಸ್ತಕದ ಹೆಸರೇ ಪುಸ್ತಕದ ಬಗ್ಗೆ ಒಂದು ಕುತೂಹಲ ಮೂಡಿಸುತ್ತದೆ. ವಲಸೆ ಕಾರ್ಮಿಕರಿಗೆ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಾಗ ಭಾವನಾತ್ಮಕವಾಗಿ ತಾವು ಎಷ್ಟು ಸವಾಲುಗಳನ್ನು ಎದುರಿಸಬೇಕಾಯಿತು ಎಂಬುದನ್ನು ಸೋನು ಸೂದ್​ ಪುಸ್ತಕದಲ್ಲಿ ವಿವರಿಸಿದ್ದಾರೆ.

ಪುಸ್ತಕದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸೂನು ಸೂದ್, ಸಹಾಯ ಪಡೆದ ವಲಸೆ ಕಾರ್ಮಿಕರು ನನ್ನನ್ನು ತುಂಬ ಹೊಗಳುತ್ತಿದ್ದಾರೆ. ಅವರ ಪಾಲಿನ ದೇವರೆಂಬಂತೆ ನೋಡುತ್ತಾರೆ. ಆದರೆ ನಾನು ಮಹಾತ್ಮನಲ್ಲ. ನನ್ನ ಹೃದಯ ಹೇಳಿದ್ದನ್ನು ಕೇಳಿದ್ದೇನೆ ಅಷ್ಟೇ. ಒಬ್ಬ ಮನುಷ್ಯನಾಗಿ ಉಳಿದವರಿಗೆ ಸಹಾಯ ಮಾಡುವುದು, ಸಹಾನುಭೂತಿ ತೋರಿಸುವುದು ನನ್ನ ಮತ್ತು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದ್ದರು.

ಐ ಆ್ಯಮ್​ ನೋ​ ಮೆಸ್ಸಿಯಾ ಅಮೆಜಾನ್​ನಲ್ಲಿ ಬಿಡುಗಡೆಯಾದಾಗ  ಸೋನು ಸೂದ್​ ತಮ್ಮ ಕೆಲಸಗಳಿಂದ ಪ್ರಚಾರ ಪಡೆಯಲು ಬಯಸುತ್ತಿದ್ದಾರೆ ಎಂದೂ ಕೆಲವರು ಆರೋಪಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸೋನು ಸೂದ್​ ಮೆಸ್ಸಿಯಾ (ಉದ್ಧಾರಕ) ಎಂದು ನನ್ನನ್ನು ನಾನು ಉಲ್ಲೇಖಿಸಿಕೊಂಡಿದ್ದಕ್ಕೆ ವ್ಯಂಗ್ಯ ಮಾಡಿದ್ದಾರೆ. ಆದರೆ ನಿಜಕ್ಕೂ ನಾನು ಮಹಾಪುರುಷನಲ್ಲ ಎಂದು ಹೇಳಿಕೊಂಡಿದ್ದೇನೆ. ನನ್ನ ಅಭಿಮಾನಿಗಳಿಗೂ ಹಾಗೆ ಕರೆಯದಂತೆ ಹೇಳಿದ್ದೇನೆ. ನನ್ನನ್ನು ನಾನು ಸ್ತುತಿಸಿಕೊಳ್ಳುವ ಜಾಯಮಾನ ನಂದಲ್ಲ. ಅಷ್ಟಕ್ಕೂ ನನ್ನ ಪುಸ್ತಕಗಳು ಒಳ್ಳೆ ರೀತಿಯಲ್ಲಿ ಮಾರಾಟ ಆಗುತ್ತಿವೆ ಎಂದಿದ್ದರು.

ಇದನ್ನೂ ಓದಿ: KBCಯಲ್ಲಿ ತಮ್ಮ ಸಾಮಾಜಿಕ ಸೇವೆ ಬಗ್ಗೆ ಅಮಿತಾಭ್​​ಗೆ ಸೋನು ಸೂದ್ ಹೇಳಿದ್ದೇನು?