ಬಾಲಿವುಡ್ನಲ್ಲೀಗ ಅತ್ಯಂತ ಚಲಾವಣೆಯಲ್ಲಿರುವ ಅಥವಾ ಲಾಕ್ಡೌನ್ ಹೊರತಾಗಿಯೂ ಬಹಳ ಬ್ಯುಸಿಯಾಗಿರುವ ನಟ ಯಾರೆಂದು ಊಹಿಸಬಲ್ಲಿರಾ?
ನಿಮಗೆ ಆಶ್ಚರ್ಯವಾಗಬಹುದು. ಕೊವಿಡ್-19 ಸೋಂಕಿಗೆ ಹೆದರಿ ಬಹಳಷ್ಟು ನಟ–ನಟಿಯರು ತಮ್ಮ ಮನೆಗಳಿಂದ ಆಚೆ ಬರುತ್ತಿಲ್ಲ. ಆದರೆ, ತನ್ನ ಕುಟುಂಬದ ಕೆಲವು ಸದಸ್ಯರೊಂದಿಗೆ ಖುದ್ದು ಸೋಂಕಿಗೊಳಗಾಗಿ ಮೂರು ವಾರಗಳ ಕಾಲ ಮುಂಬೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ ಬಾಲಿವುಡ್ನ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಈಗ ದಿನವಿಡೀ ಕೆಲಸ ಮಾಡಿಕೊಂಡೇ ಇದ್ದಾರೆ.
ಹೌದು, ನಿನ್ನೆಯಷ್ಟೇ(ಅಕ್ಟೋಬರ್ 11) ತಮ್ಮ 78ನೇ ಹುಟ್ಟಹಬ್ಬವನ್ನು ಬಹಳ ಸರಳ ರೀತಿಯಲ್ಲಿ ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲಿ ಆಚರಿಸಿಕೊಂಡ ಬಿಗ್ ಬಿ, ತಮ್ಮ ಅರ್ಧಕ್ಕಿಂತ ಕಡಿಮೆ ವಯಸ್ಸಿನ ನಟರಿಗಿಂತ ಜಾಸ್ತಿ ಬ್ಯುಸಿಯಾಗಿದ್ದಾರೆ.
‘ಕೌನ್ ಬನೇಗಾ ಕರೋಡ್ಪತಿ’ಯ ಹೊಸ ಆವೃತಿ ಈಗಾಗಲೇ ಆರಂಭವಾಗಿರುವುದು ಎಲ್ಲರಿಗೂ ಗೊತ್ತಿದೆ. ಈ ಕಾರ್ಯಕ್ರಮಕ್ಕಾಗಿ ಬಚ್ಚನ್ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಟೆಯವರೆಗೆ ಶೂಟ್ ಮಾಡುತ್ತಾರೆ. ಸತತವಾಗಿ 12 ತಾಸು ಕೆಲಸ ಮಾಡಿದ ನಂತರ ಸ್ವಲ್ಪ ಹೊತ್ತು ಡಬ್ಬಿಂಗ್ ಕೆಲಸದಲ್ಲೂ ತೊಡಗುತ್ತಾರಂತೆ!
ಶತಮಾನದ ಮಹಾನ್ ನಟನಿಗೆ ದಣಿವಾಗುವುದಿಲ್ಲವೇ? ಅಮಿತಾಬ್ ಅವರನ್ನು ಲೀಡ್ ರೋಲ್ನಲ್ಲಿರಿಸಿ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಮನ್ಮೋಹನ್ ದೇಸಾಯಿ ಅವರನ್ನು ಒಮ್ಮೆ ಪತ್ರಕರ್ತರು, ‘ನಿಮ್ಮ ಪ್ರಕಾರ ಜನಪ್ರಿಯತೆಯ ಉತ್ತುಂಗದಲ್ಲಿರುವ ಮೂರು ನಟರು ಯಾರು ಅಂತ ಕೇಳಿದಾಗ, ‘ನಂಬರ್ 1ರಿಂದ 10ರವರೆಗಿನ ಸ್ಥಾನಗಳು ಕೇವಲ ಅಮಿತಾಬ್ ಬಚ್ಚನ್ಗೆ ಸೇರಿದ್ದು, ನಂಬರ್ 11ರಿಂದ ಉಳಿದವರ ಗಣತಿ ಶುರುವಾಗುತ್ತದೆ,’ ಅಂತ ಹೇಳಿದ್ದರು!
ಌಂಗ್ರಿ ಯಂಗ್ಮ್ಯಾನ್ ಅಂಕಿತ ನಾಮದೊಂದಿಗೆ ಬಾಲಿವುಡ್ ಅನ್ನು 5 ದಶಕಗಳಿಂದ ಆಳುತ್ತಿರುವ ಬಿಗ್ ಬಿ ಅವರ ಕ್ರಿಯಾಶೀಲತೆ ಯುವಕರನ್ನು ನಾಚಿಸುತ್ತದೆ. ಯುವ ಮತ್ತು ಹಲವಾರು ಹೆಸರಾಂತ ನಟರು ಅನ್ಲಾಕ್ ಪ್ರಕ್ರಿಯೆ ಹಂತಹಂತವಾಗಿ ಶುರುವಾದಾಗಿನಿಂದ ಕೆಲಸಕ್ಕಾಗಿ ನಿರ್ಮಾಪಕರ ಮನೆಗಳಿಗೆ ಎಡತಾಕುತ್ತಿದ್ದರೆ, ಬಚ್ಚನ್ ಅವರು 2021 ರಲ್ಲೂ ಪುರುಸೊತ್ತಿಲ್ಲದೆ ದುಡಿಯುವಷ್ಟು ಪ್ರಾಜೆಕ್ಟ್ಗಳನ್ನು ಒಪ್ಪಿಕೊಂಡಿದ್ದಾರೆ. ಅವುಗಳಲ್ಲಿ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಜೊತೆ ನಟಿಸುತ್ತಿರುವ ‘ಬ್ರಹ್ಮಾಸ್ತ್ರ’, ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ತಾರಾಗಣದಲ್ಲಿರುವ ವೈಜ್ಞಾನಿಕ ಚಿತ್ರ (ಸೈ–ಫಿ), ‘ಡೆಡ್ಲೀ’ ಹೆಸರಿನ ಕಾಮಿಡಿ ಫಿಲ್ಮ್ ಮೊದಲಾದವು ಸೇರಿವೆ. ಹಾಗೆಯೇ ಶೂಟಿಂಗ್ ಸಂಫೂರ್ಣಗೊಂಡಿರುವ ‘ಝುಂಡ್’ ಮತ್ತು ರೂಮಿ ಜಾಫ್ರಿಯವರ ‘ಚೆಹೆರೆ’ ಸಿನಿಮಾಗಳ ಡಬ್ಬಿಂಗ್ ಕೆಲಸದಲ್ಲಿ ಅವರು ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.
ಮನ್ಮೋಹನ್ ದೇಸಾಯಿಯೊಂದಿಗೆ ಬಿಗ್ ಬಿ
40 ವರ್ಷಗಳ ಹಿಂದೆ ಮನ್ಮೋಹನ್ ದೇಸಾಯಿ ಹೇಳಿದ್ದರಲ್ಲಿ ಏನಾದರೂ ತಪ್ಪಿದೆಯಾ?