ಕೊನೆಗೂ ಫಲಿಸಿತು ಅಭಿಮಾನಿಗಳ ಪ್ರಾರ್ಥನೆ, ವೈದ್ಯರ ಪ್ರಯತ್ನ; ಹಿರಿಯ ನಟ ದಿಲೀಪ್​ ಕುಮಾರ್ ಆಸ್ಪತ್ರೆಯಿಂದ ಡಿಸ್​ಚಾರ್ಜ್​

ಈಗ ಸತತ ಐದು ದಿನಗಳ ಕಾಲ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಫಲಕಾರಿಯಾಗಿದೆ. ಜತೆಗೆ ಸಾವಿರಾರು ಅಭಿಮಾನಿಗಳ ಪ್ರಾರ್ಥನೆ ಕೂಡ ಫಲಿಸಿದೆ.

ಕೊನೆಗೂ ಫಲಿಸಿತು ಅಭಿಮಾನಿಗಳ ಪ್ರಾರ್ಥನೆ, ವೈದ್ಯರ ಪ್ರಯತ್ನ; ಹಿರಿಯ ನಟ ದಿಲೀಪ್​ ಕುಮಾರ್ ಆಸ್ಪತ್ರೆಯಿಂದ ಡಿಸ್​ಚಾರ್ಜ್​
ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆದ ದಿಲೀಪ್​ ಕುಮಾರ್

ಭಾರತೀಯ ಚಿತ್ರರಂಗದ ಹಿರಿಯ ನಟ ದಿಲೀಪ್​ ಕುಮಾರ್​ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಭಾನುವಾರ (ಜೂ.6) ಆಸ್ಪತ್ರೆಗೆ ದಾಖಲಾಗಿದ್ದರು. ಸತತ ಐದು ದಿನಗಳ ಕಾಲ ಚಿಕಿತ್ಸೆ ನೀಡಿದ ನಂತರದಲ್ಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಇಂದು (ಜೂನ್​ 11) ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ದಿಲೀಪ್​ ಕುಮಾರ್ ಪ್ಲೆರಲ್ ಎಫ್ಯೂಷನ್ ಸಮಸ್ಯೆಯಿಂದ ಬಳಲುತ್ತಿದ್ದರು. ವೈದ್ಯಕೀಯ ಭಾಷೆಯಲ್ಲಿ ಪ್ಲೆರಲ್ ಎಫ್ಯೂಷನ್ ಎಂದರೆ ಶ್ವಾಸಕೋಶದಲ್ಲಿ ನೀರು ತುಂಬುವುದು ಎಂದರ್ಥ. ಈಗ ಸತತ ಐದು ದಿನಗಳ ಕಾಲ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಫಲಕಾರಿಯಾಗಿದೆ. ಜತೆಗೆ ಸಾವಿರಾರು ಅಭಿಮಾನಿಗಳ ಪ್ರಾರ್ಥನೆ ಕೂಡ ಫಲಿಸಿದೆ.

ದೇಶದೆಲ್ಲೆಡೆ ಕೊರೊನಾ ವೈರಸ್​ ಎರಡನೇ ಅಲೆ ಜೋರಾಗಿದೆ. ಈ ಸಂದರ್ಭದಲ್ಲಿ ದಿಲೀಪ್​ ಕುಮಾರ್​ ಆರೋಗ್ಯದಲ್ಲಿ ಏರುಪೇರು ಆಗಿದ್ದಕ್ಕೆ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಕೊನೆಗೂ ಈ ಆತಂಕ ದೂರವಾದಂತಾಗಿದೆ. ಈ ಮಧ್ಯೆ ಅನೇಕರು ವಾಟ್ಸ್​ಆ್ಯಪ್​ನಲ್ಲಿ ದಿಲೀಪ್​ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಿಬಿಟ್ಟಿದ್ದರು. ಈ ಬಗ್ಗೆ ಅವರ ಪತ್ನಿ ಸೈರಾ ಬಾನು ಸ್ಪಷ್ಟನೆ ನೀಡಿದ್ದರು.

1944ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ದಿಲೀಪ್​ ಕುಮಾರ್​ ಅವರು 5 ದಶಕಗಳ ಕಾಲ ಸಕ್ರಿಯರಾಗಿದ್ದರು. ಕೊಹಿನೂರ್​, ಮುಘಲ್-ಏ-ಆಜಮ್​, ಶಕ್ತಿ, ನಯಾ ದೌರ್​, ರಾಮ್​ ಔರ್​ ಶ್ಯಾಮ್​ ಮುಂತಾದ ಕ್ಲಾಸಿಕ್​ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ದಿಲೀಪ್​ ಕುಮಾರ್​ ನಟಿಸಿದ ಕೊನೇ ಸಿನಿಮಾ ‘ಖಿಲಾ’1998ರಲ್ಲಿ ತೆರೆಕಂಡಿತು. ಆ ನಂತರ ಅವರು ಯಾವುದೇ ಚಿತ್ರದಲ್ಲೂ ಬಣ್ಣ ಹಚ್ಚಿಲ್ಲ.

ಇದನ್ನೂ ಓದಿ: ನಟ ದಿಲೀಪ್​ ಕುಮಾರ್​ ಬಗ್ಗೆ ವಾಟ್ಸ್​ಆ್ಯಪ್​ನಲ್ಲಿ ಹರಿದಾಡುತ್ತಿದೆ ಕೆಟ್ಟ ಸುದ್ದಿ; ಪತ್ನಿ ನೀಡಿದ ಸ್ಪಷ್ಟನೆ ಏನು?