ಶ್ರೀದೇವಿ ಜೊತೆಗಿನ ಚಿತ್ರದ ಶೂಟಿಂಗ್​ಗೆ ಬರುವಾಗ ಐಷಾರಾಮಿ ಕಾರು ಬೇಡ ಎಂದಿದ್ದ ನಟ ಅಜಿತ್​

ಇಂಗ್ಲಿಷ್​ ವಿಂಗ್ಲಿಷ್​ ಚಿತ್ರದ ಹಿಂದಿ ಅವತರಣಿಕೆಯಲ್ಲಿ ಅಮಿತಾಭ್​ ಬಚ್ಚನ್​ ಒಂದು ಅತಿಥಿ ಪಾತ್ರ ಮಾಡಿದ್ದರು. ತಮಿಳಿನಲ್ಲಿ ಆ ಪಾತ್ರಕ್ಕೆ ಅಜಿತ್​ ಬಣ್ಣ ಹಚ್ಚಿದ್ದರು. ಅಜಿತ್​ ಆ ಪಾತ್ರವನ್ನು ಒಪ್ಪಿಕೊಂಡಿದ್ದು ನಿರ್ದೇಶಕಿ ಗೌರಿ ಶಿಂದೆ ಅವರಿಗೆ ಸಖತ್​ ಖುಷಿ ನೀಡಿತ್ತು.

  • TV9 Web Team
  • Published On - 11:24 AM, 2 May 2021
ಶ್ರೀದೇವಿ ಜೊತೆಗಿನ ಚಿತ್ರದ ಶೂಟಿಂಗ್​ಗೆ ಬರುವಾಗ ಐಷಾರಾಮಿ ಕಾರು ಬೇಡ ಎಂದಿದ್ದ ನಟ ಅಜಿತ್​
ಅಜಿತ್​ - ಶ್ರೀದೇವಿ

ನಟ ಅಜಿತ್​ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಭರ್ಜರಿ ಆ್ಯಕ್ಷನ್​ ಸಿನಿಮಾಗಳ ಮೂಲಕ ಅವರು ಜನಮನ ಗೆದ್ದಿದ್ದಾರೆ. ಕಾಲಿವುಡ್​ ಮಾತ್ರವಲ್ಲದೆ ಬಾಲಿವುಡ್​ ಮಂದಿಗೂ ಅಜಿತ್​ ಬಗ್ಗೆ ಅಪಾರ ಗೌರವ. ಮೇ 1ರಂದು ಅಜಿತ್​ ಹುಟ್ಟುಹಬ್ಬ. ಈ ವರ್ಷ ಅವರು 50ನೇ ವಸಂತಕ್ಕೆ ಕಾಲಿಟ್ಟರು ಎಂಬುದು ವಿಶೇಷ. ಅವರ ಗುಣಗಳ ಬಗ್ಗೆ ಬಾಲಿವುಡ್​ ನಿರ್ದೇಶಕಿ ಗೌರಿ ಶಿಂಧೆ ಕೊಂಡಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಜಿತ್​ ಬಗ್ಗೆ ಗೌರಿ ಶಿಂದೆ ಮಾತನಾಡಿದ್ದಾರೆ.

ಗೌರಿ ಶಿಂದೆ ಮೊದಲ ಬಾರಿಗೆ ನಿರ್ದೇಶನ ಮಾಡಿದ ಚಿತ್ರ ‘ಇಂಗ್ಲಿಷ್​ ವಿಂಗ್ಲಿಷ್​’. ಆ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದವರು ನಟಿ ಶ್ರೀದೇವಿ. ಇಂಗ್ಲಿಷ್​ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಸ್ವಂತ ಕುಟುಂಬದವರಿಂದಲೇ ಕಣೆಗಣಿಸಲ್ಪಡುವ ಗೃಹಿಣಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಆ ಚಿತ್ರ ಹಿಂದಿ ಮತ್ತು ತಮಿಳುನಲ್ಲಿ ಮೂಡಿಬಂದಿತ್ತು.

ಇಂಗ್ಲಿಷ್​ ವಿಂಗ್ಲಿಷ್​ ಚಿತ್ರದ ಹಿಂದಿ ಅವತರಣಿಕೆಯಲ್ಲಿ ಅಮಿತಾಭ್​ ಬಚ್ಚನ್​ ಒಂದು ಅತಿಥಿ ಪಾತ್ರ ಮಾಡಿದ್ದರು. ತಮಿಳಿನಲ್ಲಿ ಆ ಪಾತ್ರಕ್ಕೆ ಅಜಿತ್​ ಬಣ್ಣ ಹಚ್ಚಿದ್ದರು. ಅಜಿತ್​ ಆ ಪಾತ್ರವನ್ನು ಒಪ್ಪಿಕೊಂಡಿದ್ದು ನಿರ್ದೇಶಕಿ ಗೌರಿ ಶಿಂದೆ ಅವರಿಗೆ ಸಖತ್​ ಖುಷಿ ನೀಡಿತ್ತು. ಆ ಮೂಲಕ ಅವರಿಗೆ ಅಜಿತ್​ ಜೊತೆ ಒಡನಾಡುವ ಅವಕಾಶ ಸಿಕ್ಕಿತ್ತು. ಶೂಟಿಂಗ್​ ಸಂದರ್ಭದಲ್ಲಿ ಅಜಿತ್​ ಹೇಗಿದ್ದರು ಎಂಬುದನ್ನು ಗೌರಿ ಶಿಂದೆ ವಿವರಿಸಿದ್ದಾರೆ.

‘ಅಜಿತ್​ ಅಷ್ಟು ದೊಡ್ಡ ಸ್ಟಾರ್​ ನಟನಾಗಿದ್ದರೂ ಅವರಲ್ಲಿ ಕಿಂಚಿತ್ತೂ ಅಹಂ ಭಾವ ಇಲ್ಲ ಎಂಬುದು ಗೌರಿ ಶಿಂದೆ ಅಭಿಪ್ರಾಯ. ‘ಸೆಟ್​ನಲ್ಲಿ ಅವರು ಆಡುತ್ತಿದ್ದ ಪ್ರತಿ ಮಾತಿನಲ್ಲಿಯೂ ವಿನಯತೆ ಕಾಣುತ್ತಿತ್ತು. ತುಂಬ ಒಳ್ಳೆಯ ವ್ಯಕ್ತಿ. ನಮ್ಮ ಚಿತ್ರದ ಶೂಟಿಂಗ್​ ಸಲುವಾಗಿ ಅವರು ಮುಂಬೈಗೆ ಬಂದಿದ್ದರು. ಅವರು ದೊಡ್ಡ ಸ್ಟಾರ್​ ಆದ ಕಾರಣ ನಾವು ಅವರನ್ನು ಕರೆದುಕೊಂಡು ಬರಲು ಐಷಾರಾಮಿ ಕಾರು ಕಳಿಸಿದ್ದೆವು. ಆದರೆ ಅದನ್ನು ಅವರು ನಿರಾಕರಿಸಿ ಸಾಮಾನ್ಯ ಕಾರಿನಲ್ಲೇ ಬಂದರು’ ಎಂದು ಆ ದಿನವನ್ನು ನೆನಪು ಮಾಡಿಕೊಂಡಿದ್ದಾರೆ ಗೌರಿ.

‘ಅವರು ಚಿಕ್ಕ ಕಾರಿನಲ್ಲಿ ಬಂದಿದ್ದು ನೋಡಿ ನಮಗೆಲ್ಲ ಅಚ್ಚರಿ ಆಯಿತು. ಯಾಕೆ ಹೀಗೆ ಎಂದು ಕೇಳಿದ್ದಕ್ಕೆ, ತೋರ್ಪಡಿಕೆ ತಮಗೆ ಇಷ್ಟ ಇಲ್ಲ ಎಂದು ಅವರು ಹೇಳಿದ್ದರು. ಅವರದ್ದು ಅತಿಥಿ ಪಾತ್ರವಾಗಿದ್ದರಿಂದ ಅವರೊಂದಿಗೆ ಕಳೆಯಲು ನಮಗೆ ಸಿಕ್ಕ ಸಮಯ ತುಂಬ ಕಡಿಮೆ. ಶ್ರೀದೇವಿ ಬಗ್ಗೆ ಅವರು ಅಪಾರ ಗೌರವವನ್ನು ಹೊಂದಿದ್ದರು’ ಎಂದು ಗೌರಿ ಶಿಂದೆ ಹೇಳಿದ್ದಾರೆ. ಗೌರಿಗೆ ಆ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​ ಮತ್ತು ಅಜಿತ್​ ಅವರಂತಹ ಸೂಪರ್​ ಸ್ಟಾರ್​ಗಳ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕಾಗಿ ತಮ್ಮನ್ನು ತಾವು ಲಕ್ಕಿ ಎಂದು ಅವರು ಕರೆದುಕೊಳ್ಳುತ್ತಾರೆ.

ಇದನ್ನೂ ಓದಿ:

Viral Video: ಅಭಿಮಾನಿಯ ಫೋನ್ ಕಿತ್ತುಕೊಂಡ ನಟ ಅಜಿತ್; ಚುನಾವಣಾ ಮತಗಟ್ಟೆಯಲ್ಲಿ ನಡೆದಿದ್ದೇನು?

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ ಜೊತೆ ಸುತ್ತಾಡುತ್ತಿರುವ ಹುಡುಗ ಯಾರು? ಫೋಟೋ ವೈರಲ್​