ಸೀತೆ ಪಾತ್ರಕ್ಕೆ 12 ಕೋಟಿ ಕೇಳಿದ್ರಾ ಕರೀನಾ ಕಪೂರ್​ ಖಾನ್​? ವಿಷ್ಯ ಬೇರೆಯೇ ಇದೆ ಅಂತಿವೆ ಮೂಲಗಳು

Kareena Kapoor Khan: ಸೀರಿಯಲ್​, ಸಿನಿಮಾ, ವೆಬ್​ ಸಿರೀಸ್​ನಲ್ಲೂ ರಾಮಾಯಣ ಮೂಡಿಬಂದಿದೆ. ಹಾಗಿದ್ದರೂ ಮತ್ತೊಮ್ಮೆ ಮೆಗಾ ಬಜೆಟ್​ನಲ್ಲಿ ರಾಮಾಯಣದ ಕಥೆಯನ್ನು ತೆರೆ ಮೇಲೆ ತರಲು ಬಾಲಿವುಡ್​ನಲ್ಲಿ ಮಾತುಕತೆ ನಡೆಯುತ್ತಿದೆ.

  • Publish Date - 5:09 pm, Thu, 10 June 21 Edited By: Rajesh Duggumane
ಸೀತೆ ಪಾತ್ರಕ್ಕೆ 12 ಕೋಟಿ ಕೇಳಿದ್ರಾ ಕರೀನಾ ಕಪೂರ್​ ಖಾನ್​? ವಿಷ್ಯ ಬೇರೆಯೇ ಇದೆ ಅಂತಿವೆ ಮೂಲಗಳು
ಕರೀನಾ ಕಪೂರ್​, ಸೈಫ್​ ಅಲಿ ಖಾನ್​

‘ಆದಿಪುರುಷ್​’ ಸಿನಿಮಾದಲ್ಲಿ ನಟ ಸೈಫ್​ ಅಲಿ ಖಾನ್​ ಅವರು ರಾವಣನ ಪಾತ್ರ ಮಾಡುತ್ತಿದ್ದಾರೆ. ರಾಮಾಯಣದ ಪಾತ್ರಗಳ ಬಗ್ಗೆ ಅವರು ಹೇಳಿಕೆ ನೀಡಿ ಈ ಹಿಂದೆ ಕಾಂಟ್ರವರ್ಸಿ ಮಾಡಿಕೊಂಡಿದ್ದರು. ಈಗ ಅವರ ಪತ್ನಿ ಕರೀನಾ ಕಪೂರ್​ ಖಾನ್​ ಅವರು ಕೂಡ ರಾಮಾಯಣಕ್ಕೆ ಸಂಬಂಧಿಸಿದಂತೆ ಸುದ್ದಿ ಆಗುತ್ತಿದ್ದಾರೆ. ರಾಮಾಯಣದ ಕಥೆ ಆಧರಿಸಿ ಬಾಲಿವುಡ್​ನಲ್ಲಿ ಸಿದ್ಧ ಆಗಬೇಕಿರುವ ಬಿಗ್​ ಬಜೆಟ್​ ಸಿನಿಮಾದಲ್ಲಿ ಸೀತೆ ಪಾತ್ರ ಮಾಡೋಕೆ ಕರೀನಾ ಕಪೂರ್​ ಬರೋಬ್ಬರಿ 12 ಕೋಟಿ ರೂ. ಸಂಭಾವನೆ ಕೇಳಿದ್ದಾರೆ ಎಂಬ ಗುಸುಗುಸು ಹಬ್ಬಿದೆ.

ರಾಮಾಯಣದ ಕಥೆಯನ್ನು ಈಗಾಗಲೇ ಜನರು ಹಲವು ರೂಪಗಳಲ್ಲಿ ತಿಳಿದುಕೊಂಡಿದ್ದಾರೆ. ಸೀರಿಯಲ್​, ಸಿನಿಮಾ, ವೆಬ್​ ಸಿರೀಸ್​ನಲ್ಲೂ ರಾಮಾಯಣ ಮೂಡಿಬಂದಿದೆ. ಹಾಗಿದ್ದರೂ ಮತ್ತೊಮ್ಮೆ ಮೆಗಾ ಬಜೆಟ್​ನಲ್ಲಿ ರಾಮಾಯಣ ಕಥೆಯನ್ನು ತೆರೆ ಮೇಲೆ ತರಲು ಬಾಲಿವುಡ್​ನಲ್ಲಿ ಮಾತುಕತೆ ನಡೆಯುತ್ತಿದೆ. ಆ ಚಿತ್ರದ ಸೀತೆ ಪಾತ್ರಕ್ಕೆ ಕರೀನಾಗೆ ಆಫರ್​ ನೀಡಲಾಗಿತ್ತು. ಆದರೆ ಅವರು 12 ಕೋಟಿ ರೂ. ಸಂಭಾವನೆ ಕೇಳಿದ್ದರಿಂದ, ಅಷ್ಟು ಕೊಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವರನ್ನು ತಂಡದಿಂದ ಕೈ ಬಿಡಲಾಯಿತು ಎಂಬ ಗಾಸಿಪ್​ ಹರಿದಾಡುತ್ತಿದೆ.

ಇದೆಲ್ಲ ನಿಜವೇ ಎಂದು ಸಿನಿಮಾ ಕಥೆಗಾರ ವಿಜಯೇಂದ್ರ ಪ್ರಸಾದ್​ ಅವರನ್ನು ಕೇಳಿದರೆ, ‘ಇಲ್ಲ ಇಲ್ಲ’ ಎನ್ನುವ ಉತ್ತರ ನೀಡಿದ್ದಾರೆ ಎಂದು ಕೆಲವು ಕಡೆ ವರದಿ ಆಗಿದೆ. ಮೂಲಗಳ ಪ್ರಕಾರ, ಕರೀನಾಗೆ ಈ ಆಫರ್​ ನೀಡಲಾಗಿಲ್ಲ. ಅವರು ಯಾವುದೇ ಕಾರಣಕ್ಕೂ ಸೀತೆಯ ಪಾತ್ರಕ್ಕೆ ಸೂಕ್ತ ಆಗುವುದಿಲ್ಲ. ಅದರಲ್ಲೂ 12 ಕೋಟಿ ಸಂಭಾವನೆ ಕೊಡಲು ಸಾಧ್ಯವೇ ಇಲ್ಲ ಎಂದು ಚಿತ್ರತಂಡದವರು ನಕ್ಕಿದ್ದಾರಂತೆ.

ಸದ್ಯ ಕರೀನಾ ಎರಡನೇ ಮಗುವಿನ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ಮಗುವಿಗೆ ಜನ್ಮ ನೀಡುವುದಕ್ಕೂ ಮುನ್ನ ಅವರು ಆಮೀರ್​ ಖಾನ್​ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇದೆ. ಲಾಕ್​ಡೌನ್​ ಕಾರಣಕ್ಕಾಗಿ ಚಿತ್ರದ ಕೆಲಸಗಳು ತಡವಾಗಿವೆ. ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಚಿತ್ರದ ಹಿಂದಿ ರಿಮೇಕ್​ ಆಗಿ ‘ಲಾಲ್​ ಸಿಂಗ್​ ಚಡ್ಡಾ’ ಮೂಡಿಬರುತ್ತಿದೆ.

ಇದನ್ನೂ ಓದಿ:

ಕರೀನಾ ತೊಟ್ಟ ಮಾಸ್ಕ್​ ಬೆಲೆ ಇಷ್ಟೊಂದಾ? ಐಟಿ ಮಂದಿಯ ವೇತನವೂ ಇಷ್ಟಿರಲ್ಲ ಎಂದ ಫ್ಯಾನ್ಸ್​​

ಎರಡನೇ ಮಗು ಜನನದ ಬಳಿಕ ಮೊದಲ ಬಾರಿಗೆ ಫೋಟೋ ಹಂಚಿಕೊಂಡ ಕರೀನಾ ಕಪೂರ್; ಏನು ಹೇಳಿದ್ದಾರೆ?