Ram Gopal Varma Top 5 Movies: ಸಿನಿಮಾ ರಂಗದ ದೈತ್ಯ ಪ್ರತಿಭೆ ರಾಮ್ ಗೋಪಾಲ್ ವರ್ಮಾರ 5 ವಿಲಕ್ಷಣ ಸಿನಿಮಾಗಳಿವು

ಹೊಸ ಅಲೆಯ ಭಾರತೀಯ ಸಿನಿಮಾ, ಕಡಿಮೆ ಬಂಡವಾಳದ ಸಿನಿಮಾಗಳು, ಸಣ್ಣ ಅವಧಿಯ ಸಿನಿಮಾಗಳು, ಒಂದೇ ಮನೆಯಲ್ಲಿ, ಒಂದೆರಡು ಪಾತ್ರಗಳನ್ನಿಟ್ಟುಕೊಂಡು ತಯಾರಾದ ಸಿನಿಮಾಗಳು.. ಹೀಗೇ ಇಂತಹ ಹಲವು ಮೊದಲುಗಳಿಗೆ ರಾಮ್​ ಗೋಪಾಲ್ ವರ್ಮಾ ಕಾರಣರು ಎಂದು ಗುರುತಿಸಲಾಗುತ್ತದೆ.

  • TV9 Web Team
  • Published On - 7:35 AM, 7 Apr 2021
Ram Gopal Varma Top 5 Movies: ಸಿನಿಮಾ ರಂಗದ ದೈತ್ಯ ಪ್ರತಿಭೆ ರಾಮ್ ಗೋಪಾಲ್ ವರ್ಮಾರ 5 ವಿಲಕ್ಷಣ ಸಿನಿಮಾಗಳಿವು
ರಾಮ್ ಗೋಪಾಲ್ ವರ್ಮಾ ಹಾಗೂ ಅಪ್ಸರಾ ರಾಣಿ, ಡಿ ಕಂಪೆನಿ ಸಿನಿಮಾ ಶೂಟಿಂಗ್ ವೇಳೆ (ಚಿತ್ರ: ಆರ್​ಜಿವಿ ಟ್ವಿಟರ್ ಹ್ಯಾಂಡಲ್)

ಆರ್​ಜಿವಿ (RGV) ಎಂದೇ ಖ್ಯಾತಿಗಳಿಸಿರುವ ರಾಮ್ ಗೋಪಾಲ್ ವರ್ಮಾ ಭಾರತೀಯ ಸಿನಿಮಾರಂಗದ ದೈತ್ಯ ಪ್ರತಿಭೆ ಎಂದರೆ ತಪ್ಪಲ್ಲ. ಸಿನಿಮಾ ನಿರ್ದೇಶಕ, ಬರಹಗಾರ ಹಾಗೂ ಸಂಭಾಷಣೆಕಾರನಾಗಿ ಅದ್ಭುತ ಸಿನಿಮಾಗಳ ಜೊತೆಗೆ ಅಷ್ಟೇ ವಿವಾದಾತ್ಮಕ-ವಿಲಕ್ಷಣ ಸಿನಿಮಾಗಳನ್ನೂ ಚಿತ್ರರಂಗಕ್ಕೆ ಕೊಟ್ಟವರು. ತೆಲುಗು, ಹಿಂದಿ ಸಿನಿರಂಗದಲ್ಲಿ ಒಂದೊಮ್ಮೆ ಭರ್ಜರಿಯಾಗಿ ಮೆರೆದ ನಿರ್ದೇಶಕ ಈಗ ತಮ್ಮದೇ ಲೋಕ, ಆರ್​ಜಿವಿ ವರ್ಲ್ಡ್ ಥಿಯೇಟರ್​ನಲ್ಲಿ ಮುಳುಗೇಳುತ್ತಿದ್ದಾರೆ. ಮನಸಾದಾಗಲೆಲ್ಲಾ ಹೊಸ ಸಿನಿಮಾಗಳನ್ನು ಘೋಷಿಸಿಕೊಂಡು, ಇಷ್ಟ ಬಂದಂತೆ ಸಿನಿಮಾ ರಿಲೀಸ್ ಮಾಡಿ, ತಮ್ಮನ್ನು ತಾವು ಸಿನಿಮಾ ರಂಗದಿಂದ ಪ್ರತ್ಯೇಕಿಸಿಕೊಂಡಿದ್ದಾರೆ. ಏನೇ ಅಂದರೂ ರಾಮ್​ ಗೋಪಾಲ್ ವರ್ಮಾರನ್ನು ಟೀಕಿಸಬಹುದೇ ವಿನಃ ನಿರ್ಲಕ್ಷಿಸುವಂತಿಲ್ಲ.

ಹೊಸ ಅಲೆಯ ಭಾರತೀಯ ಸಿನಿಮಾ, ಕಡಿಮೆ ಬಂಡವಾಳದ ಸಿನಿಮಾಗಳು, ಸಣ್ಣ ಅವಧಿಯ ಸಿನಿಮಾಗಳು, ಒಂದೇ ಮನೆಯಲ್ಲಿ, ಒಂದೆರಡು ಪಾತ್ರಗಳನ್ನಿಟ್ಟುಕೊಂಡು ತಯಾರಾದ ಸಿನಿಮಾಗಳು.. ಹೀಗೇ ಇಂತಹ ಹಲವು ಮೊದಲುಗಳಿಗೆ ರಾಮ್​ ಗೋಪಾಲ್ ವರ್ಮಾ ಕಾರಣರು ಎಂದು ಗುರುತಿಸಲಾಗುತ್ತದೆ. ಅಂಥ ಆರ್​ಜಿವಿ ಹುಟ್ಟಿದ್ದು ಏಪ್ರಿಲ್ 7, 1962ರಂದು. ಅಂದರೆ ರಾಮ್​ ಗೋಪಾಲ್ ವರ್ಮಾಗೆ ಇಂದಿಗೆ 59 ವರ್ಷ.

ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ ಕೆಲವು ವಿಲಕ್ಷಣ ಅಥವಾ ವಿಶೇಷ ಅನಿಸುವಂಥ ಸಿನಿಮಾಗಳ ಪಟ್ಟಿಯನ್ನು ನೋಡೋಣ:
ಡಾರ್ಲಿಂಗ್: ಡಾರ್ಲಿಂಗ್ ಎಂಬುದು ಹಾರರ್, ರೊಮ್ಯಾನ್ಸ್ ಮತ್ತು ಥ್ರಿಲ್ಲರ್ ಜಾನರ್​ನ ಸಿನಿಮಾ. ರಾಮ್ ಗೋಪಾಲ್ ವರ್ಮಾ ಮಾತ್ರ ಕೊಡಬಹುದಾದ ಚಿತ್ರವಿದು ಎಂದರೆ ತಪ್ಪಿಲ್ಲ. ವಿವಾಹಿತ ಹುಡುಗ ತನ್ನ ಸೆಕ್ರೆಟರಿ ಜೊತೆಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರದೊಂದಿಗೆ ಶುರುವಾಗುವ ಕಥೆ ಇದು. ಸೆಕ್ರೆಟರಿ ತಾನು ಗರ್ಭಿಣಿ ಎಂಬ ವಿಚಾರ ಹೇಳಿಕೊಂಡಾಗ ಆತನಿಗೆ ಇಕ್ಕಳಕ್ಕೆ ಸಿಲುಕಿದ ಪರಿಸ್ಥಿತಿ. ಆದರೆ, ಇಬ್ಬರೂ ಹುಡುಗಿಯರನ್ನು ಆತ ಹೇಗೆ ಸಂಭಾಳಿಸಿಕೊಂಡು ಹೋಗುತ್ತಾನೆ? ಮುಂದೇನು? ಎಂಬುದು ಸಿನಿಮಾ. ಇಶಾ ಡಿಯೊಲ್, ಫರ್ದೀನ್ ಖಾನ್ ಮತ್ತು ಇಶಾ ಕೋಪಿಕರ್ ಅಭಿನಯದ ಸಿನಿಮಾವಿದು.

ಮೇರಿ ಬೇಟಿ ಸನ್ನಿ ಲಿಯೋನ್ ಬನ್​ನಾ ಚಾಹ್ತೀ ಹೈ: ಈ ಸಿನಿಮಾದ ಕತೆ ಏನೆಂದು ಚಿತ್ರದ ಹೆಸರು ನೋಡಿಯೇ ನೀವು ಅಂದಾಜಿಸಿರಬಹುದು. ಮನೆಯ ಹಾಲ್​ನಲ್ಲಿ ಪೋಷಕರ ಜೊತೆ ಮಗಳು ಕುಳಿತು ಮಾತನಾಡುವ ದೃಶ್ಯದೊಂದಿಗೆ ಈ ಸಿನಿಮಾ ಶುರುವಾಗುತ್ತದೆ. ಅಲ್ಲಿ ಮಗಳು ತನ್ನ ಹೆತ್ತವರಿಗೆ, ತಾನೂ ಸನ್ನಿ ಲಿಯೋನ್​ನಂತೆ ಆಗಬೇಕು ಎಂದು ಹೇಳುತ್ತಾಳೆ. ಮುಂದಿನ ಕತೆ ಏನು ಎಂದು ತಲೆ ಕೆಟ್ಟರೆ ಸಿನಿಮಾ ನೋಡಿ. ನೈನಾ ಗಂಗೂಲಿ, ಮಕರಂದ್ ದೇಶ್​ಪಾಂಡೆ ಮತ್ತು ದಿವ್ಯಾ ಜಗದಾಳೆ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಐಸ್​ಕ್ರೀಮ್: ಇದೊಂದು ಸಂಪೂರ್ಣ ಹಾರರ್, ಫಿಕ್ಷನ್ ಸಿನಿಮಾವಾಗಿದೆ. ಈ ಸಿನಿಮಾದ ಪಾತ್ರವು ಐಸ್​ಕ್ರೀಮ್ ತಿನ್ನುವ ಚಟಕ್ಕೆ ಬಿದ್ದಿರುತ್ತದೆ. ಹಾಗೂ ರಾತ್ರಿ ದುಃಸ್ವಪ್ನಗಳನ್ನು ಕಾಣುತ್ತಿರುತ್ತದೆ. ನವ್​ದೀಪ್ ಮತ್ತು ತೇಜಸ್ವಿ ಮಡಿವಾಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಡರ್ನಾ ಮನಾ ಹೈ: ಹಾರರ್ ಹಾಗೂ ಡ್ರಾಮಾ ಕಥಾಹಂದರ ಹೊಂದಿರುವ ಆರು ಕಿರು ಕತೆಗಳ ಸಿನಿಮಾ ಇದು. ಎಲ್ಲಾ ಕತೆಗಳೂ ಕುತೂಹಲಕಾರಿಯೂ ಅಷ್ಟೇ ವಿಲಕ್ಷಣವೂ ಆಗಿದೆ. ಏಳು ಗೆಳೆಯರು ತಮ್ಮ ಕಾರ್ ಕೆಟ್ಟುಹೋಗಿ ಕಾಡಿನ ಒಳಗೆ ಸಿಕ್ಕಿಬೀಳುತ್ತಾರೆ. ಅವರಲ್ಲಿ ಒಬ್ಬನ ಹೊರತಾಗಿ ಉಳಿದ ಎಲ್ಲರಿಗೂ ಒಂದು ಅನಾಥ ಮನೆ ಆಶ್ರಯ ಸಿಗುತ್ತದೆ. ಅವರು ತಮ್ಮ ನಡುವೆ ವಿಚಿತ್ರ ಭಾವ ಉಳಿಸಿಕೊಳ್ಳಲು ಭಯಾನಕ ಮತ್ತು ಅತೀಂದ್ರಿಯ ಶಕ್ತಿಗಳ ಕತೆ ಹೇಳುತ್ತಾರೆ. ಸೈಫ್ ಅಲಿ ಖಾನ್, ವಿವೇಕ್ ಒಬೆರಾಯ್, ಅಫ್ತಾಬ್ ಶಿವ್​ದಾಸನಿ, ಶಿಲ್ಪಾ ಶೆಟ್ಟಿ, ಸಮೀರಾ ರೆಡ್ಡಿ, ಇಶಾ ಕೋಪಿಕರ್, ನಾನಾ ಪಾಟೇಕರ್, ಸೊಹೈಲ್ ಖಾನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಕೌನ್: ಕೌನ್ ಎಂಬುದು 1999ರಲ್ಲಿ ತೆರೆಕಂಡ ಹಾರರ್ ಸಿನಿಮಾ. ಒಬ್ಬಾಕೆ ಹುಡುಗಿ ಒಂದು ಬಂಗಲೆಯೊಳಗೆ ಉಳಿದು ವಿಚಿತ್ರ ಭಯ ಅನುಭವಿಸುವ ಕಥಾನಕವಿದು. ಕೇವಲ ಒಂದು ಮನೆ ಮತ್ತು ಎರಡು ಪಾತ್ರವನ್ನಿಟ್ಟುಕೊಂಡು ತಯಾರಾದ ಸಿನಿಮಾ. ಸುಮಾರು ಹೊತ್ತು ಮನೆಯ ಒಳಗಿನ ಒಂದೇ ಪಾತ್ರದ ಜೊತೆ ಸಾಗುವ ಸಿನಿಮಾ ಬಳಿಕ ಯಾರೋ ಬಂದು ಬಾಗಿಲು ತಟ್ಟುವ ಮೂಲಕ ಎರಡನೇ ಪಾತ್ರ ಕತೆಗೆ ಸೇರುತ್ತದೆ. ಹೀಗೆ ಎರಡು ಪಾತ್ರಗಳ ಒಳ-ಹೊರಗಿನ ವಿಲಕ್ಷಣ ಸಂಭಾಷಣೆ ಈ ಸಿನಿಮಾದ ರೋಚಕತೆ.

ಇದನ್ನೂ ಓದಿ: Apsara Rani: ಬಿಕಿನಿ ತೊಟ್ಟ ಅಪ್ಸರಾ ರಾಣಿ ಬಳಿ ಟವೆಲ್ ಬ್ರ್ಯಾಂಡ್​​​ ಕೇಳಿದ ರಾಮ್​​ ಗೋಪಾಲ್​ ವರ್ಮಾ!

ಇದನ್ನೂ ಓದಿ: ಕನ್ನಡ ಚಿತ್ರರಂಗವನ್ನು ಗಂಭೀರವಾಗಿ ಪರಿಗಣಿಸಲು ಏನು ಕಾರಣ? ರಾಮ್ ಗೋಪಾಲ್ ವರ್ಮಾ ಹೇಳಿದ ಕಾರಣ ಓದಿ..

 

(Ram Gopal Varma : RGV top 5 movies bizarre films by controversial filmmaker)