‘ರಾಮಾಯಣ’ದಲ್ಲಿ ಯಶ್ ಸ್ಕ್ರೀನ್ ಟೈಮ್ ಬಗ್ಗೆ ಸಿಕ್ಕಿತು ಸ್ಪಷ್ಟನೆ
Ramayana movie: ‘ರಾಮಾಯಣ’ ಸಿನಿಮಾ ಭಾರತದ ಅತಿ ದೊಡ್ಡ ಬಜೆಟ್ನ ಸಿನಿಮಾ ಎನಿಸಿಕೊಂಡಿದೆ. ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಗ್ಲಿಂಪ್ಸ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ‘ರಾಮಾಯಣ’ ಸಿನಿಮಾದ ಮೊದಲ ಭಾಗದಲ್ಲಿ ಯಶ್ ಅವರಿಗೆ ಹೆಚ್ಚಿನ ಸ್ಕ್ರೀನ್ಟೈಮ್ ಇಲ್ಲ ಎನ್ನಲಾಗಿತ್ತು. ಆದರೆ ಅದು ಸುಳ್ಳು ಎಂಬ ಸುದ್ದಿ ಹೊರಬಿದ್ದಿದೆ.

ರಣ್ಬೀರ್ ಕಪೂರ್ (Ranbir Kapoor), ಸಾಯಿ ಪಲ್ಲವಿ, ಯಶ್ ಇನ್ನೂ ಹಲವು ಸ್ಟಾರ್ ನಟ-ನಟಿಯರು ನಟಿಸುತ್ತಿರುವ ‘ರಾಮಾಯಣ’ ಸಿನಿಮಾ ಭಾರತದ ಅತಿ ಹೆಚ್ಚು ಬಜೆಟ್ನ ಸಿನಿಮಾ ಎನಿಸಿಕೊಂಡಿದೆ. ಈ ಸಿನಿಮಾ ಎರಡು ಭಾಗಗಳ ಒಟ್ಟು ಬಜೆಟ್ ನಾಲ್ಕು ಸಾವಿರ ಕೋಟಿ ದಾಟಲಿದೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಆಗಿದ್ದು, ನಟ ರಣ್ಬೀರ್ ಕಪೂರ್ ಹಾಗೂ ಯಶ್ ಅವರ ಸಣ್ಣ ಗ್ಲಿಂಪ್ಸ್ ಅನ್ನು ಟೀಸರ್ನಲ್ಲಿ ತೋರಿಸಲಾಗಿದೆ. ಸಿನಿಮಾ ಬಿಡುಗಡೆ ದಿನಾಂಕವನ್ನೂ ಘೋಷಿಸಲಾಗಿದೆ. ಎರಡು ಭಾಗಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಮಾದ ಮೊದಲ ಭಾಗದಲ್ಲಿ ಯಶ್ ಹೆಚ್ಚು ಸಮಯ ತೆರೆ ಮೇಲೆ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗುತ್ತಿದೆ.
ಗ್ಲಿಂಪ್ಸ್ ಬಿಡುಗಡೆ ಆದ ಬಳಿಕ ಈ ರೀತಿಯ ಸುದ್ದಿಯೊಂದು ಹರಿದಾಡಿತ್ತು. ಮೊದಲ ಬಿಡುಗಡೆ ಆಗುವ ಪಾರ್ಟ್ 1 ನಲ್ಲಿ ಯಶ್ ಕೇವಲ 15 ನಿಮಿಷ ಮಾತ್ರವೇ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಮೊದಲ ಭಾಗದಲ್ಲಿ ಶ್ರೀರಾಮ ಪಟ್ಟಾಭಿಷೇಕ ಆ ನಂತರ ರಾಮನ ವನವಾಸದ ಕತೆ ಮಾತ್ರವೇ ಇರಲಿದ್ದು, ಯಶ್ ಪಾತ್ರ ಕೊನೆಯಲ್ಲಿ ಮಾತ್ರವೇ ಬರಲಿದ್ದು, 2027ಕ್ಕೆ ಬಿಡುಗಡೆ ಆಗುವ ಸಿನಿಮಾನಲ್ಲಿ ಯಶ್ ಹೆಚ್ಚು ಸಮಯ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು.
ಆದರೆ ಈಗ ಈ ಸುದ್ದಿ ಸುಳ್ಳೆನ್ನಲಾಗಿದೆ. 2026ರ ನವೆಂಬರ್ನಲ್ಲಿ ಬಿಡುಗಡೆ ಆಗಲಿರುವ ಸಿನಿಮಾನಲ್ಲಿ ಯಶ್ ಪಾತ್ರ 15 ನಿಮಿಷಕ್ಕಿಂತಲೂ ಹೆಚ್ಚಿಗೆ ಇರಲಿದೆ. ರಾಮನ ಕತೆಗೆ ಸಮಾನಾಂತರವಾಗಿ ರಾವಣನ ಕತೆಯನ್ನು ಸಹ ಸಿನಿಮಾದ ಆರಂಭದಿಂದಲೇ ತೋರಿಸಲಾಗುತ್ತದೆಯಂತೆ. ರಾವಣನ ತಪಸ್ಸು, ಶಿವನನ್ನು ಒಲಿಸಿಕೊಂಡ ಬಗೆ ಇನ್ನಿತರೆ ವಿಷಯಗಳನ್ನು ಸಿನಿಮಾದ ಆರಂಭದಿಂದಲೂ ತೋರಿಸಲಾಗುತ್ತದೆ, ಹೀಗಾಗಿ ಯಶ್ ಅವರಿಗೆ ಹೆಚ್ಚಿನ ಸ್ಕ್ರೀನ್ ಟೈಮ್ ಸಿಗಲಿದೆಯಂತೆ.
ಇದನ್ನೂ ಓದಿ:ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
‘ರಾಮಾಯಣ’ ಸಿನಿಮಾ ಅನ್ನು ನಿತೀಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣ ಮಾಡುತ್ತಿರುವುದು ನಮಿತ್ ಮಲ್ಹೋತ್ರಾ ಮತ್ತು ನಟ ಯಶ್. ಸಿನಿಮಾಕ್ಕೆ ಆಸ್ಕರ್ ವಿಜೇತರಾದ ಹಾನ್ಸ್ ಜೈಮರ್ ಮತ್ತು ಎಆರ್ ರೆಹಮಾನ್ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಹಲವಾರು ಆಸ್ಕರ್ ವಿಜೇತ ಸಿನಿಮಾಗಳಿಗೆ ವಿಎಫ್ಎಕ್ಸ್ ಮತ್ತು ಇತರೆ ಗ್ರಾಫಿಕ್ಸ್ ಕೆಲಸಗಳನ್ನು ಮಾಡಿರುವ ವಿಶ್ವದ ನಂಬರ್ 1 ವಿಎಫ್ಎಕ್ಸ್ ಸಂಸ್ಥೆ ಡಿಎನ್ಇಜಿ ‘ರಾಮಾಯಣ’ ಸಿನಿಮಾಕ್ಕೆ ಕೆಲಸ ಮಾಡಿದೆ. ಸಿನಿಮಾ 2026ರ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಎರಡನೇ ಭಾಗ 2027ರ ದೀಪಾವಳಿಗೆ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




