ಮುಂಬೈ: ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಜೈಲು ಪಾಲಾಗಿದ್ದ ಬಾಲಿವುಡ್ ನಟಿ ಹಾಗೂ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಅಕ್ಟೋಬರ್ 7ರಂದು ಜಾಮೀನು ನೀಡಿತ್ತು. ಆದರೆ, ಇದಕ್ಕೆ ಈಗ ಕೇಂದ್ರ ಸರ್ಕಾರ ಅಪಸ್ವರ ತೆಗೆದಿದೆ. ರಿಯಾ ಜಾಮೀನನ್ನು ರದ್ದು ಮಾಡಬೇಕು ಎಂದು ಸುಪ್ರೀಂಕೋರ್ಟ್ ಬಳಿ ಕೇಂದ್ರ ಸರ್ಕಾರ ಮನವಿ ಮಾಡಿದೆ. ಈ ಅರ್ಜಿ ಮಾರ್ಚ್ 18ರಂದು ವಿಚಾರಣೆಗೆ ಬರುವ ನಿರೀಕ್ಷೆ ಇದೆ. ಸುಶಾಂತ್ ಸಿಂಗ್ ಆತ್ಮಹತ್ಯೆ ನಂತರದಲ್ಲಿ ಸಾಕಷ್ಟು ವಿಚಾರಗಳು ಮುನ್ನೆಲೆಗೆ ಬಂದಿದ್ದವು. ಅವರ ಖಾತೆಯಿಂದ ರಿಯಾ ಹಣ ವರ್ಗಾವಣೆ ಮಾಡಿದ್ದರು ಅನ್ನುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದ ವಿಚಾರಣೆಗೆ ಮುಂದಾದ ಜಾರಿ ನಿರ್ದೇಶನಲಾಯಕ್ಕೆ (ಇಡಿ) ಡ್ರಗ್ ಜಾಲದ ವಾಸನೆ ಸಿಕ್ಕಿತ್ತು. ರಿಯಾ ಡ್ರಗ್ ಡೀಲರ್ಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾದಕ ದ್ರವ್ಯ ನಿಯಂತ್ರಣ ಮಂಡಳಿಗೆ (ಎನ್ಸಿಬಿ) ತಿಳಿಸಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಎನ್ಸಿಬಿ ಅಧಿಕಾರಿಗಳು ರಿಯಾ ಅವರನ್ನು ಸೆಪ್ಟೆಂಬರ್ 8ರಂದು ಬಂಧಿಸಿದ್ದರು. ಒಂದು ತಿಂಗಳ ನಂತರ ಅಂದರೆ ಅಕ್ಟೋಬರ್ 7ರಂದು ಅವರಿಗೆ ಜಾಮೀನು ಸಿಕ್ಕಿತ್ತು.
ರಿಯಾ ಚಕ್ರವರ್ತಿಗೆ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಲಾಗಿತ್ತು. ಅಲ್ಲದೆ ರಿಯಾ ಬಿಡುಗಡೆಯಾದ ನಂತರ 10 ದಿನಗಳ ಕಾಲ ಪೊಲೀಸ್ ಠಾಣೆಗೆ ಬಂದು ಹಾಜರಾತಿಗೆ ಸಹಿ ಮಾಡಬೇಕು. ಪಾಸ್ ಪೋರ್ಟ್ ನೀಡಬೇಕು, ನ್ಯಾಯಾಲಯದ ಅನುಮತಿಯಿಲ್ಲದೆ ವಿದೇಶಕ್ಕೆ ಪ್ರಯಾಣಿಸಬಾರದು ಮತ್ತು ಮುಂಬೈ ತೊರೆಯಬೇಕಾದರೆ ತನಿಖಾಧಿಕಾರಿಗೆ ತಿಳಿಸಬೇಕು ಎಂದು ನ್ಯಾಯಾಲಯ ಸೂಚಿಸಿತ್ತು. ಇದಾದ ನಂತರ ರಿಯಾ ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ.
ಇದನ್ನೂ ಓದಿ:
ಜೈಲಿನಿಂದ ಹೊರ ಬಂದ ರಿಯಾ ಚಕ್ರವರ್ತಿ ಏನು ಮಾಡುತ್ತಿದ್ದಾರೆ ಗೊತ್ತಾ?
ರಿಯಾ ಚಕ್ರವರ್ತಿ ಮುಕ್ತ, ಮುಕ್ತ, ಮುಕ್ತಾ.. ಸಿಕ್ತು ಷರತ್ತು ಬದ್ಧ ಜಾಮೀನು