New Movie Release: ಓ, ದಿಲ್ ಪಸಂದ್, ಯಶೋದಾ, ರಾಣಾ.. ಈ ವಾರ ರಿಲೀಸ್ ಆಗ್ತಿವೆ ಸಿಕ್ಕಾಪಟ್ಟೆ ಸಿನಿಮಾ
New Kannada Movie: ಕಳೆದ ವಾರ ರಿಲೀಸ್ ಆಗಿದ್ದ ಕೆಲವು ಸಿನಿಮಾಗಳು ಉತ್ತಮ ವಿಮರ್ಶೆ ಪಡೆದುಕೊಂಡಿವೆ. ಅವುಗಳ ನಡುವೆ ಈಗ ಹೊಸ ಸಿನಿಮಾಗಳು ಪೈಪೋಟಿ ನೀಡಲು ಬರುತ್ತಿವೆ. ಯಾರಿಗೆ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ಕಾದು ನೋಡಬೇಕು.
ಶುಕ್ರವಾರ ಬಂದರೆ ಸಿನಿಪ್ರೇಮಿಗಳಿಗೆ ಹಬ್ಬ. ಚಿತ್ರಮಂದಿರದಲ್ಲಿ ಹೊಸ ಸಿನಿಮಾ ಕಣ್ತುಂಬಿಕೊಳ್ಳಬೇಕು ಅಂದುಕೊಂಡವರಿಗೆ ಖುಷಿಯೋ ಖುಷಿ. ಆದರೆ ಒಂದೇ ದಿನ ಹಲವು ಸಿನಿಮಾಗಳು ಒಟ್ಟೊಟ್ಟಿಗೆ ಚಿತ್ರಮಂದಿರಕ್ಕೆ ಕಾಲಿಟ್ಟರೆ ಯಾವುದನ್ನು ನೋಡುವುದು? ಯಾವುದನ್ನು ಬಿಡುವುದು ಎಂಬ ಪ್ರಶ್ನೆ ಕಾಡುತ್ತದೆ. ಥಿಯೇಟರ್ಗಳಲ್ಲಿ ‘ಕಾಂತಾರ’ ಚಿತ್ರದ ಹವಾ ಇನ್ನೂ ಜೋರಾಗಿದೆ. ಅದರ ಜೊತೆ ಫೈಟ್ ಮಾಡಲು ಹೊಸ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ವಾರ (ನವೆಂಬರ್ 11) ಹಲವು ಚಿತ್ರಗಳು ತೆರೆಕಾಣುತ್ತಿವೆ. ಕನ್ನಡದಲ್ಲಿ ‘ಓ’, ‘ರಾಣಾ’, ‘ದಿಲ್ ಪಸಂದ್’, ‘ಹುಬ್ಬಳ್ಳಿ ಡಾಬಾ’, ‘ಯೆಲ್ಲೋ ಗ್ಯಾಂಗ್ಸ್’ ಸಿನಿಮಾಗಳು ಬಿಡುಗಡೆ ಆಗುತ್ತಿವೆ.
‘ದಿಲ್ ಪಸಂದ್’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಮೇಘಾ ಶೆಟ್ಟಿ, ನಿಶ್ವಿಕಾ ನಾಯ್ಡು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಶಿವ ತೇಜಸ್ ನಿರ್ದೇಶನ ಮಾಡಿದ್ದು, ಸುಮಂತ್ ಕ್ರಾಂತಿ ಬಂಡವಾಳ ಹೂಡಿದ್ದಾರೆ. ಟ್ರೇಲರ್ ಮೂಲಕ ಈ ಚಿತ್ರ ಗಮನ ಸೆಳೆದಿದೆ. ಇನ್ನು, ‘ಓ’ ಸಿನಿಮಾದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳಿವೆ. ಇದರಲ್ಲಿ ಮಿಲನಾ ನಾಗರಾಜ್ ಮತ್ತು ಅಮೃತಾ ಅಯ್ಯಂಗಾರ್ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಶ್ರೇಯಸ್ ಮಂಜು, ರೀಷ್ಮಾ ನಾಣಯ್ಯ ನಟಿಸಿರುವ ‘ರಾಣಾ’ ಚಿತ್ರ ಕೂಡ ನ.11ರಂದು ತೆರೆಗೆ ಬರುತ್ತಿದೆ. ಈ ಎಲ್ಲ ಸಿನಿಮಾಗಳ ಜೊತೆ ‘ಯೆಲ್ಲೋ ಗ್ಯಾಂಗ್ಸ್’ ಕೂಡ ಪೈಪೋಟಿಗೆ ಇಳಿಯುತ್ತಿದೆ.
ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ನಟನೆಯ ‘ಊಂಚಾಯಿ’ ಸಿನಿಮಾ ಬಿಡುಗಡೆ ಆಗುತ್ತಿದೆ. ‘ಥಾಯ್ ಮಸಾಜ್’, ‘ರಾಕೆಟ್ ಗ್ಯಾಂಗ್’ ಚಿತ್ರಗಳು ಕೂಡ ರೇಸ್ನಲ್ಲಿವೆ. ಇಂಗ್ಲಿಷ್ನಲ್ಲಿ ‘ಬ್ಲ್ಯಾಕ್ ಪ್ಯಾಂಥರ್’ ಚಿತ್ರ ಧೂಳೆಬ್ಬಿಸಲು ಬರುತ್ತಿದೆ. ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗೂ ಡಬ್ ಆಗಿ ಈ ಚಿತ್ರ ಬಿಡುಗಡೆ ಆಗುತ್ತಿದೆ.
ಸಮಂತಾ ರುತ್ ಪ್ರಭು ನಟನೆಯ ‘ಯಶೋದಾ’ ಚಿತ್ರ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಅವರು ಬಾಡಿಗೆ ತಾಯಿ ಪಾತ್ರ ಮಾಡಿದ್ದಾರೆ. ಅಲ್ಲದೇ, ಭರ್ಜರಿ ಸಾಹಸ ದೃಶ್ಯಗಳಲ್ಲೂ ಅಭಿನಯಿಸಿದ್ದಾರೆ. ಹಾಲಿವುಡ್ ಸಾಹಸ ನಿರ್ದೇಶಕರು ಸಮಂತಾಗೆ ತರಬೇತಿ ನೀಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ.
ಕಳೆದ ವಾರ ರಿಲೀಸ್ ಆಗಿದ್ದ ‘ಬನಾರಸ್’, ‘ಕಂಬ್ಳಿಹುಳ’ ಮುಂತಾದ ಸಿನಿಮಾಗಳು ಉತ್ತಮ ವಿಮರ್ಶೆ ಪಡೆದುಕೊಂಡಿವೆ. ಅವುಗಳ ನಡುವೆ ಈಗ ಹೊಸ ಸಿನಿಮಾಗಳು ಪೈಪೋಟಿ ನೀಡಲು ಬರುತ್ತಿವೆ. ಯಾರಿಗೆ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ಕಾದು ನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.