Lata Mangeshkar: ಹೇಗಿದೆ ಲತಾ ಮಂಗೇಶ್ಕರ್​ ಆರೋಗ್ಯ? ಹೆಲ್ತ್​ ಅಪ್​ಡೇಟ್​ ನೀಡಿದ ವೈದ್ಯರು

ಲತಾ ಮಂಗೇಶ್ಕರ್ ಅವರನ್ನು 10-12 ದಿನಗಳವರೆಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಕೊರೊನಾ ಮತ್ತು ನ್ಯುಮೋನಿಯಾ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Lata Mangeshkar: ಹೇಗಿದೆ ಲತಾ ಮಂಗೇಶ್ಕರ್​ ಆರೋಗ್ಯ? ಹೆಲ್ತ್​ ಅಪ್​ಡೇಟ್​ ನೀಡಿದ ವೈದ್ಯರು
ಲತಾ ಮಂಗೇಶ್ಕರ್

ಕೊರೊನಾ ಮೂರನೆ ಅಲೆಯ ಅಬ್ಬರ ಜೋರಾಗಿದೆ. ದೊಡ್ಡದೊಡ್ಡ ಸೆಲೆಬ್ರಿಟಿಗಳು ಕೊರೊನಾ ಹೊಡೆತಕ್ಕೆ ಸಿಲುಕುತ್ತಿದ್ದಾರೆ. ಇತ್ತೀಚೆಗೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ (Lata Mangeshkar) ಅವರಿಗೆ ಕೊವಿಡ್​ ಪಾಸಿಟಿವ್​ ಆಗಿದೆ. ಮುಂಬೈನ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದ ಬಗ್ಗೆ ಎಲ್ಲರಿಗೂ ಆತಂಕ ಮೂಡಿದೆ. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಅವರ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡಿದೆ ಎಂದು ವೈದ್ಯರು ಹೇಳಿರುವುದರಿಂದ ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಲತಾ ಮಂಗೇಶ್ಕರ್​ ಅವರಿಗೆ ಕೊವಿಡ್​ನ ಕೆಲವು ಲಕ್ಷಣಗಳು ಕಂಡುಬಂದಿವೆ. ಕಳೆದ ಮೂರು ದಿನಗಳಿಂದ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಲತಾ ಮಂಗೇಶ್ಕರ್​ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಕುಟುಂಬದವರಿಗೆ ವೈದ್ಯರು ತಿಳಿಸಿದ್ದಾರೆ. ಆದರೆ ಅವರನ್ನು ನೋಡಲು ಯಾರಿಗೂ ಅನುಮತಿ ನೀಡಿಲ್ಲ. ಅವರಿಗೆ 92 ವರ್ಷ ವಯಸ್ಸು ಆಗಿರುವ ಕಾರಣ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಲತಾ ಮಂಗೇಶ್ಕರ್ ಅವರನ್ನು 10-12 ದಿನಗಳವರೆಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಕೊರೊನಾ ಮತ್ತು ನ್ಯುಮೋನಿಯಾ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.

‘ಅತ್ಯುತ್ತಮ ವೈದ್ಯರ ತಂಡ ಲತಾ ಮಂಗೇಶ್ಕರ್​ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಅವರ ಫೈಟರ್​ ಮತ್ತು ವಿನ್ನರ್​. ಆ ರೀತಿಯಲ್ಲೇ ನಾವು ಅವರನ್ನು ನೋಡಿಕೊಂಡು ಬಂದಿರುವುದು. ಅವರು ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿರುವ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು’ ಎಂದು ಲತಾ ಮಂಗೇಶ್ಕರ್​ ಕುಟುಂಬದವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.

‘ಇದು ಕೊವಿಡ್​ ಆದಕಾರಣ ಅಕ್ಕನನ್ನು ನೋಡಲು ನಮಗೆ ಅನುಮತಿ ಸಿಕ್ಕಿಲ್ಲ. ವೈದ್ಯರು ಮತ್ತು ನರ್ಸ್​ಗಳು ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಹೆಚ್ಚು ವಯಸ್ಸು ಆಗಿರುವ ಕಾರಣ ಇನ್ನಷ್ಟು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗಬಹುದು ಅಂತ ವೈದ್ಯರು ಹೇಳಿದ್ದಾರೆ’ ಎಂದು ಲತಾ ಅವರ ಸಹೋದರಿ ಉಷಾ ಮಂಗೇಶ್ಕರ್​ ತಿಳಿಸಿದ್ದರು.

ಸಂಗೀತ ಕ್ಷೇತ್ರದಲ್ಲಿ 70 ದಶಕಗಳ ಕಾಲ ಸಕ್ರಿಯರಾಗಿದ್ದವರು ಲತಾ ಮಂಗೇಶ್ಕರ್​. 13ನೇ ವಯಸ್ಸಿನಿಂದಲೇ ಅವರು ಗಾಯನ ಆರಂಭಿಸಿದ್ದರು. ಭಾರತ ರತ್ನ, ಪದ್ಮ ಭೂಷಣ, ಪದ್ಮ ವಿಭೂಷಣ, ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ ಸೇರಿದಂತೆ ನೂರಾರು ಗೌರವಗಳು ಅವರಿಗೆ ಸಂದಿವೆ. 30 ಸಾವಿರಕ್ಕೂ ಅದಿಕ ಹಾಡುಗಳಿಗೆ ಲತಾ ಧ್ವನಿ ಆಗಿದ್ದಾರೆ. ವಿಶ್ವಾದ್ಯಂತ ಅವರು ಅಭಿಮಾನಿಗಳನ್ನು ಹೊಂದಿದ್ದಾರೆ. ಲತಾ ಮಂಗೇಶ್ಕರ್​ ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: ಕೊವಿಡ್​: ಲತಾ ಮಂಗೇಶ್ಕರ್​ ನೋಡಲು ಮನೆಯವರಿಗೂ ಅನುಮತಿ ಇಲ್ಲ; ಖ್ಯಾತ ಗಾಯಕಿಯ ಹೆಲ್ತ್​ ಅಪ್​ಡೇಟ್​​

Click on your DTH Provider to Add TV9 Kannada