Gandhada Gudi Review: ‘ಗಂಧದ ಗುಡಿ’: ಪುನೀತ್ ನಮಗಾಗಿ ಕೊಟ್ಟುಹೋದ ಮರೆಯಲಾಗದ ಸಂದೇಶ

ಪುನೀತ್ ರಾಜ್​ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ’ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು. ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಾಣಿ ಸಂಪತ್ತಿನ ಬಗ್ಗೆ ಹೇಳುವ ಈ ಸಾಕ್ಷ್ಯಚಿತ್ರದ ವಿಮರ್ಶೆ ಇಲ್ಲಿದೆ.

Gandhada Gudi Review: ‘ಗಂಧದ ಗುಡಿ’: ಪುನೀತ್ ನಮಗಾಗಿ ಕೊಟ್ಟುಹೋದ ಮರೆಯಲಾಗದ ಸಂದೇಶ
ಪುನೀತ್
Follow us
ರಾಜೇಶ್ ದುಗ್ಗುಮನೆ
|

Updated on:Oct 27, 2022 | 10:47 PM

ಸಿನಿಮಾ: ಗಂಧದ ಗುಡಿ

ನಿರ್ಮಾಣ: ಪುನೀತ್ ರಾಜ್​ಕುಮಾರ್

ನಿರ್ದೇಶನ: ಅಮೋಘವರ್ಷ

ನಿರ್ಮಾಣ: ಪಿಆರ್​​ಕೆ ಪ್ರೊಡಕ್ಷನ್

ಪುನೀತ್ ರಾಜ್​ಕುಮಾರ್ ಅವರು ಕಮರ್ಷಿಯಲ್ ಸಿನಿಮಾಗಳ ಮೂಲಕ ಗುರುತಿಸಿಕೊಂಡವರು. ಪ್ರತಿ ಸಿನಿಮಾದಲ್ಲಿ ನಾಲ್ಕು ಫೈಟ್, ಒಂದಷ್ಟು ಮಾಸ್ ಡೈಲಾಗ್​ ಇದ್ದರೆ ಮಾತ್ರ ಅದು ಪುನೀತ್ ಸಿನಿಮಾ ಎಂಬ ಫೀಲ್ ಬರುತ್ತಿತ್ತು. ಅಂತಹ ಹೀರೋ ಡಾಕ್ಯುಮೆಂಟರಿ ಮಾಡುತ್ತಾರೆ ಎಂದರೆ ಒಂದು ಕುತೂಹಲ ಮೂಡೋದು ಸಹಜ. ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಕಾಡಿನ ಜತೆ ಸಾಕಷ್ಟು ಒಡನಾಟ ಇಟ್ಟುಕೊಂಡ ಅಮೋಘವರ್ಷ ಅವರ ಜತೆಗೂಡಿ ಪುನೀತ್ ‘ಗಂಧದ ಗುಡಿ’ ನಿರ್ಮಿಸಿದ್ದರು. ಸಾಕ್ಷ್ಯಚಿತ್ರದಲ್ಲಿ ಹೇಳುವಂತೆ ಇದು, ‘ಪುನೀತ್ ನಮಗಾಗಿ ಬಿಟ್ಟುಹೋದ ಮರೆಯಲಾಗದ ಕಥೆ’.

ಕಾಡು, ವನ್ಯ ಜೀವಿಗಳ ವಿಚಾರದಲ್ಲಿ ಕರ್ನಾಟಕ ಶ್ರೀಮಂತವಾಗಿದೆ. ಅದು ಎಷ್ಟು ಶ್ರೀಮಂತವಾಗಿದೆ, ಯಾವ ಭಾಗದಲ್ಲಿ ಏನಿದೆ ಎಂಬ ಬಗ್ಗೆ ಇಲ್ಲಿರುವವರಿಗೇ ಹೆಚ್ಚಿನ ಮಾಹಿತಿ ಇಲ್ಲ. ‘ಗಂಧದ ಗುಡಿ’ ಒಂದು ರೀತಿಯಲ್ಲಿ ಕರ್ನಾಟಕ ಅರಣ್ಯ ಸಂಪತ್ತಿನ ಕೈಪಿಡಿಯಂತೆ ಕಾಣುತ್ತದೆ. ಡಾಕ್ಯುಮೆಂಟರಿ ಉದ್ದಕ್ಕೂ ವನ್ಯ ಜಗತ್ತಿನ ಹಲವು ಅಚ್ಚರಿಗಳು, ಕಾಡಿನ ಜತೆ ಮಾನವ ಹಾಗೂ ಪ್ರಾಣಿಗಳ ನಂಟಿನ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ.

ನಾಗರಹೊಳೆಯಿಂದ ಆರಂಭವಾಗುವ ಪುನೀತ್ ಹಾಗೂ ಅಮೋಘವರ್ಷ ಪಯಣ ರಾಜ್​ಕುಮಾರ್ ಹುಟ್ಟೂರಾದ ಗಾಜನೂರು, ಬಿಆರ್​ಟಿ ಟೈಗರ್ ರಿಸರ್ವ್, ಸಕ್ಕರೆ ಬೈಲು​, ಕರಾವಳಿಯ ನೇತ್ರಾಣಿ, ಜೋಗ ಜಲಪಾತ, ಆಗುಂಬೆ, ಉತ್ತರ ಕರ್ನಾಟಕದ ವಿಜಯನಗರ, ತುಂಗಭದ್ರಾ ನದಿಯ ಕಡೆಗಳಲ್ಲಿ ಸಾಗಿ ಕಾಳಿ ನದಿಯಲ್ಲಿ ಪೂರ್ಣಗೊಳ್ಳುತ್ತದೆ. ಕರ್ನಾಟಕದ ಅರಣ್ಯ ವೈವಿಧ್ಯತೆಯ ದರ್ಶನ ನಮಗಾಗುತ್ತದೆ.

ಸಾಕ್ಷ್ಯಚಿತ್ರದುದ್ದಕ್ಕೂ ಪುನೀತ್ ಆವರಿಸಿಕೊಳ್ಳುತ್ತಾರೆ. ತೆರೆಯಮೇಲೆ ಹೀರೋ ಆಗಿ ಎಲ್ಲರಿಗೂ ಪುನೀತ್ ಗೊತ್ತು. ಆದರೆ ಡಾಕ್ಯುಮೆಂಟರಿ ಉದ್ದಕ್ಕೂ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸುತ್ತಾರೆ. ತೆರೆಮೇಲೆ ಹತ್ತಾರು ವಿಲನ್​ಗಳನ್ನು ಹೊಡೆದುರುಳಿಸುವ ಪುನೀತ್ ಅವರು ಹಾವನ್ನು ಕಂಡರೆ ಮಾರು ದೂರ ಹೋಗಿ ನಿಲ್ಲುತ್ತಾರೆ. ಸಿನಿಮಾದಲ್ಲಿ ಹತ್ತಾರು ಊರುಗಳನ್ನು ಸುತ್ತಿ ವಿಲನ್​ನ ಸದೆಬಡಿಯುವ ಅಪ್ಪು ರಾತ್ರಿ ಕಾಡಿನಲ್ಲಿ ಕ್ಯಾಂಪ್ ಹಾಕೋಕೆ ಹಿಂಜರಿಯುತ್ತಾರೆ. ಅಪ್ಪುವಿನ ಮಗುವಿನಂಥ ಮನಸ್ಸು ಪ್ರತಿ ಕ್ಷಣ, ಪ್ರತಿ ನಿಮಿಷ ತೆರೆಮೇಲೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆಯುವ ಪುನೀತ್ ನಮ್ಮೊಂದಿಗಿಲ್ಲ ಎಂಬುದನ್ನು ನಂಬಲು ತೆರೆಮೇಲಿನ ದೃಶ್ಯಗಳು ಬಿಡುವುದೇ ಇಲ್ಲ. ಮಕ್ಕಳೊಂದಿಗೆ, ಕುರಿಗಾಹಿಗಳೊಂದಿಗೆ ಅವರು ಬೆರೆಯುವ ರೀತಿ ಅವರ ನಿಜವಾದ ವ್ಯಕ್ತಿತ್ವ ತೋರಿಸುತ್ತದೆ.

ಕಾಡಲ್ಲಿ ಹಾವಿದೆ ಎಂದಾಗ, ‘ಅಯ್ಯೋ 3 ಸಿನಿಮಾ ಒಪ್ಪಿಕೊಂಡಿದೀನಿ, ಹೆಂಡತಿ ಮಕ್ಕಳಿದ್ದಾರೆ, ನಾವು ಬೆಂಗಳೂರಿಗೆ ಸೇಫ್ ಆಗಿ ಹೋಗಿ ಮುಟ್ತೀವಿ ತಾನೇ?’, ‘ಸಮಯ ಸಿಕ್ಕಾಗಲೆಲ್ಲ ಈ ರೀತಿ ಪ್ರಕೃತಿಯಲ್ಲಿ ಕಳೆದು ಹೋಗಬೇಕು’ ಎಂಬಿತ್ಯಾದಿ ಪುನೀತ್ ಡೈಲಾಗ್​ಗಳು ಅಭಿಮಾನಿಗಳನ್ನು ಭಾವುಕರಾಗಿಸುತ್ತದೆ. ಅಪ್ಪು ನಮ್ಮ ಜತೆಗಿದ್ದಾರೆ, ಅವರು ಎಲ್ಲೂ ಹೋಗಿಲ್ಲ ಎಂಬ ಮಾತನ್ನು ಯಾರೋ ಪುನರಚ್ಚರಿಸಿದಂತೆ ಭಾಸವಾಗುತ್ತವೆ.

ರಾಜ್​ಕುಮಾರ್ ನಟನೆಯ ‘ಗಂಧದ ಗುಡಿ’ ಸಿನಿಮಾಗೆ ಒಂದೊಳ್ಳೆಯ ಉದ್ದೇಶ ಇತ್ತು. ಕಾಡನ್ನು ಉಳಿಸಿ, ಬೆಳೆಸಿ, ಪ್ರಾಣಿಗಳನ್ನು ರಕ್ಷಿಸಿ ಎಂದು ರಾಜ್​ಕುಮಾರ್ ಸಿನಿಮಾ ಉದ್ದಕ್ಕೂ ಹೇಳಿದ್ದರು. ಪುನೀತ್ ಅವರ ‘ಗಂಧದ ಗುಡಿ’ ಕೂಡ ಇದಕ್ಕೆ ಹೊರತಾಗಿಲ್ಲ. ಕೆಲವು ಕಡೆಗಳಲ್ಲಿ ಪ್ರಕೃತಿಗೆ ಮಾನವನಿಂದ ಆದ ಹಾನಿಯನ್ನು ತೋರಿಸಲಾಗಿದೆ. ಪ್ರಕೃತಿಯನ್ನು ಅದರ ಪಾಡಿಗೆ ಬಿಟ್ಟರೆ ಹೇಗೆ ಚೇತರಿಸಿಕೊಳ್ಳುತ್ತದೆ ಎಂಬುದನ್ನು ಅನಾವರಣಗೊಳಿಸಲಾಗಿದೆ. ಕಾಡನ್ನು ಉಳಿಸಿ, ಪ್ರಾಣಿಗಳನ್ನು ಉಳಿಸಿ ಎಂಬಿತ್ಯಾದಿ ಸಂದೇಶಗಳನ್ನು ಪುನೀತ್ ಅವರು ಅಭಿಮಾನಿಗಳಿಗೆ ಮನ ಮುಟ್ಟುವಂತೆ ಹೇಳಿದ್ದಾರೆ. ಕಾಡನ್ನು ರಕ್ಷಿಸುತ್ತಿರುವ ಅರಣ್ಯ ಸಿಬ್ಬಂದಿಗೂ ಇಲ್ಲಿ ವಿಶೇಷ ಗೌರವ ಸಲ್ಲಿಕೆ ಆಗಿದೆ. ಈ ಡಾಕ್ಯುಮೆಂಟರಿಯಲ್ಲಿ ಅಲ್ಲಲ್ಲಿ ನಗುವಿನ ಕಚಗುಳಿಯೂ ಇದೆ.

ಅಮೋಘವರ್ಷ ಅವರಿಗೆ ಕಾಡಿನ ಜತೆ ಇರುವ ನಂಟು ಈ ಡಾಕ್ಯುಮೆಂಟರಿಯಿಂದ ಗೊತ್ತಾಗುತ್ತದೆ. ಅಪ್ಪು ಹಾಗೂ ಅವರು ಹಾಕಿದ ಶ್ರಮ ತೆರೆಮೇಲೆ ಎದ್ದು ಕಾಣುತ್ತದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಇಷ್ಟವಾಗುತ್ತದೆ. ಪ್ರತೀಕ್ ಶೆಟ್ಟಿ ಅವರ ಛಾಯಾಗ್ರಹಣ ‘ಗಂಧದ ಗುಡಿ’ಯ ಅಂದವನ್ನು ಹೆಚ್ಚಿಸಿದೆ. ಕಾಡುಗಳು, ವನ್ಯಜೀವಿಗಳನ್ನು ಚೆನ್ನಾಗಿ ಸೆರೆ ಹಿಡಿದಿದ್ದಾರೆ. ಸಾಕ್ಷ್ಯಚಿತ್ರದುದ್ದಕ್ಕೂ ಅಪ್ಪು ಧ್ವನಿ ಕೇಳುತ್ತದೆ ಎಂಬುದು ಖುಷಿಯ ವಿಚಾರ. ಡಾಕ್ಯುಮೆಂಟರಿಯನ್ನು ಹೀಗೂ ಪ್ರಸ್ತುತಪಡಿಸಬಹುದು ಎಂಬುದನ್ನು ಅಪ್ಪು ತೋರಿಸಿ ಹೋಗಿದ್ದಾರೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಪಾತ್ರ ಕೂಡ ಈ ಡಾಕ್ಯುಮೆಂಟರಿಯಲ್ಲಿದೆ. ಅದೇನು ಎಂಬುದನ್ನು ತೆರೆಮೇಲೆ ನೋಡಬೇಕು.

ಬೆಟ್ಟದ ಹೂವಿನಿಂದ ಆರಂಭವಾಗುವ ‘ಗಂಧದ ಗುಡಿ’ ಕೊನೆಯಾಗುವುದು ನೀರಿನಲ್ಲಿ ತೇಲಿ ಹೋಗುವ ಹೂವಿನಿಂದ, ನೀರಿನಲ್ಲಿ ಕಾಣುವ ಅಪ್ಪುವಿನ ಪ್ರತಿಬಿಂಬದಿಂದ. ಆ ದೃಶ್ಯ ನೋಡಿದಾಗಲೆಲ್ಲ, ಬೆಟ್ಟದ ಹೂವು ಮತ್ತೆ ಅರಳಲಿ, ಪ್ರತಿಬಿಂಬಕ್ಕೆ ಜೀವ ಬರಲಿ ಎಂದು ಅಭಿಮಾನಿಗಳಿಗೆ ಅನ್ನಿಸದೆ ಇರದು.

Published On - 10:34 pm, Thu, 27 October 22

ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ
ಜಾಮೀನು ಸಿಕ್ಕಿದ್ದಕ್ಕೆ ಚಾಮುಂಡಿ ಬೆಟ್ಟದಲ್ಲಿ ಹರಿಕೆ ತೀರಿಸಿದ ವಿಜಯಲಕ್ಷ್ಮಿ
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ, ಮೋದಿ ಭೇಟಿ ಮಾಡುವೆ: ಹೆಬ್ಬಾಳ್ಕರ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಭದ್ರಾವತಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ: ಕುಮಾರಸ್ವಾಮಿ ಗುಡ್ ನ್ಯೂಸ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ