RRR Review: ಆರ್ಆರ್ಆರ್ ವಿಮರ್ಶೆ; ನೀರು-ಬೆಂಕಿ ಹಿಡಿದು ತೆರೆಮೇಲೆ ರಾಜಮೌಳಿ ಮ್ಯಾಜಿಕ್
RRR Movie Review: ‘ಬಾಹುಬಲಿ 2’ ಚಿತ್ರದ ಬಳಿಕ ನಿರ್ದೇಶಕ ಎಸ್.ಎಸ್. ರಾಜಮೌಳಿ ‘ಆರ್ಆರ್ಆರ್’ ಚಿತ್ರವನ್ನು ಪ್ರೇಕ್ಷಕರ ಎದುರು ಇಟ್ಟಿದ್ದಾರೆ. ಹಲವು ವರ್ಷಗಳ ಪರಿಶ್ರಮದಿಂದ ಸಿದ್ಧಗೊಂಡಿರುವ ಈ ಸಿನಿಮಾ ದೊಡ್ಡ ನಿರೀಕ್ಷೆ ಹುಟ್ಟುಹಾಕಿತ್ತು. ಈ ನಿರೀಕ್ಷೆ ತಲುಪೋಕೆ ಸಿನಿಮಾಗೆ ಸಾಧ್ಯವಾಯಿತೇ? ಈ ವಿಮರ್ಶೆಯಲ್ಲಿದೆ ಉತ್ತರ.
ಸಿನಿಮಾ: RRR ಪಾತ್ರವರ್ಗ: ಜ್ಯೂ.ಎನ್ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಮುಂತಾದವರು ನಿರ್ದೇಶನ: ಎಸ್.ಎಸ್. ರಾಜಮೌಳಿ ನಿರ್ಮಾಣ: ಡಿವಿವಿ ದಾನಯ್ಯ ಸ್ಟಾರ್: 3.5/5
ಕೊಮರಮ್ ಭೀಮ್ (ಜ್ಯೂ. ಎನ್ಟಿಆರ್) ಕಾಡಿನಲ್ಲಿ ಬೆಳೆದ ವ್ಯಕ್ತಿ. ಕಾಡೇ ಆತನಿಗೆ ಸರ್ವಸ್ವ. ಪ್ರಾಣಿಗಳಿಗೆ ಹಿಂಸೆ ಕೊಡಬೇಕಾದ ಪರಿಸ್ಥಿತಿ ಬಂದರೂ ಅವುಗಳ ಬಳಿ ಆತ ಕ್ಷಮೆ ಕೇಳುತ್ತಾನೆ. ಅಲ್ಲುರಿ ಸೀತಾರಾಮ ರಾಜು (ರಾಮ್ ಚರಣ್) ದೆಹಲಿಯಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿ. ಆತನ ನಿಷ್ಠೆಗೆ ಬ್ರಿಟಿಷರು ಬೆರಗಾಗುತ್ತಾರೆ. ಆಂಗ್ಲರು ಹೇಳಿದ ಕೆಲಸವನ್ನು ಚಾಚೂ ತಪ್ಪದೇ ಪಾಲಿಸುತ್ತಾನೆ ರಾಮ್. ಭೀಮ್ ಕಾಡಿನಿಂದ ನಗರಕ್ಕೆ ಬರುತ್ತಾನೆ. ಅದಕ್ಕೊಂದು ಉದ್ದೇಶ ಇದೆ. ರಾಮ್ ಆಂಗ್ಲರಿಗೆ ತೋರುತ್ತಿರುವ ನಿಷ್ಠೆಯ ಹಿಂದೆಯೂ ಒಂದು ಉದ್ದೇಶ ಇದೆ. ಈ ಎರಡೂ ಉದ್ದೇಶಗಳು ಒಂದು ಕಡೆ ಸೇರುತ್ತವೆ. ರಾಮ್ ಬೆಂಕಿ, ಭೀಮ್ ನೀರು. ಇವೆರಡೂ ಒಂದಾಗುತ್ತದೆ. ಆ ಬಳಿಕ ಕಾಡ್ಗಿಚ್ಚು, ಪ್ರಳಯ!
ರಾಜಮೌಳಿ ಮಿಸ್ಟರ್ ಪರ್ಫೆಕ್ಟ್ ಅನ್ನೋದು ಈ ಮೊದಲು ಸಾಕಷ್ಟು ಬಾರಿ ಸಾಬೀತಾಗಿದೆ. ಅವರ ಬತ್ತಳಿಕೆಯಲ್ಲಿ ಬಂದ ಚಿತ್ರಗಳೆಲ್ಲವೂ ಹಿಟ್. ಈಗ ‘ಆರ್ಆರ್ಆರ್’ ಚಿತ್ರದಲ್ಲೂ ಅವರು ತೋರಿದ ಬದ್ಧತೆಗೆ ಭೇಷ್ ಎನ್ನಲೇಬೇಕು. ಪ್ರತಿ ದೃಶ್ಯವನ್ನೂ ನಾಜೂಕಾಗಿ ಪೋಣಿಸಿ, ಮಾಲೆ ಮಾಡಿದ್ದಾರೆ ರಾಜಮೌಳಿ. ಹಲವು ದೃಶ್ಯಗಳನ್ನು ತುಂಬಾನೇ ಸಿಂಬಾಲಿಕ್ ಆಗಿ ತೋರಿಸುವ ರಾಜಮೌಳಿ ಜಾಣತನಕ್ಕೆ ತಲೆಬಾಗಲೇಬೇಕು. ಅವರ ಶ್ರಮ, ಬದ್ಧತೆ ಚಿತ್ರದಲ್ಲಿ ಎದ್ದು ಕಾಣುತ್ತದೆ. ಚಿತ್ರಮಂದಿರದ ಒಳಗೆ ಹೋಗುವ ಪ್ರೇಕ್ಷಕ ‘ಆರ್ಆರ್ಆರ್’ ಚಿತ್ರವನ್ನು ಮಾತ್ರ ನೋಡಬೇಕು. ‘ಬಾಹುಬಲಿ’ಗೆ ಹೋಲಿಕೆ ಮಾಡೋಕೆ ಇಳಿದರೆ ಕೊಂಚ ನಿರಾಸೆ ಆಗಬಹುದು.
ಸಿನಿಮಾದ ಕಥೆ ತುಂಬಾನೇ ಸಿಂಪಲ್. ಆದರೆ, ಅದನ್ನು ಹೇಳೋಕೆ ರಾಜಮೌಳಿ ಆಯ್ಕೆ ಮಾಡಿಕೊಂಡಿದ್ದು ಅದ್ದೂರಿತನದ ಹಾದಿ. ಪ್ರತಿ ದೃಶ್ಯದಲ್ಲೂ ವಿಜೃಂಭಣೆ ಇದೆ. ಪ್ರತಿ ಫ್ರೇಮ್ ಬೈ ಫ್ರೇಮ್ ಕೂಡ ಆಚೀಚೆ ಆಗದಂತೆ ನೋಡಿಕೊಂಡಿದ್ದಾರೆ ಅವರು. ಸಿನಿಮಾ ಮೂರು ಗಂಟೆ ಇರುವುದರಿಂದ ಸಿನಿಮಾ ಪ್ರೇಕ್ಷಕನಿಂದ ಕೊಂಚ ತಾಳ್ಮೆ ಕೇಳಬಹುದು. ಕೆಲವೊಮ್ಮೆ ಸ್ಕ್ರಿಪ್ಟ್ ಮೀರಿ ಮೇಕಿಂಗ್ ಹೈಲೈಟ್ ಆಗಿ ಬಿಡುತ್ತದೆ.
ರಾಮ್ ಚರಣ್ ಹಾಗೂ ಜ್ಯೂ. ಎನ್ಟಿಆರ್ ನಟನೆ ಇಡೀ ಚಿತ್ರವನ್ನು ಆವರಿಸಿಕೊಂಡಿದೆ. ಅಲ್ಲುರಿ ಸೀತಾರಾಮ್ ಪಾತ್ರದಲ್ಲಿ ರಾಮ್ ಚರಣ್ ಮಿಂಚಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಅವರು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಒಂದೇ ಮಾತಲ್ಲಿ ಹೇಳೋದಾದರೆ ಬೆಂಕಿಯಂತೆ ಪ್ರಜ್ವಲಿಸಿದ್ದಾರೆ. ಜ್ಯೂ.ಎನ್ಟಿಆರ್ ಭೀಮ್ ಆಗಿ ಗಮನ ಸೆಳೆದಿದ್ದಾರೆ. ಕುಟುಂಬದ ವಿಚಾರಕ್ಕೆ ಬಂದರೆ ಎಲ್ಲವನ್ನೂ ನುಂಗಿ ಹಾಕುವ ಸುನಾಮಿಯಾಗಿ ಜ್ಯೂ.ಎನ್ಟಿಆರ್ ಗಮನ ಸೆಳೆಯುತ್ತಾರೆ. ರಾಮ್ ಚರಣ್ ಪಾತ್ರಕ್ಕೆ ಹೆಚ್ಚು ಆದ್ಯತೆ ಇದೆ.
ಆರಂಭದಲ್ಲಿ ಬರುವ ದೃಶ್ಯದಲ್ಲಿ ರಾಮ್ ಚರಣ್-ಜ್ಯೂ.ಎನ್ಟಿಆರ್ ಕಣ್ಣಿನಲ್ಲೇ ಮಾತನಾಡಿಕೊಳ್ಳುವುದು, ಹುಲಿಯನ್ನು ಎದುರು ಹಾಕಿಕೊಳ್ಳುವುದು ಸೇರಿ ಹಲವು ದೃಶ್ಯಗಳು ಗಮನ ಸೆಳೆಯುತ್ತದೆ. ಇಬ್ಬರೂ ಜತೆಯಾಗಿ ಸ್ಟೆಪ್ ಹಾಕಿರೋ ‘ಹಳ್ಳಿ ನಾಟು..’ ಸಾಂಗ್ ಸಿನಿಮಾದ ಎನರ್ಜಿ ಹೆಚ್ಚಿಸಿದೆ.
ಕನ್ನಡಕ್ಕೆ ಡಬ್ಬಿಂಗ್ ಮಾಡುವ ವಿಚಾರದಲ್ಲಿ ಜ್ಯೂ.ಎನ್ಟಿಆರ್ ಹಾಗೂ ರಾಮ್ ಚರಣ್ ಪ್ರಯತ್ನವನ್ನು ಶ್ಲಾಘಿಸಲೇಬೇಕು. ಆದರೆ, ರಾಮ್ ಚರಣ್ಗೆ ಪರಿಪೂರ್ಣತೆ ಸಾಧ್ಯವಾಗಿಲ್ಲ. ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಹೆಚ್ಚು ಹೊತ್ತು ತೆರೆಮೇಲೆ ಬರುವುದಿಲ್ಲ. ಆದಾಗ್ಯೂ, ಎರಡೂ ಪಾತ್ರಗಳು ಕಥೆಗೆ ದೊಡ್ಡ ತಿರುವು ನೀಡುತ್ತವೆ. ಬ್ರಿಟಿಷರಾಗಿ ಕಾಣಿಸಿಕೊಂಡ ವಿದೇಶಿ ಕಲಾವಿದರು ಗಮನ ಸೆಳೆಯುತ್ತಾರೆ.
ಕೆ.ಕೆ. ಸೆಂಥಿಲ್ ಕುಮಾರ್ ಛಾಯಾಗ್ರಹಣ ಚಿತ್ರದ ಮೆರುಗನ್ನು ಹೆಚ್ಚಿಸಿದೆ. ಇಂಟರ್ವಲ್ಗೂ ಮೊದಲು ಬರುವ ಫೈಟ್ ಸೇರಿ ಬಹುತೇಕ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಎಂ.ಎಂ. ಕೀರವಾಣಿ ಹಿನ್ನೆಲೆ ಸಂಗೀತ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತದೆ. ಸಾಂಗ್ ವಿಚಾರದಲ್ಲಿ ಮತ್ತಷ್ಟು ಮೋಡಿ ಮಾಡಬಹುದಿತ್ತು. ಸಿನಿಮಾ ಅದ್ದೂರಿಯಾಗಿ ಮೂಡಿಬರೋಕೆ ನಿರ್ಮಾಪಕ ದಾನಯ್ಯ ಯಥೇಚ್ಚವಾಗಿ ಹಣ ಸುರಿದಿರುವುದು ಪ್ರತಿ ದೃಶ್ಯದಲ್ಲೂ ಎದ್ದು ಕಾಣಿಸುತ್ತದೆ. ಸಾಬು ಸಿರಿಲ್ ಹಾಕಿರುವ ಆರ್ಟ್ ವರ್ಕ್ ಚಿತ್ರದ ವೈಭವವನ್ನು ಹೆಚ್ಚಿಸಿದೆ.
ಇದನ್ನೂ ಓದಿ: 500 ರೂಪಾಯಿ ದಾಟಿದ ‘ಆರ್ಆರ್ಆರ್’ ಟಿಕೆಟ್ ದರ; ಹೀಗಾದ್ರೆ ಹೇಗೆ ಎಂದ ಅಭಿಮಾನಿಗಳು?
RRR Movie First Half Review: ಹೇಗಿದೆ ‘ಆರ್ಆರ್ಆರ್’ ಚಿತ್ರದ ಮೊದಲಾರ್ಧ?; ಇಲ್ಲಿದೆ ಪಿನ್ ಟು ಪಿನ್ ಮಾಹಿತಿ
Published On - 5:38 am, Fri, 25 March 22