‘ಬೀಸ್ಟ್​’ ಚಿತ್ರದ್ದು ಕದ್ದ ಕಥೆಯೇ? ಕೇವಲ ಟ್ರೇಲರ್​ ನೋಡಿ ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು

‘ಬೀಸ್ಟ್​’ ಚಿತ್ರದ್ದು ಕದ್ದ ಕಥೆಯೇ? ಕೇವಲ ಟ್ರೇಲರ್​ ನೋಡಿ ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು
ದಳಪತಿ ವಿಜಯ್

Beast Movie: ಹಾಲಿವುಡ್​ ಚಿತ್ರದಿಂದಲೇ ಸ್ಫೂರ್ತಿ ಪಡೆದು ‘ಬೀಸ್ಟ್’ ಸಿನಿಮಾದ ಕಥೆಗೆ ಹೆಣೆಯಲಾಗಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಸಿನಿಪ್ರಿಯರ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

TV9kannada Web Team

| Edited By: Madan Kumar

Apr 04, 2022 | 9:08 AM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಬೀಸ್ಟ್​’ ಚಿತ್ರ ( Beast Movie) ಕೂಡ ಗಮನ ಸೆಳೆಯುತ್ತಿದೆ. ಏ.13ರಂದು ಈ ಸಿನಿಮಾ ಅದ್ದೂರಿಯಾಗಿ ರಿಲೀಸ್​ ಆಗಲಿದೆ. ‘ದಳಪತಿ’ ವಿಜಯ್​ (Thalapathy Vijay) ಈ ಚಿತ್ರಕ್ಕೆ ಹೀರೋ. ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಅವರು ‘ಬೀಸ್ಟ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಹಲವು ಕಾರಣಗಳಿಂದಾಗಿ ಈ ಚಿತ್ರ ಹೈಪ್​ ಸೃಷ್ಟಿ ಮಾಡಿದೆ. ವಿಜಯ್​ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ‘ಬೀಸ್ಟ್​’ ಸಿನಿಮಾವನ್ನು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಮಾಡಲಾಗುತ್ತಿದೆ. ಕನ್ನಡ, ಹಿಂದಿ ಸೇರಿ ಬೇರೆ ಬೇರೆ ಭಾಷೆಗಳಿಗೆ ಡಬ್​ ಮಾಡಿ ತೆರೆಕಾಣಿಸಲಾಗುತ್ತಿದೆ. ಏ.14ರಂದು ರಿಲೀಸ್​ ಆಗಲಿರುವ ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಜೊತೆ ‘ಬೀಸ್ಟ್​’ ಪೈಪೋಟಿ ನಡೆಸಲಿದೆ. ಈ ಎರಡೂ ಸಿನಿಮಾಗಳ ಟ್ರೇಲರ್​ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿವೆ. ಆದರೆ ‘ಬೀಸ್ಟ್​’ ಸಿನಿಮಾದ ಟ್ರೇಲರ್​ ನೋಡಿದ ಬಳಿಕ ಕೆಲವು ನೆಟ್ಟಿಗರು ಒಂದಷ್ಟು ಆರೋಪ ಮಾಡಲು ಆರಂಭಿಸಿದ್ದಾರೆ. ಈ ಚಿತ್ರದ ಕಥೆಯನ್ನು ಹಾಲಿವುಡ್​ (Hollywood) ಸಿನಿಮಾವೊಂದರ ಕಥೆಯ ಜೊತೆ ಹೋಲಿಕೆ ಮಾಡಲಾಗುತ್ತಿದೆ.

ಹಲವು ವರ್ಷಗಳ ವೃತ್ತಿಜೀವನದಲ್ಲಿ ದಳಪತಿ ವಿಜಯ್​ ಅವರು ಈಗಾಗಲೇ ಅನೇಕ ಡಿಫರೆಂಟ್​ ಪಾತ್ರಗಳನ್ನು ಮಾಡಿದ್ದಾರೆ. ಈಗ ಅವರು ‘ಬೀಸ್ಟ್​’ ಚಿತ್ರದಲ್ಲಿ ಭರ್ಜರಿ ಸಾಹಸ ದೃಶ್ಯಗಳ ಮೂಲಕ ಜನರನ್ನು ರಂಜಿಸಲು ಬರುತ್ತಿದ್ದಾರೆ. ಈ ಸಿನಿಮಾದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಸಿನಿಮಾದ ಟ್ರೇಲರ್ ಸದ್ದು ಮಾಡುತ್ತಿದೆ. ಆದರೆ ಟ್ರೇಲರ್​ ನೋಡಿದ ಎಲ್ಲರೂ ಹಾಲಿವುಡ್​ನ ‘ಪೌಲ್​ ಬ್ಲಾರ್ಟ್​: ಮಾಲ್​ ಕಾಪ್​’ ಸಿನಿಮಾವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಆ ಚಿತ್ರದಿಂದಲೇ ಸ್ಫೂರ್ತಿ ಪಡೆದು ‘ಬೀಸ್ಟ್’ ಸಿನಿಮಾದ ಕಥೆಗೆ ಹೆಣೆಯಲಾಗಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.

ದೊಡ್ಡ ಶಾಪಿಂಗ್​ ಮಾಲ್​ಗೆ ಭಯೋತ್ಪಾದಕರು ಎಂಟ್ರಿ ನೀಡುತ್ತಾರೆ. ಅಲ್ಲಿಗೆ ಬಂದ ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳುತ್ತಾರೆ. ಅದೇ ಮಾಲ್​ನಲ್ಲಿ ಹೀರೋ ಕೂಡ ಇರುತ್ತಾನೆ. ಆತ ಎಲ್ಲರ ರಕ್ಷಣೆಗೆ ಮುಂದಾಗುತ್ತಾನೆ. ಇದು ‘ಬೀಸ್ಟ್​’ ಟ್ರೇಲರ್​ನಲ್ಲಿ ಕಾಣಿಸಿದ ಕಥೆ. ‘ಪೌಲ್​ ಬ್ಲಾರ್ಟ್​​: ಮಾಲ್​ ಕಾಪ್​’ ಚಿತ್ರದ ಕಥೆ ಕೂಡ ಹೆಚ್ಚು-ಕಡಿಮೆ ಇದೇ ರೀತಿ ಇದೆ. ಆದರೆ ಆ ಕಥೆಯಲ್ಲಿ ಹೀರೋ ಅಲ್ಲಿಯೇ ಕೆಲಸ ಮಾಡುವ ಸೆಕ್ಯೂರಿಟಿ ಸಿಬ್ಬಂದಿ​ ಆಗಿರುತ್ತಾನೆ. ‘ಬೀಸ್ಟ್​’ ಸಿನಿಮಾದಲ್ಲಿ ಕಥಾನಾಯಕ ಓರ್ವ ಸೈನಿಕ ಆಗಿರುತ್ತಾನೆ.

ಈ ಹೋಲಿಕೆ ಬಗ್ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಪೂರ್ತಿ ಸಿನಿಮಾ ನೋಡದೆಯೇ ಈ ರೀತಿ ಹೇಳುವುದು ಸರಿಯಲ್ಲ ಎಂದು ಕೆಲವರು ವಾದ ಮಾಡುತ್ತಿದ್ದಾರೆ. ಆದರೆ ಈ ಯಾವ ವಿಚಾರದ ಬಗ್ಗೆಯೂ ಚಿತ್ರತಂಡದವರು ಪ್ರತಿಕ್ರಿಯೆ ನೀಡಿಲ್ಲ. ‘ಸನ್​ ಪಿಕ್ಚರ್ಸ್​’ ಮೂಲಕ ‘ಬೀಸ್ಟ್​’ ಸಿನಿಮಾ ಅದ್ದೂರಿಯಾಗಿ ನಿರ್ಮಾಣ ಆಗಿದೆ. ನಾಯಕಿಯಾಗಿ ಪೂಜಾ ಹೆಗ್ಡೆ ಅಭಿನಯಿಸಿದ್ದಾರೆ.

‘ಕೆಜಿಎಫ್​ 2’ ಎದುರು ಬೀಸ್ಟ್​ ಕ್ಲ್ಯಾಶ್​; ಯಶ್​ ಪ್ರತಿಕ್ರಿಯೆ ಏನು?

‘ನಾವು ತುಂಬ ಮುಂಚೆಯೇ ರಿಲೀಸ್​ ಡೇಟ್​ ಅನೌನ್ಸ್​ ಮಾಡಿದ್ವಿ. ಯಾವ ಸಿನಿಮಾ ರಿಲೀಸ್​ ಆಗುತ್ತದೆ ಅನ್ನೋದು ನಮಗೆ ಗೊತ್ತಿರಲಿಲ್ಲ. ಈಗ ವಿಜಯ್​ ಅವರ ಬೀಸ್ಟ್​ ಚಿತ್ರ ಬರುತ್ತಿದೆ. ಬೀಸ್ಟ್​ ವರ್ಸಸ್​ ಕೆಜಿಎಫ್​ ಅಂತ ಕೇಳಬಾರದು. ಬೀಸ್ಟ್​ ಮತ್ತು ಕೆಜಿಎಫ್​ ಎನ್ನಬೇಕು. ಎರಡೂ ಕೂಡ ಇಂಡಿಯನ್​ ಸಿನಿಮಾ. ಇದು ಎಲೆಕ್ಷನ್​ ಅಲ್ಲ, ಸಿನಿಮಾ. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಮಾತು ಇದರಲ್ಲಿ ಬರಲ್ಲ. ಎರಡೂ ಸಿನಿಮಾವನ್ನೂ ನೋಡೋಣ. ವಿಜಯ್ ಸರ್​ ನನಗಿಂತ ಸೀನಿಯರ್​. ನಾವು ಅವರಿಗೆ ಗೌರವ ಕೊಡಬೇಕು. ವಿಜಯ್​ ಅವರ ಅಭಿಮಾನಿಗಳಿಗೂ ‘ಕೆಜಿಎಫ್​ 2’ ಸಿನಿಮಾ ಇಷ್ಟ ಆಗಲಿದೆ’ ಎಂದು ಯಶ್​ ಹೇಳಿದ್ದಾರೆ.

ಇದನ್ನೂ ಓದಿ:

‘ಕೆಜಿಎಫ್​ 2’ ಮತ್ತು ‘ಬೀಸ್ಟ್​’ ನಿರ್ದೇಶಕರ ನಡುವೆ ದೋಸ್ತಿ ಹೇಗಿದೆ ನೋಡಿ; ಕ್ಲ್ಯಾಶ್​ ವಿಷಯ ಬಿಟ್ಟುಬಿಡಿ

‘ಕೆಜಿಎಫ್​ 2’ಗೆ ಸ್ಪರ್ಧೆ ನೀಡೋ ತರ ಇದೆಯಾ ‘ಬೀಸ್ಟ್​’ ಟ್ರೇಲರ್?

Follow us on

Related Stories

Most Read Stories

Click on your DTH Provider to Add TV9 Kannada