OTT Censorship: ಒಟಿಟಿ ಸೆನ್ಸಾರ್ಶಿಪ್ ಬಗ್ಗೆ ಮಹತ್ವದ ಆದೇಶ ನೀಡಿದ ಸುಪ್ರೀಂ ಕೋರ್ಟ್
OTT Platform: ಭಾರತದಲ್ಲಿ ಒಟಿಟಿ ಪ್ಲಾಟ್ಫಾರ್ಮ್ ಪ್ರಾಬಲ್ಯ ಹೆಚ್ಚಿದೆ. ಹತ್ತಾರು ಒಟಿಟಿ ಸಂಸ್ಥೆಗಳು ಕಾರ್ಯನಿರತವಾಗಿವೆ. ಇವುಗಳಲ್ಲಿ ಪ್ರಸಾರ ಆಗುವ ಕೆಲವು ಕಂಟೆಂಟ್ಗಳು ತುಂಬ ಬೋಲ್ಡ್ ಆಗಿರುತ್ತವೆ.
ಮನರಂಜನೆಯ ಜಗತ್ತಿನಲ್ಲಿ ಈಗ ಒಟಿಟಿ ಪ್ಲಾಟ್ಫಾರ್ಮ್ನದ್ದೇ (OTT Platform) ಹವಾ. ಎಲ್ಲ ಹೊಸ ಸಿನಿಮಾಗಳೂ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಕೆಲವೇ ದಿನಗಳ ನಂತರ ಒಟಿಟಿಗೆ ಲಗ್ಗೆ ಇಡುತ್ತವೆ. ಹಲವಾರು ವೆಬ್ ಸರಣಿಗಳು ಪ್ರತಿ ವಾರ ಬಿಡುಗಡೆ ಆಗುತ್ತವೆ. ರಿಯಾಲಿಟಿ ಶೋಗಳು ಕೂಡ ಒಟಿಟಿಯಲ್ಲಿ ಶೈನ್ ಆಗುತ್ತಿವೆ. ಹೊಸ ಹೊಸ ಸಿನಿಮಾಗಳನ್ನು ಕೊಂಡುಕೊಳ್ಳುವಲ್ಲಿ ಎಲ್ಲ ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರ ಆಗುವ ಕಂಟೆಂಟ್ಗಳ ಬಗ್ಗೆ ಕೆಲವರಿಗೆ ತರಕಾರು ಇದೆ. ಬೋಲ್ಡ್ ದೃಶ್ಯಗಳು ಹೆಚ್ಚಾಗಿರುತ್ತವೆ ಎಂದು ಅನೇಕರು ಮೂಗು ಮುರಿದಿದ್ದುಂಟು. ಈ ವಿಚಾರ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿತ್ತು. ಆ ಬಗ್ಗೆ ಮಹತ್ವದ ತೀರ್ಪು ಪ್ರಕಟ ಆಗಿದೆ. ಒಟಿಟಿ ಕಂಟೆಂಟ್ಗಳಿಗೆ ಸೆನ್ಸಾರ್ (Censorship) ಸಮಿತಿ ರಚಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
‘ವೆಬ್ ಸಿರೀಸ್ಗಳಿಗೆ ಸೆನ್ಸಾರ್ ಕಮಿಟಿ ಇರಲು ಹೇಗೆ ಸಾಧ್ಯ? ಅದಕ್ಕಾಗಿ ಬೇರೆಯದೇ ಕಾನೂನು ಇದೆ. ಅದರ ಅಡಿಯಲ್ಲಿ ಒಟಿಟಿ ಬರುತ್ತದೆ ಎಂದಾದರೆ ಮಾತ್ರ ಈಗಿರುವ ಕಾನೂನು ಅನ್ವಯ ಆಗುತ್ತದೆ. ಬೇರೆ ಬೇರೆ ದೇಶಗಳಿಂದಲೂ ಕಂಟೆಂಟ್ ಪ್ರಸಾರ ಆಗುವುದರಿಂದ ಅನೇಕ ಪ್ರಶ್ನೆಗಳು ಉದ್ಭವ ಆಗುತ್ತವೆ’ ಎಂದು ಕೋರ್ಟ್ ತಿಳಿಸಿದೆ.
‘ವೀಕ್ಷಕರು ಇಲ್ಲಿನವರೇ ಆಗಿದ್ದರೂ ಕೂಡ ಕಂಟೆಂಟ್ ಪ್ರಸಾರ ಆಗುತ್ತಿರುವುದು ಬೇರೆ ಬೇರೆ ದೇಶಗಳಿಂದ. ಪ್ರಸಾರ ಆದ ನಂತರ ಏನಾದರೂ ತಪ್ಪಿದ್ದರೆ ಕ್ರಮ ಕೈಗೊಳ್ಳುವುದು ಬೇರೆ. ನಿಮ್ಮ ಅರ್ಜಿ ಹೆಚ್ಚು ವಿವರವಾಗಿ ಇರಬೇಕು’ ಎಂದು ಹೇಳುವ ಮೂಲಕ ಅರ್ಜಿದಾರರ ಮನವಿಯನ್ನು ಕೋರ್ಟ್ ತಳ್ಳಿಹಾಕಿದೆ.
ಇದನ್ನೂ ಓದಿ: Brahmastra: ಸೂಪರ್ ಹಿಟ್ ಆದ ‘ಬ್ರಹ್ಮಾಸ್ತ್ರ’ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗೋದು ಯಾವಾಗ?
ಭಾರತದಲ್ಲೂ ಒಟಿಟಿ ಸಂಸ್ಥೆಗಳ ಪ್ರಾಬಲ್ಯ ಹೆಚ್ಚಿದೆ. ಅಮೇಜಾನ್ ಪ್ರೈಂ ವಿಡಿಯೋ, ನೆಟ್ಫ್ಲಿಕ್ಸ್, ಸೋನಿ ಲಿವ್, ಜೀ5, ವೂಟ್ ಸೆಲೆಕ್ಟ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್, ಆಲ್ಟ್ ಬಾಲಾಜಿ, ಆಹಾ ಸೇರಿದಂತೆ ಹತ್ತಾರು ಒಟಿಟಿ ಸಂಸ್ಥೆಗಳು ಕಾರ್ಯನಿರತವಾಗಿವೆ. ಇವುಗಳಲ್ಲಿ ಪ್ರಸಾರ ಆಗುವ ಕೆಲವು ಕಂಟೆಂಟ್ಗಳು ತುಂಬ ಬೋಲ್ಡ್ ಆಗಿರುತ್ತವೆ. ಎಲ್ಲಾ ವಯೋಮಾನದವರಿಗೆ ಸೂಕ್ತ ಆಗದಂತಹ ದೃಶ್ಯಗಳು ಕೂಡ ಇರುತ್ತವೆ. ಅವುಗಳಿಗೆ ಸೆನ್ಸಾರ್ ಮಾಡಬೇಕು ಎಂಬುದು ಕೆಲವರ ಒತ್ತಾಯ.
‘ಮಿರ್ಜಾಪುರ್’ ವೆಬ್ ಸರಣಿಯ ಹೊಸ ಸೀಸನ್ಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅದಕ್ಕೆ ತಡೆ ನೀಡಬೇಕು ಎಂದು ಮಿರ್ಜಾಪುರ್ ನಗರದ ನಿವಾಸಿಯೊಬ್ಬರು ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಈ ವೆಬ್ ಸರಣಿಯಲ್ಲಿ ಮಿರ್ಜಾಪುರ್ ನಗರವನ್ನು ಆಕ್ಷೇಪಾರ್ಹವಾಗಿ ತೋರಿಸಲಾಗಿದ್ದು, ಅದರ ಬಿಡುಗಡೆಗೆ ತಡೆ ನೀಡಬೇಕು ಎಂಬ ಮನವಿಯನ್ನು ಕೋರ್ಟ್ ತಳ್ಳಿಹಾಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.