ಎಷ್ಟೇ ಸಿನಿಮಾ ಸೋತ್ರೂ ಪೂಜಾ ಹೆಗ್ಡೆಗೆ ಸಿಕ್ತಿದೆ ಹೊಸ ಆಫರ್ಸ್​; ಈಗ ವಿಜಯ್​ ಜತೆ ‘ಜನ ಗಣ ಮನ’

ಎಷ್ಟೇ ಸಿನಿಮಾ ಸೋತ್ರೂ ಪೂಜಾ ಹೆಗ್ಡೆಗೆ ಸಿಕ್ತಿದೆ ಹೊಸ ಆಫರ್ಸ್​; ಈಗ ವಿಜಯ್​ ಜತೆ ‘ಜನ ಗಣ ಮನ’
ಪೂಜಾ ಹೆಗ್ಡೆ

Jana Gana Mana: ಪೂಜಾ ಹೆಗ್ಡೆ ನಟಿಸಿದ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಸೋಲು ಕಂಡಿವೆ. ಹಾಗಿದ್ದರೂ ಕೂಡ ಅವರ ಚಾರ್ಮ್​ ಕಡಿಮೆ ಆಗಿಲ್ಲ.

TV9kannada Web Team

| Edited By: Madan Kumar

May 14, 2022 | 9:02 AM

ಭಾರತೀಯ ಚಿತ್ರರಂಗದಲ್ಲಿ ನಟಿ ಪೂಜಾ ಹೆಗ್ಡೆ(Pooja Hegde)  ಅವರು ಬಹುಬೇಡಿಕೆಯ ಹೀರೋಯಿನ್​ ಆಗಿ ಮಿಂಚುತ್ತಿದ್ದಾರೆ. ಅನೇಕ ಸ್ಟಾರ್​ ನಟರ ಸಿನಿಮಾಗಳಲ್ಲಿ ಅವರು ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಬೆಡಗಿಯ ಸಿನಿಮಾಗಳು (Pooja Hegde Movies) ಗೆಲುವು ಕಂಡಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಅದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಇತ್ತೀಚಿನ ದಿನಗಳಲ್ಲಿ ಅವರು ನಟಿಸಿದ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಸೋಲು ಕಂಡಿವೆ. ಪೂಜಾ ಹೆಗ್ಡೆ ಪಾಲಿಗೆ 2022ರ ವರ್ಷ ನಿಜಕ್ಕೂ ದುರದೃಷ್ಟಕರ ಎಂದೇ ಹೇಳಬೇಕು. ಅವರು ನಟಿಸಿದ ‘ರಾಧೆ ಶ್ಯಾಮ್​’, ‘ಆಚಾರ್ಯ’ ಹಾಗೂ ‘ಬೀಸ್ಟ್​’ ಸಿನಿಮಾಗಳು ಅಭಿಮಾನಿಗಳ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ವಿಫಲ ಆಗಿವೆ. ಇದರಿಂದಾಗಿ ಪೂಜಾ ಹೆಗ್ಡೆ ಡಿಮ್ಯಾಂಡ್ ಕಡಿಮೆ ಆಗಬಹುದು ಎಂದು ಊಹಿಸಿದ್ದವರಿಗೆ ಇಲ್ಲೊಂದು ಅಚ್ಚರಿ ಎದುರಾಗಿದೆ. ಅವರು ಹೊಸ ಹೊಸ ಚಿತ್ರಗಳಿಗೆ ಆಯ್ಕೆ ಆಗುತ್ತಲೇ ಇದ್ದಾರೆ. ಈಗ ಖ್ಯಾತ ನಟ ವಿಜಯ್​ ದೇವರಕೊಂಡ (Vijay Deverakonda) ಜೊತೆ ‘ಜನ ಗಣ ಮನ’ ಚಿತ್ರದಲ್ಲಿ ಅವರು ನಟಿಸುತ್ತಾರೆ ಎಂದು ಸುದ್ದಿ ಆಗಿದೆ.

ಪೂಜಾ ಹೆಗ್ಡೆ ಸೋಲಿನ ಹಿಸ್ಟರಿ​: ಈ ವರ್ಷ ಮಾರ್ಚ್​ 11ರಂದು ‘ರಾಧೆ ಶ್ಯಾಮ್’ ಸಿನಿಮಾ ತೆರೆಗೆ ಬಂದಿತು. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಅಷ್ಟಾಗಿ ನಿರೀಕ್ಷೆ ಇರಲಿಲ್ಲ. ಟ್ರೇಲರ್ ನೋಡಿದ ಫ್ಯಾನ್ಸ್ ನಿರಾಸೆಗೊಂಡಿದ್ದರು. ಸಿನಿಮಾ ಕೂಡ ಮಕಾಡೆ ಮಲಗಿತು. ಪೂಜಾ ಹೆಗ್ಡೆ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿತ್ತು. ಆದರೆ, ಸಿನಿಮಾ ಸೋಲು ಅನುಭವಿತು. ಪೂಜಾ ಹೆಗ್ಡೆ ಅವರ ಈ ವರ್ಷದ ಮೊದಲ ಸೋಲು ಇದು. ಇದಾದ ನಂತರ ತೆರೆಗೆ ಬಂದಿದ್ದು ದಳಪತಿ ವಿಜಯ್ ನಟನೆಯ ‘ಬೀಸ್ಟ್’. ಟ್ರೇಲರ್ ಮೂಲಕ ಈ ಸಿನಿಮಾ ನಿರೀಕ್ಷೆ ಸೃಷ್ಟಿ ಮಾಡಿತ್ತು. ಆದರೆ, ಸಿನಿಮಾ ನೋಡಿದ ಫ್ಯಾನ್ಸ್ ನಿರಾಸೆಗೊಂಡರು. ಅದರಲ್ಲೂ, ಪೂಜಾ ಹೆಗ್ಡೆ ಪಾತ್ರ ಕೆಲವೇ ದೃಶ್ಯಗಳಿಗೆ ಸೀಮಿತವಾಗಿತ್ತು. ಇನ್ನು, ಏಪ್ರಿಲ್ 29ರಂದು ತೆರೆಗೆ ಬಂದ ‘ಆಚಾರ್ಯ’ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಲ್ಕು ದೃಶ್ಯಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಈ ಚಿತ್ರ ಕೂಡ ಸೋಲು ಕಂಡಿದೆ. ಹಲವು ಹಿಟ್ ಚಿತ್ರಗಳನ್ನು ನೀಡಿದ ಕೊರಟಾಲ ಶಿವ ಅವರು ಉತ್ತಮ ಸಿನಿಮಾ ಕಟ್ಟಿಕೊಡಲು ವಿಫಲರಾಗಿದ್ದಾರೆ. ರಾಮ್ ಚರಣ್ ಹಾಗೂ ಚಿರಂಜೀವಿ ಕಾಂಬಿನೇಷನ್ ಕೆಲಸ ಮಾಡಿಲ್ಲ. ಈ ಚಿತ್ರದ ಮೂಲಕ ಪೂಜಾ ಹೆಗ್ಡೆ ಅವರು ಈ ವರ್ಷ ಮೂರನೇ ಬಾರಿಗೆ ಸೋಲು ಕಾಣುವಂತಾಯಿತು.

ಪೂಜಾ ಹೆಗ್ಡೆ ಕೈಯಲ್ಲಿವೆ ಹೈ-ವೋಲ್ಟೇಜ್​ ಸಿನಿಮಾಗಳು:

ಎಷ್ಟೇ ಸೋಲು ಕಂಡರೂ ಕೂಡ ಪೂಜಾ ಹೆಗ್ಡೆ ಚಾರ್ಮ್​ ಕಡಿಮೆ ಆಗಿಲ್ಲ. ಅವರು ಸಲ್ಮಾನ್​ ಖಾನ್​ ನಟನೆಯ ‘ಕಭಿ ಈದ್​ ಕಭಿ ದಿವಾಲಿ’ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇದಲ್ಲದೇ ಮಹೇಶ್​ ಬಾಬು ಅವರ 28ನೇ ಚಿತ್ರಕ್ಕೂ ಪೂಜಾ ಹೆಗ್ಡೆ ನಾಯಕಿ. ಅದರ ಜೊತೆಗೆ ‘ಜನ ಗಣ ಮನ’ ಸಿನಿಮಾಗೂ ಅವರನ್ನೇ ಅಪ್ರೋಚ್​ ಮಾಡಲಾಗಿದೆ ಎಂದು ಸುದ್ದಿ ಕೇಳಿಬರುತ್ತಿದೆ. ವಿಜಯ್​ ದೇವರಕೊಂಡ ಹೀರೋ ಆಗಿ ನಟಿಸುತ್ತಿರುವ ಈ ಚಿತ್ರಕ್ಕೆ ಪುರಿ ಜಗನ್ನಾಥ್​ ನಿರ್ದೇಶನ ಮಾಡುತ್ತಿದ್ದಾರೆ. ಪೂಜಾ ಹೆಗ್ಡೆ ಆಯ್ಕೆ ಬಗ್ಗೆ ಕೆಲವೆಡೆ ವರದಿ ಪ್ರಕಟ ಆಗಿದೆ. ಆದರೆ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ. ಅದಕ್ಕಾಗಿ ಫ್ಯಾನ್ಸ್​ ಕಾಯುತ್ತಿದ್ದಾರೆ.

‘ಜನ ಗಣ ಮನ’ ಸಿನಿಮಾ ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿಯಲ್ಲಿ ಮೂಡಿ ಬರಲಿದೆ. ವಿಜಯ್​ ದೇವರಕೊಂಡ ಅವರು ಆರ್ಮಿ ಆಫೀಸರ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada