ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ’ ಸಿನಿಮಾ ಗೆದ್ದು ಬೀಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಈವರೆಗೆ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ‘ಪುಷ್ಪ’ ಒಟಿಟಿಯಲ್ಲಿ ರಿಲೀಸ್ ಆದ ಹೊರತಾಗಿಯೂ ಕೆಲ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಇನ್ನೂ ಪ್ರದರ್ಶನ ಕಾಣುತ್ತಿದೆ. ವಿಶ್ವಮಟ್ಟದಲ್ಲಿ ‘ಪುಷ್ಪ’ ಇಷ್ಟು ದೊಡ್ಡ ಗಳಿಕೆ ಮಾಡಿರುವುದು ‘ಪುಷ್ಪ 2’ (Pushpa 2) ಮೇಲಿನ ನಿರೀಕ್ಷೆ ಹೆಚ್ಚಲು ಕಾರಣವಾಗಿದೆ. ‘ಪುಷ್ಪ’ ಚಿತ್ರದ ಮೂಲಕ ಅಲ್ಲು ಅರ್ಜುನ್ ಇದೇ ಮೊದಲ ಬಾರಿಗೆ ಬಾಲಿವುಡ್ಗೆ ಕಾಲಿಟ್ಟಂತಾಗಿದ್ದು, ಮೊದಲ ಚಿತ್ರದಲ್ಲೇ ಯಶಸ್ಸು ಕಂಡಿದ್ದಾರೆ. ಈ ಸಿನಿಮಾ ಹಿಂದಿ ಗಲ್ಲಾ ಪೆಟ್ಟಿಗೆಯಲ್ಲಿ 91 ಕೋಟಿ ರೂಪಾಯಿ ಬಾಚಿಕೊಂಡಿರುವುದು ಸಿನಿಮಾದ ಹೆಚ್ಚುಗಾರಿಕೆ. ಈಗ ‘ಪುಷ್ಪ 2’ ಸಿನಿಮಾ ಮೇಲೆ ಎಲ್ಲರ ಕಣ್ಣಿದೆ. ಈ ಸಿನಿಮಾದ ಶೂಟಿಂಗ್ ಇನ್ನೇನು ಆರಂಭಗೊಳ್ಳಬೇಕಿದೆ. ಅದಕ್ಕೂ ಮೊದಲೇ ಈ ಚಿತ್ರಕ್ಕೆ 400 ಕೋಟಿ ರೂಪಾಯಿ ಬೇಡಿಕೆ ಬಂದಿದೆ.
ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ಎಲ್ಲ ಕಡೆಗಳಲ್ಲೂ ಒಟಿಟಿಯದ್ದೇ ಹವಾ. ಬಹುಬೇಗನೆ ಒಟಿಟಿ ವ್ಯಾಪ್ತಿ ಹೆಚ್ಚುತ್ತಿದೆ. ದೊಡ್ಡದೊಡ್ಡ ಸಿನಿಮಾಗಳ ಮೇಲೆ ಒಟಿಟಿ ಸಂಸ್ಥೆಗಳು ಕಣ್ಣಿಡುತ್ತಿವೆ. ಥಿಯೇಟರ್ಗೂ ಮೊದಲೇ ಸಿನಿಮಾ ತಮ್ಮ ಪ್ಲಾಟ್ಫಾರ್ಮ್ನಲ್ಲಿ ರಿಲೀಸ್ ಆದರೆ, ಅದಕ್ಕೆ ಹೆಚ್ಚು ಬೇಡಿಕೆ ಸೃಷ್ಟಿಯಾಗಲಿದೆ ಎಂಬುದನ್ನು ಒಟಿಟಿ ಸಂಸ್ಥೆಗಳು ಅರಿತಿವೆ. ಆದರೆ, ‘ಪುಷ್ಪ 2’ ಸಂಸ್ಥೆಗೆ ಬಂದಿದ್ದು ಒಟಿಟಿ ಬೇಡಿಕೆಯಾ? ಅಲ್ಲ. ಚಿತ್ರಮಂದಿರ ಹಕ್ಕನ್ನು ನೀಡುವಂತೆ ಕೋರಿ ಖ್ಯಾತ ನಿರ್ಮಾಣ ಸಂಸ್ಥೆಯೊಂದು 400 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದೆ ಎನ್ನಲಾಗುತ್ತಿದೆ.
‘ಪುಷ್ಪ’ ಸಿನಿಮಾದ ಅದ್ದೂರಿತನ, ದೃಶ್ಯ ವೈಭವ ಪ್ರೇಕ್ಷಕರಿಗೆ ಇಷ್ಟವಾಗಿದೆ. ಹೀಗಾಗಿ ‘ಪುಷ್ಪ 2’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಕಾರಣಕ್ಕೆ ಅನೇಕರು ಇದರ ಲಾಭ ಪಡೆಯೋಕೆ ಪ್ರಯತ್ನಿಸುತ್ತಿದ್ದಾರೆ. ಎಲ್ಲ ಭಾಷೆಗಳಲ್ಲಿ ‘ಪುಷ್ಪ’ ಸಿನಿಮಾ ರಿಲೀಸ್ ಮಾಡಲು ಚಿತ್ರದ ಥಿಯೇಟರ್ ಹಕ್ಕುಗಳನ್ನು ನೀಡುವಂತೆ ಉತ್ತರ ಭಾರತದ ನಿರ್ಮಾಣ ಸಂಸ್ಥೆ ಮುಂದೆ ಬಂದಿದ್ದು, ದೊಡ್ಡ ಮೊತ್ತದ ಆಫರ್ ನೀಡಿದೆ. ಈ ವಿಚಾರದ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ಈ ಚಿತ್ರಕ್ಕೆ ಒಟಿಟಿಯಲ್ಲಿ ದೊಡ್ಡ ಮೊತ್ತದ ಬೇಡಿಕೆ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇನ್ನು, ಸ್ಯಾಟಲೈಟ್ ಹಕ್ಕು ಕೂಡ ದೊಡ್ಡ ಮಟ್ಟದಲ್ಲಿಯೇ ಸೇಲ್ ಆಗಲಿದೆ. ಆದರೆ, ಈ ಬಗ್ಗೆ ನಿರ್ಮಾಣ ಸಂಸ್ಥೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: BPL 2022: ವಿಕೆಟ್ ಪಡೆದಾಗ ಬಾಂಗ್ಲಾದೇಶ ಬೌಲರ್ ಅಲ್ಲು ಅರ್ಜುನ್ ಪುಷ್ಪ ಅವತಾರ ತಾಳಿದ್ದು ನೋಡಿ
Rashmika Mandanna: ‘ಪುಷ್ಪ 2’ ಬಗ್ಗೆ ಹೊಸ ಅಪ್ಡೇಟ್ ನೀಡಿದ ರಶ್ಮಿಕಾ ಮಂದಣ್ಣ