ಮದುವೆ ಆಗೋದಾಗಿ ನಂಬಿಸಿ ಮೋಸ: ‘ಪುಷ್ಪ’ ಚಿತ್ರದ ಕಲಾವಿದನ ವಿರುದ್ಧ ಕೇಸ್
ಪುಷ್ಪ ಚಿತ್ರದ ನಟ ಶ್ರೀತೇಜ್ ಅವರನ್ನು ಹೈದರಾಬಾದ್ ಪೊಲೀಸರು 20 ಲಕ್ಷ ರೂಪಾಯಿ ವಂಚನೆ ಆರೋಪದ ಮೇಲೆ ಬಂಧಿಸಿದ್ದಾರೆ. ಮದುವೆಯ ಭರವಸೆ ನೀಡಿ ಮಹಿಳೆಯನ್ನು ಮೋಸ ಮಾಡಿದ ಆರೋಪವೂ ಅವರ ಮೇಲಿದೆ. ಈ ಹಿಂದೆ ಅವರು ಮತ್ತೊಂದು ವಿವಾದದಲ್ಲಿ ಭಾಗಿಯಾಗಿದ್ದರು. ಪೊಲೀಸರು ಅವರ ವಿಚಾರಣೆ ನಡೆಸುತ್ತಿದ್ದಾರೆ.
‘ಪುಷ್ಪ’ ಸಿನಿಮಾದಲ್ಲಿ ನಟಿಸಿದ್ದ ತೆಲುಗು ಕಲಾವಿದ ಶ್ರೀತೇಜ್ ವಿರುದ್ಧ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಅವರು ಈಗ ವಿವಾದದ ಕೇಂದ್ರ ಬಿಂದು ಆಗಿದ್ದಾರೆ. ಮದುವೆ ಆಗೋದಾಗಿ ಮಹಿಳೆಯನ್ನು ನಂಬಿಸಿ ಮೋಸ ಮಾಡಿದ ಪ್ರಕರಣ ಇವರ ವಿರುದ್ಧ ದಾಖಲಾಗಿದೆ. ಸಂತ್ರಸ್ತೆಯನ್ನು ನಂಬಿಸಿ 20 ಲಕ್ಷ ರೂಪಾಯಿ ಪಡೆದ ಆರೋಪವೂ ಇವರ ಮೇಲೆ ಇದೆ. ಸದ್ಯ ಪೊಲೀಸರು ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸಂತ್ರಸ್ತೆ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ‘ಶ್ರೀ ತೇಜ್ ಮದುವೆ ಆಗುವುದಾಗಿ ನಂಬಿಸಿದ್ದರು. ಆದರೆ, ಈಗ ವಿವಾಹ ಆಗಲು ಒಪ್ಪುತ್ತಿಲ್ಲ. ಅಲ್ಲದೆ ಅವರು ನನಗೆ ಕಿರುಕುಳ ನೀಡಿದ್ದಾರೆ. ನನ್ನಿಂದ ಹಣ ಪಡೆದಿದ್ದಾರೆ’ ಎಂದು ಸಂತ್ರಸ್ತೆ ಅವರು ಆರೋಪಿಸಿದ್ದಾರೆ. ಸದ್ಯ ಕ್ರಿಮಿನಲ್ ಬ್ರ್ಯಾಂಚ್ನವರು ಶ್ರೀ ತೇಜ್ನ ವಿಚಾರಣೆ ಮಾಡುತ್ತಿದ್ದಾರೆ.
ಈ ಮೊದಲು ‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಜಗದೀಶ್ ಅವರು ಅರೆಸ್ಟ್ ಆಗಿದ್ದರು. ಜೂನಿಯರ್ ಆರ್ಟಿಸ್ಟ್ ಆತ್ಮಹತ್ಯೆ ಪ್ರಕರಣದಲ್ಲಿ ಅವರು ಜೈಲು ಸೇರಿದ್ದರು. ಈ ಬೆನ್ನಲ್ಲೇ ಸಿನಿಮಾ ತಂಡದ ಮತ್ತೋರ್ವ ಕಲಾವಿದ ಬಂಧನಕ್ಕೆ ಒಳಗಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಆರೋಪಗಳು ಎದುರಾಗುತ್ತಿರುವುದರಿಂದ ಟಾಲಿವುಡ್ ಚಿತ್ರರಂಗ ತಲೆ ತಗ್ಗಿಸುವಂತೆ ಆಗಿದೆ.
ಇದೇ ಮೊದಲಲ್ಲ
ಸಂತ್ರಸ್ತೆ ಏಪ್ರಿಲ್‌ನಲ್ಲಿಯೂ ಶ್ರೀತೇಜ್ ವಿರುದ್ಧ ದೂರು ದಾಖಲಿಸಿದ್ದರು. ಆ ಸಮಯದಲ್ಲಿ ನಟ ಸಂತ್ರಸ್ತೆಯನ್ನು ಪುಸಲಾಯಿಸಿದ್ದ. ಎಲ್ಲಾ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದ. ಈ ಕಾರಣಕ್ಕಾಗಿ ಸಂತ್ರಸ್ತೆ ತನ್ನ ದೂರನ್ನು ಹಿಂಪಡೆದಿದ್ದರು. ಈಗ ಅವರು ಸಹಿಸಿಕೊಳ್ಳಲಾಗದೆ ಮತ್ತೆ ದೂರು ನೀಡಿದ್ದಾರೆ.
ಮತ್ತೊಂದು ಹಗರಣ
ಇದಕ್ಕೂ ಮುನ್ನ ಬ್ಯಾಂಕ್ ಅಧಿಕಾರಿಯೊಬ್ಬರ ಪತ್ನಿಯ ಜೊತೆ ಶ್ರೀತೇಜ್ ಅವರು ಅಕ್ರಮ ಸಂಬಂಧ ಹೊಂದಿದ್ದ ಆರೋಪ ಇತ್ತು. ನಂತರ ಮಹಿಳೆಯ ಪತಿ ಹೃದಯಾಘಾತದಿಂದ ನಿಧನ ಹೊಂದಿದ್ದರು. ಇದು ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿತ್ತು.
ಇದನ್ನೂ ಓದಿ: ‘ಈ ಸೆಟ್ ಮನೆಯಂತಾಗಿತ್ತು’; ‘ಪುಷ್ಪ 2’ ಶೂಟ್ ಮುಗಿಸಿ ಭಾವುಕರಾದ ರಶ್ಮಿಕಾ ಮಂದಣ್ಣ
ಸಿನಿಮಾ
2019ರಲ್ಲಿ ರಿಲೀಸ್ ಆದ ರಾಮ್ ಗೋಪಾಲ್ ವರ್ಮಾ ಅವರ ‘ಲಕ್ಷ್ಮೀ ಎನ್ಟಿಆರ್’ ಸಿನಿಮಾ ಮೂಲಕ ಗಮನ ಸೆಳೆದರು. ಈ ಚಿತ್ರದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪಾತ್ರವನ್ನು ನಿರ್ವಹಿಸಿದರು. ಎನ್ಟಿಆರ್ ಬಗ್ಗೆ ಸಿದ್ಧವಾದ ‘ಕಥಾನಾಯಕುಡು’ ಮತ್ತು ‘ಮಹಾನಾಯಕುಡು’ ಚಿತ್ರಗಳಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ. ಎಸ್. ರಾಜಶೇಖರ್ ರೆಡ್ಡಿ ಪಾತ್ರವನ್ನು ನಿರ್ವಹಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.