ಆ ಕರಾಳ ರಾತ್ರಿಗೆ 24 ವರ್ಷ, ರಾಜ್ಕುಮಾರ್ 108 ದಿನಗಳ ವನವಾಸದ ಹಿನ್ನೋಟ
ಡಾ ರಾಜ್ಕುಮಾರ್ ಅಪಹರಣ ಕರ್ನಾಟಕ ಚರಿತ್ರೆಯಲ್ಲಿಯೇ ಅತ್ಯಂತ ಕರಾಳ ಘಟನೆಗಳಲ್ಲಿ ಒಂದು. ವೀರಪ್ಪನ್, ಕನ್ನಡದ ಮೇರುನಟ ಡಾ ರಾಜ್ಕುಮಾರ್ ಅವರನ್ನು ಅಪಹರಿಸಿ 24 ವರ್ಷಗಳಾಗಿವೆ. ಅಂದಿನಂತೆ ಇಂದೂ ಸಹ ಭೀಮನ ಅಮವಾಸ್ಯೆ. ಬರೋಬ್ಬರಿ 108 ದಿನಗಳ ಕಾಲ ರಾಜ್ಕುಮಾರ್ ವನವಾಸ ಅನುಭವಿಸಿದ್ದರು. ಆ ಸಂದರ್ಭದಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳ ಮಾಹಿತಿ ಇಲ್ಲಿದೆ.
24 ವರ್ಷದ ಹಿಂದೆ ಜುಲೈ 30, 2000 ಅಂದೂ ಸಹ ಇಂದಿನಂತೆ ಭೀಮನ ಅಮವಾಸ್ಯೆ. ತಿರುಪತಿಗೆ ಹೋಗಿದ್ದ ರಾಜ್ಕುಮಾರ್ ಹುಟ್ಟೂರು ಗಾಜನೂರಿಗೆ ಬಂದಿದ್ದರು. ಕಟ್ಟಿಸಿದ್ದ ಹೊಸ ಮನೆಯ ಗೃಹಪ್ರವೇಶ ಮಾಡುವ ಯೋಜನೆಯಲ್ಲಿದ್ದರು. ಜುಲೈ 30 ರಂದು ರಾತ್ರಿ 9:30 ಆಗಿರಬಹುದು ಊಟ ಮುಗಿಸಿ ಒಂದು ಹದಿನೈದು ನಿಮಿಷವಾಗಿತ್ತು, ಬಂದೂಕು ಹಿಡಿದು ಒಳನುಗ್ಗಿದ ಸುಮಾರು 15 ಮಂದಿ ‘ಸಾರ್ ನಮಗೆ ಬೇಕು’ ಎಂದು ತಮಿಳಿನಲ್ಲಿ ಹೇಳಿದರು. ಆ ಹದಿನೈದು ಮಂದಿಯಲ್ಲಿ ನರಹಂತಕ ವೀರಪ್ಪನ್ ಸಹ ಇದ್ದ. ಬಂದೂಕು ಹಿಡಿದು ಬಂದಿದ್ದ ವ್ಯಕ್ತಿಗಳು ಸಾವಧಾನವಾಗಿಯೇ ಮಾತನಾಡುತ್ತಿದ್ದರು. ಅಗೌರವದಿಂದ ಮಾತನಾಡಲಿಲ್ಲ, ನೀವು ನಮಗೆ ಸಹಕರಿಸಿ ನಾವು ನಿಮಗೆ ಸಹಕರಿಸುತ್ತೇವೆ ಎಂದರು. ಕೊನೆಗೆ ರಾಜ್ಕುಮಾರ್, ನಾಗಪ್ಪ, ಎಸ್ಎ ಗೋವಿಂದರಾಜು, ನಾಗೇಶ್ ಅವರುಗಳನ್ನು ಅಪಹರಿಸಲಾಯ್ತು. ಜೊತೆಗೆ ಕಾರು ಚಾಲಕನನ್ನೂ ಅಪಹರಿಸುವ ಯೋಚನೆ ಇತ್ತು. ಆದರೆ ಪಾರ್ವತಮ್ಮನವರು ಬೆಂಗಳೂರಿಗೆ ಹೋಗಬೇಕಾದ ಕಾರಣ ಡ್ರೈವರ್ ಅನ್ನು ಅಲ್ಲಿಯೇ ಬಿಡಲಾಯ್ತು.
ಆಗಸ್ಟ್ 02, 2002
ಜುಲೈ 30ರಂದು ಅಪಹರಣ ನಡೆದ ದಿನ ವೀರಪ್ಪನ್ ಪಾರ್ವತಮ್ಮನ ಕೈಗೆ ಕ್ಯಾಸೆಟ್ ಒಂದನ್ನು ಕೊಟ್ಟಿದ್ದರು. ಅದರಲ್ಲಿ ತಮ್ಮ ಬೇಡಿಕೆ ಈಡೇರಿಕೆಗೆ ಯತ್ನಿಸುವಂತೆ ಹೇಳಲಾಗಿತ್ತು. ಹಾಗಾಗಿ ಆಗಸ್ಟ್ 2 ರಂದು ನಕ್ಕೀರನ್ ಗೋಪಾಲನ್ ಅನ್ನು ಮೊದಲ ಸಂಧಾನಕಾರನಾಗಿ ಬಾರಿಗೆ ಕಾಡಿಗೆ ಕಳಿಸಲಾಯ್ತು. 108 ದಿನಗಳಲ್ಲಿ ಬರೋಬ್ಬರಿ ಐದು ಬಾರಿ ನಕ್ಕೀರನ್ ಕಾಡಿಗೆ ಹೋಗಿದ್ದ. ಹೋದ ಪ್ರತಿಬಾರಿ ಹೊಸ ಹೊಸ ಬೇಡಿಕೆಗಳನ್ನು ಹೊತ್ತು ತರುತ್ತಿದ್ದ. ಕೆಲವು ಮೂಲಗಳ ಪ್ರಕಾರ ಈ ಪ್ರಕ್ರಿಯೆಯಲ್ಲಿ ನಕ್ಕೀರನ್ ಗೋಪಾಲನ್ ಭಾರಿ ಮೊತ್ತದ ಹಣವನ್ನೂ ಮಾಡಿಕೊಂಡನಂತೆ.
ಆಗಸ್ಟ್ 4, 2002
ವೀರಪ್ಪನ್ ಕಳಿಸಿದ್ದ ಮೊದಲ ಬೇಡಿಕೆಗಳ ಪಟ್ಟಿ ಆಗಸ್ಟ್ 4 ರಂದು ತಲುಪಿತ್ತು. ಬಹುತೇಕ ಬೇಡಿಕೆಗಳು ಈಡೇರಿಸಲು ಅಸಾಧ್ಯವಾಗಿದ್ದವು. ಕರ್ನಾಟಕದಲ್ಲಿ ತಮಿಳು ಭಾಷೆಯನ್ನು ಎರಡನೇ ಆಡಳಿತ ಭಾಷೆಯನ್ನಾಗಿ ಘೋಷಿಸಬೇಕೆಂಬ ಬೇಡಿಕೆಯೂ ಇತ್ತು. ತಮಿಳುನಾಡಿಗೆ 205 ಟಿಎಂಸಿ ನೀರು ಬಿಡಬೇಕು ಎನ್ನುವ ಬೇಡಿಕೆ ಇತ್ತು. ಕಾಡಿನಲ್ಲಿ ಕುಳಿತಿದ್ದ ವೀರಪ್ಪನ್ ಥೇಟ್ ರಾಜಕಾರಣಿಯಂತೆ ಬೇಡಿಕೆಗಳನ್ನು ಇಟ್ಟಿದ್ದ. ಇದು ಎರಡೂ ಸರ್ಕಾರಗಳಿಗೆ ಆತಂಕ ಮೂಡಿಸಿತು. ವೀರಪ್ಪನ್ಗೆ ಎಲ್ಟಿಟಿಇ ಅಥವಾ ಇನ್ಯಾವುದೇ ಉಗ್ರ ಸಂಘಟನೆಗಳ ನೆರವು ಸಿಕ್ಕಿದೆ ಎಂಬ ಅನುಮಾನವನ್ನು ಖಾತ್ರಿಪಡಿಸಿತ್ತು ಆ ಬೇಡಿಕೆಗಳು.
ಸೆಪ್ಟೆಂಬರ್, 2002
ಸೆಪ್ಟೆಂಬರ್ ತಿಂಗಳಲ್ಲಿ ಕೆಲವು ಮುಖ್ಯ ಘಟನೆಗಳು ನಡೆದವು. ಕೆಲ ಅಭಿಮಾನಿಗಳು ರಾಜ್ಕುಮಾರ್ ಅವರನ್ನು ಹುಡುಕುತ್ತಾ ಕಾಡಿಗೆ ನುಗ್ಗಿದರು. ರಜನೀಕಾಂತ್ ಸೇರಿದಂತೆ ಹಲವರು ಪ್ರತಿಭಟನೆ ನಡೆಸಿ ಸರ್ಕಾರಗಳ ಮೇಲೆ ಒತ್ತಡ ಹಾಕಿದರು. ಇದೇ ತಿಂಗಳಲ್ಲಿ ಯಾರೂ ಊಹಿಸದ ಘಟನೆ ನಡೆಯಿತು. ರಾಜ್ಕುಮಾರ್ ಜೊತೆಗೆ ಅಪಹರಣಗೊಂಡಿದ್ದ ನಾಗಪ್ಪ, ವೀರಪ್ಪನ್ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ರಾಜ್ಯಕ್ಕೆ ಮರಳಿದ್ದ. ಇದು ಸರ್ಕಾರಕ್ಕೆ ತೀವ್ರ ಆತಂಕ್ಕಕ್ಕೆ ತಳ್ಳಿತು. ಇತರೆ ಒತ್ತೆಯಾಳುಗಳ ಜೀವದ ಬಗ್ಗೆ ಆತಂಕ ಮೂಡಿಸಿತು.
ಅಕ್ಟೋಬರ್ , 2002
ಅಕ್ಟೋಬರ್ ತಿಂಗಳಿನಲ್ಲಿ ಸಹ ಕೆಲವು ಮಹತ್ವದ ಬೆಳವಣಿಗೆಗಳು ನಡೆದವು. ವೀರಪ್ಪನ್ನ ಹೊಸ ಕ್ಯಾಸೆಟ್ ಸರ್ಕಾರವನ್ನು ತಲುಪಿತ್ತು. ಸ್ವತಃ ರಾಜ್ಕುಮಾರ್ ಧ್ವನಿ ಅದರಲ್ಲಿತ್ತು. ಸಂಧಾನಕಾರ ನಕ್ಕೀರನ್ ಗೋಪಾಲನ್ ಅನ್ನು ಬದಲಾಯಿಸಿ ಆ ಸ್ಥಾನಕ್ಕೆ ನೆಡುಮಾರನ್ ಅನ್ನು ನೇಮಿಸಬೇಕು ಎಂಬ ಬೇಡಿಕೆ ಇತ್ತು. ನಕ್ಕೀರನ್ ಗೋಪಾಲನ್ ಮೇಲೆ ವೀರಪ್ಪನ್ ನಂಬಿಕೆ ಕಳೆದುಕೊಂಡಿದ್ದ. ನೆಡುಮಾರನ್ ಜೊತೆಗೆ ಫ್ರೊಫೆಸರ್ ಕಲ್ಯಾಣಿ ಸಹ ಸಂಧಾನಕ್ಕೆ ಹೋಗಿದ್ದರು. ನೆಡುಮಾರನ್ ಸಂಧಾನಕ್ಕೆ ಯಶಸ್ಸು ಸಿಕ್ಕಿ ನವೆಂಬರ್ 16 ರಂದು ರಾಜ್ಕುಮಾರ್ ಅಳಿಯ ಗೋವಿಂದರಾಜು ಅವರ ಬಿಡುಗಡೆಯನ್ನು ವೀರಪ್ಪನ್ ಮಾಡಿದ. ಅವರಿಗೆ ಮಧುಮೇಹ ಮತ್ತು ಹೃದಯ ಸಮಸ್ಯೆ ಇತ್ತು.
ನವೆಂಬರ್ 9, 2002
ನವೆಂಬರ್ 9 ರಂದು ಫ್ರೊಫೆಸರ್ ಕಲ್ಯಾಣಿ, ಸುಕುಮಾರನ್, ನೆಡುಮಾರನ್ ಅವರುಗಳ ಜೊತೆಗೆ ತಮಿಳು ಬರುತ್ತಿದ್ದ ಕರ್ನಾಟಕದ ವೈದ್ಯೆ ಭಾನು ಎಂಬಾಕೆಯೂ ಕಾಡಿಗೆ ಹೋದರು. ಒಬ್ಬ ಉದ್ಯಮಿಯೂ ಜೊತೆಗೆ ಇದ್ದ. ರಾಜ್ಕುಮಾರ್ ಅವರ ಆರೋಗ್ಯವನ್ನು ಪರಿಶೀಲನೆ ಮಾಡಿದ ಭಾನು. ರಾಜ್ಕುಮಾರ್ ಅವರ ಆರೋಗ್ಯ ತೀರ ಹದಗೆಟ್ಟಿದೆ. ಅವರು ಇಷ್ಟು ದಿನ ಇಲ್ಲಿ ಬದುಕಿರುವುದೇ ಹೆಚ್ಚು ಎಂದರು. ಇದು ವೀರಪ್ಪನ್ಗೆ ಆತಂಕ ತಂದಿದೆ. ರಾಜ್ಕುಮಾರ್ ಕಾಡಿನಲ್ಲಿ ಸತ್ತರೆ ಎರಡೂ ಸರ್ಕಾರಗಳು ನನ್ನನ್ನು ಮುಗಿಸುತ್ತವೆ ಎಂಬ ಅರಿವಿದ್ದಿದ್ದರಿಂದ ವೀರಪ್ಪನ್ ಹೆದರಿಬಿಟ್ಟ. ಬಾನು ಹೋಗಿ ಬಂದ ಮೇಲೆ ರಾಜ್ಕುಮಾರ್ ಬಿಡುಗಡೆ ಖಾತ್ರಿ ಎಂಬ ಸುದ್ದಿ ಅದಾಗಲೇ ಹರಡಿಬಿಟ್ಟಿತು.
ನವೆಂಬರ್ 18, 2002
ನವೆಂಬರ್ 18 ರಂದು ತಮಿಳುನಾಡಿನ ಬನ್ನಾರಿ ಬಳಿ ಒತ್ತೆಯಾಳುಗಳನ್ನು ಬಂಧಮುಕ್ತ ಮಾಡಲಾಯ್ತು. ಅಮ್ಮಾಪೇಟ್ ಎಂಬಲ್ಲಿ ಅವರುಗಳನ್ನು ಬಿಡುಗಡೆಗೊಳಿಸಿ ವೀರಪ್ಪನ್ ಕಳಿಸಿದ. ಬಿಡುಗಡೆಗೆ ಮುನ್ನ ರಾಜ್ಕುಮಾರ್ ಅವರಿಗೆ ಶಾಲು ಹೊದಿಸಿ ಸನ್ಮಾನವನ್ನು ಸಹ ವೀರಪ್ಪನ್ ಮಾಡಿದ. ರಾಜ್ಕುಮಾರ್ ಅವರನ್ನು ಹೆಲಿಕಾಪ್ಟರ್ ಮೂಲಕ ರಾಜ್ಯಕ್ಕೆ ಕರೆತರಲಾಯ್ತು. ರಾಜ್ಕುಮಾರ್ ಅವರನ್ನು ನೋಡಲು ಲಕ್ಷಾಂತರ ಜನ ಬೆಂಗಳೂರಿನಲ್ಲಿ ಸೇರಿದ್ದರು. ಬೆಂಗಳೂರಿಗೆ ರಾಜ್ಕುಮಾರ್ ವಾಪಸ್ ಆದ ದಿನವೇ ಇಲ್ಲಿ ಒಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಅಣ್ಣಾವ್ರು ಮಾತನಾಡಿದ್ದರು. ಸ್ವಲ್ಪ ದೇಹ ಕೃಷವಾಗಿತ್ತು, ಬಣ್ಣ ಕಪ್ಪಗಾಗಿತ್ತು ಬಿಟ್ಟರೆ ಅಣ್ಣಾವ್ರು ಯಾವುದೇ ಭಾವೋದ್ವೇಗಕ್ಕೆ ಒಳಗಾಗದೆ ಅಣ್ಣಾವ್ರು ಅಂದು ಮಾತನಾಡಿದ್ದರು.
ಬಿಡುಗಡೆ ಬಳಿಕ
ರಾಜ್ಕುಮಾರ್ ಬಿಡುಗಡೆ ಆದ ಬಳಿಕ ಹಲವು ಸುದ್ದಿಗಳು ಹರಿದಾಡಿದವು. ರಾಜ್ಕುಮಾರ್ ಅವರನ್ನು ಬಿಡಿಸಿ ತರಲು ಕರ್ನಾಟಕ ಸರ್ಕಾರ ವೀರಪ್ಪನ್ಗೆ ಸುಮಾರು 20 ರಿಂದ 50 ಕೋಟಿ ಹಣ ನೀಡಿದೆ ಎಂಬ ಸುದ್ದಿ ಹರಿದಾಡಿತು. ಆದರೆ ರಾಜ್ಯ ಸರ್ಕಾರವು ನಾವು ಯಾವುದೇ ಹಣವನ್ನು ವೀರಪ್ಪನ್ಗೆ ನೀಡಿಲ್ಲ ಎಂದು ಹೇಳಿತಾದರೂ. ರಾಜ್ಕುಮಾರ್ ಬಿಡುಗಡೆ ಆದ ಬಳಿಕ ವೀರಪ್ಪನ್ ಕಾರ್ಯವ್ಯಾಪ್ತಿಯೊಳಗೆ ಬರುತ್ತಿದ್ದ ಹಳ್ಳಿಗಳಲ್ಲಿ 500 ರೂಪಾಯಿಯ ಹೊಸ ನೋಟುಗಳು ಹರಿದಾಡಲು ಆರಂಭಿಸಿದ್ದನ್ನು ಗಮನಿಸಿದ್ದಾಗಿ ಎಸ್ಟಿಎಫ್ ಅಧಿಕಾರಿಗಳು ಹೇಳಿದ್ದಾರೆ. ಅದೇ ಸಮಯದಲ್ಲಿ ಸೇಲಂ ಪೊಲೀಸರು ಕಾಡಿನ ಒಳಗೆ ಹುದುಗಿಸಿಟ್ಟಿದ್ದ ಭಾರಿ ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದು ಸುದ್ದಿಯಾಯ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ