ಕಾವೇರಿ ಥಿಯೇಟರ್ ನೆಲಸಮ; ಏಕಪರದೆ ಚಿತ್ರಮಂದಿರಗಳ ಅಂತ್ಯದಿಂದ ಪ್ರೇಕ್ಷಕರ ಜೇಬಿಗೆ ಕತ್ತರಿ
ಮೊದಲು ಮಲ್ಟಿಪ್ಲೆಕ್ಸ್ ಬಂದು, ಆಮೇಲೆ ಒಟಿಟಿ ಬಂತು. ಇದರಿಂದಾಗಿ ಏಕಪರದೆ ಚಿತ್ರಮಂದಿರಗಳಿಗೆ ದೊಡ್ಡ ಹೊಡೆತ ಬಿತ್ತು. ವರ್ಷದಿಂದ ವರ್ಷಕ್ಕೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಒಂದೊಂದಾಗಿಯೇ ಬಾಗಿಲು ಮುಚ್ಚುತ್ತಿವೆ. ಈಗ ಬೆಂಗಳೂರಿನ ‘ಕಾವೇರಿ’ ಚಿತ್ರಮಂದಿರ ಬಂದ್ ಆಗಿದೆ. ಚಿತ್ರಮಂದಿರದ ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಇದರ ಪರಿಣಾಮ ಸಿನಿಪ್ರಿಯರಿಗೆ ತಟ್ಟಲಿದೆ.
ಬೆಂಗಳೂರಿನ ಜನಪ್ರಿಯ ‘ಕಾವೇರಿ’ ಚಿತ್ರಮಂದಿರ (Cauvery Theatre) ನೆಲಸಮ ಆಗಿದೆ. 50 ವರ್ಷಗಳ ಇತಿಹಾಸ ಹೊಂದಿರುವ ಈ ಥಿಯೇಟರ್ನಲ್ಲಿ ಹಲವಾರು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಅದೆಲ್ಲವೂ ಈಗ ನೆನಪು ಮಾತ್ರ. ಸರಿಯಾದ ಬಿಸ್ನೆಸ್ ಇಲ್ಲದ ಕಾರಣ ಈ ಚಿತ್ರಮಂದಿರವನ್ನು ಮುಚ್ಚಲಾಗಿದೆ. ಕೊರೊನಾ ಲಾಕ್ಡೌನ್ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ಕಾರಣದಿಂದ ‘ಕಾವೇರಿ’ ಚಿತ್ರಮಂದಿರವನ್ನು ನಡೆಸುವುದು ಮಾಲಿಕರಿಗೆ ಕಷ್ಟ ಆಯಿತು. ಹಾಗಾಗಿ ಚಿತ್ರಮಂದಿರವನ್ನು ಕೆಡವಿ ಆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟುವ ನಿರ್ಧಾರಕ್ಕೆ ಬರಲಾಗಿದೆ. ಈ ರೀತಿ ಏಕಪರದೆ ಚಿತ್ರಮಂದಿರಗಳು (Single Screen Theatre) ಮುಚ್ಚಿದರೆ ನಿಜಕ್ಕೂ ನಷ್ಟ ಆಗುವುದು ಯಾರಿಗೆ? ಚಿತ್ರರಂಗದವರಿಗೆ ಮತ್ತು ಪ್ರೇಕ್ಷಕರಿಗೆ.
ಮಲ್ಟಿಪ್ಲೆಕ್ಸ್ನಲ್ಲಿ ಎಲ್ಲವೂ ದುಬಾರಿ
ಏಕಪರದೆ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗೆ ಹೋಲಿಸಿದರೆ ಮಲ್ಟಿಪ್ಲೆಕ್ಸ್ನಲ್ಲಿ ಬೆಲೆ ದುಬಾರಿ ಆಗಿರುತ್ತದೆ. ಟಿಕೆಟ್ ಬೆಲೆಯಿಂದ ಹಿಡಿದು ತಿಂಡಿ, ಪಾನೀಯ, ಪಾರ್ಕಿಂಗ್ ದರ ಎಲ್ಲವೂ ಕೂಡ ಸಿಂಗಲ್ ಸ್ಕ್ರೀನ್ ಥಿಯೇಟರ್ನಲ್ಲಿ ಕಡಿಮೆ ಇರುತ್ತದೆ. ಈಗಾಗಲೇ ಕರ್ನಾಟಕದಲ್ಲಿ ನೂರಾರು ಏಕಪರದೆ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಆದರೆ ಹಲವಾರು ಹೊಸ ಮಲ್ಟಿಪ್ಲೆಕ್ಸ್ಗಳು ತಲೆ ಎತ್ತಿವೆ. ಅಲ್ಲಿ ಸಾಮಾನ್ಯ ಜನರ ಕೈಗೆ ಎಟುಕದ ಬೆಲೆ ಇದೆ. ಹೀಗೆ ಪ್ರತಿಯೊಂದು ಚಿತ್ರಮಂದಿರ ಮುಚ್ಚಿದಾಗಲೂ ಮಲ್ಟಿಪ್ಲೆಕ್ಸ್ಗೆ ಬೇಡಿಕೆ ಹೆಚ್ಚುತ್ತದೆ. ಆ ಬೇಡಿಕೆಗೆ ತಕ್ಕಂತೆ ಬೆಲೆ ಏರುತ್ತದೆ. ಪ್ರೇಕ್ಷಕರ ಜೇಬಿಗೆ ಹೆಚ್ಚು ಹೆಚ್ಚು ಕತ್ತರಿ ಬೀಳುತ್ತದೆ.
ಚಿತ್ರರಂಗಕ್ಕೂ ನಷ್ಟ
ಬಹುಬೇಡಿಕೆಯ ಸ್ಟಾರ್ ಸಿನಿಮಾಗಳು ಬಿಡುಗಡೆ ಆದಾಗ ಮಲ್ಟಿಪ್ಲೆಕ್ಸ್ಗಳಲ್ಲಿ ಸಿಕ್ಕಾಪಟ್ಟೆ ಬೆಲೆ ಏರಿಸಲಾಗುತ್ತದೆ. ಒಂದು ಟಿಕೆಟ್ನ ಬೆಲೆ ಸಾವಿರ ರೂಪಾಯಿ ತನಕವೂ ಏರುವುದುಂಟು. ಮಾಮೂಲಿ ಸಿನಿಮಾಗಳಿಗೂ ಸಹ ಏಕಪರದೆ ಚಿತ್ರಮಂದಿರಗಳಿಂತ ಹೆಚ್ಚು ದರ ಇರುತ್ತದೆ. ಇನ್ನು, ಇದರೊಳಗೆ ಸಿಗುವ ಪಾಪ್ಕಾರ್ನ್, ಪಾನೀಯಗಳನ್ನು ಕೊಂಡುಕೊಳ್ಳಲು ಹೋದರೆ ಕೈ ಸುಡುತ್ತದೆ! ಅಷ್ಟರಮಟ್ಟಿಗೆ ದುಬಾರಿ ಆಗಿವೆ ಮಲ್ಟಿಪ್ಲೆಕ್ಸ್ನಲ್ಲಿ ಸಿಗುವ ತಿನಿಸುಗಳು. ಪಾರ್ಕಿಂಗ್ ದರ ಕೂಡ ಹೆಚ್ಚಿರುತ್ತದೆ. ಇದರಿಂದ ಸಹಜವಾಗಿಯೇ ಬಡವರು ಮತ್ತು ಮಧ್ಯಮ ವರ್ಗದ ಜನರು ಸಿನಿಮಾ ನೋಡಲು ಮಲ್ಟಿಪ್ಲೆಕ್ಸ್ ಕಡೆಗೆ ಬರಲು ಹಿಂದೇಟು ಹಾಕುತ್ತಾರೆ. ಅದರಿಂದ ಚಿತ್ರರಂಗಕ್ಕೆ ನಿಜಕ್ಕೂ ನಷ್ಟ ಆಗುತ್ತದೆ.
ಇದನ್ನೂ ಓದಿ: ‘ಸ್ಟಾರ್ ನಟರು ಎರಡು ವರ್ಷಕ್ಕೊಂದು ಸಿನಿಮಾ ಮಾಡಿದರೆ ಚಿತ್ರಮಂದಿರಗಳು ಉಳಿಯಲ್ಲ’
ಆ ಫೀಲಿಂಗ್ ಈಗ ಉಳಿದಿಲ್ಲ
ಒಂದು ಕಾಲದಲ್ಲಿ ಪ್ರತಿ ಚಿತ್ರಮಂದಿರಗಳ ಜೊತೆ ಸಾವಿರಾರು ನೆನಪುಗಳು ಬೆಸೆದುಕೊಂಡಿರುತ್ತಿದ್ದವು. ‘ಕಾವೇರಿ’ ಚಿತ್ರಮಂದಿರವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಇಲ್ಲಿ ಹಲವು ಸಿನಿಮಾಗಳ ಚಿತ್ರೀಕರಣ ಆಗಿತ್ತು. ಅಮಿತಾಭ್ ಬಚ್ಚನ್, ಯಶ್ ಚೋಪ್ರಾ, ರಜನಿಕಾಂತ್, ಡಾ. ರಾಜ್ಕುಮಾರ್, ವಿಷ್ಣುವರ್ಧನ್ ಮುಂತಾದ ಸ್ಟಾರ್ಗಳು ಇಲ್ಲಿಗೆ ಭೇಟಿ ನೀಡಿದ್ದರು. ಇಂಥ ಚಿತ್ರಮಂದಿರಗಳಲ್ಲಿ ಯಾವುದೇ ಸಿನಿಮಾ 100 ಡೇಸ್ ಪ್ರದರ್ಶನ ಕಂಡಾಗ ವಿಶೇಷ ಸಂಭ್ರಮ ಮನೆ ಮಾಡಿರುತ್ತಿತ್ತು. ಆ ಎಲ್ಲ ಸಿನಿಮಾಗಳ ಸ್ಮರಣಿಕೆಗಳನ್ನು ಚಿತ್ರಮಂದಿರದ ಶೋಕೇಸ್ನಲ್ಲಿ ಇರಿಸಲಾಗುತ್ತಿತ್ತು. ಆಯಾ ಏರಿಯಾಗಳನ್ನು ಚಿತ್ರಮಂದಿರದ ಹೆಸರಿನಿಂದಲೇ ಗುರುತಿಸಲಾಗುತ್ತಿತ್ತು. ಆದರೆ ಅಂಥ ಫೀಲಿಂಗ್ ಈಗ ಮಲ್ಟಿಪ್ಲೆಕ್ಸ್ಗಳಲ್ಲಿ ಕಾಣಲು ಸಿಗುವುದಿಲ್ಲ. ತುಂಬಾ ಯಾಂತ್ರಿಕವಾಗಿ ಅಲ್ಲಿ ವ್ಯವಹಾರ ನಡೆಯುತ್ತದೆ ಅಷ್ಟೇ.
ಇದನ್ನೂ ಓದಿ: ಅಕ್ಟೋಬರ್ಗೆ ಮತ್ತೆ ಬರ್ತೀನಿ, ಚಿತ್ರಮಂದಿರ ಖಾಲಿ ಇಟ್ಟಿರಿ: ದರ್ಶನ್
ಸಿಂಗಲ್ಸ್ಕ್ರೀನ್ ಮುಚ್ಚಲು ಕಾರಣ?
ಏಕಪರದೆ ಚಿತ್ರಮಂದಿರಗಳಿಗೆ ಈಗ ಕಾಲ ಇಲ್ಲ ಎಂಬಂತೆ ಆಗಿದೆ. ಅದಕ್ಕೆ ಕಾರಣವೂ ಇದೆ. ಪ್ರತಿ ಚಿತ್ರಮಂದಿರ ಕೂಡ 700, 800 ಅಥವಾ 1000 ಸೀಟ್ಗಳನ್ನು ಹೊಂದಿರುತ್ತವೆ. ಈಗಿನ ಪರಿಸ್ಥಿತಿಯಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಚಿತ್ರಮಂದಿರಗಳು ಹೌಸ್ಫುಲ್ ಆಗುವುದು ತೀರಾ ಅಪರೂಪ. ‘ಕಾವೇರಿ’ ಚಿತ್ರಮಂದಿರದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಈ ಚಿತ್ರಮಂದಿರಲ್ಲಿ ಇದ್ದ ಒಟ್ಟು ಸೀಟ್ಗಳ ಸಂಖ್ಯೆ 1384. ಒಮ್ಮೆ ಯಾವುದೇ ಸಿನಿಮಾ ಇಲ್ಲಿ ಹೌಸ್ಫುಲ್ ಪ್ರದರ್ಶನ ಆಯಿತು ಎಂದರೆ ಅದು ಒಂದು ಉತ್ಸವಕ್ಕೆ ಸಮ! ಈಗ ಆ ಪ್ರಮಾಣದಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿಲ್ಲ.
ಇದನ್ನೂ ಓದಿ: ಒಟಿಟಿಗೆ ಬಂದ್ಮೇಲೂ ಚಿತ್ರಮಂದಿರದಲ್ಲಿ ಕೋಟಿ ರೂಪಾಯಿ ಕಲೆಕ್ಷನ್; ಇದು ‘12th ಫೇಲ್’ ತಾಕತ್ತು
ಈಗ ಏನಿದೆ ಟ್ರೆಂಡ್?
ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಮಲ್ಟಿಪ್ಲೆಕ್ಸ್ಗಳು ವಿನ್ಯಾಸಗೊಂಡಿವೆ. 200ರಿಂದ 300 ಜನರು ಕೂರುವಂತಹ ಚಿಕ್ಕ ಚಿಕ್ಕ ಆಡಿಟೋರಿಯಂ ಈಗ ಮಲ್ಟಿಪ್ಲೆಕ್ಸ್ಗಳಲ್ಲಿ ಹೆಚ್ಚಾಗಿವೆ. 50 ಡೇಸ್, 100 ಡೇಸ್ ಎನ್ನುವ ಟ್ರೆಂಡ್ ಈಗ ಕಡಿಮೆ ಆಗಿದೆ. ಮೊದಲ ದಿನ ಎಷ್ಟು ಕಲೆಕ್ಷನ್ ಆಗಿದೆ? ಮೊದಲ ವೀಕೆಂಡ್ನಲ್ಲಿ ಸಿನಿಮಾಗೆ ಎಷ್ಟು ಬಿಸ್ನೆಸ್ ಆಗಿದೆ? 100 ಕೋಟಿ ರೂಪಾಯಿ ಕಮಾಯಿ ಆಗಿದೆಯೋ ಇಲ್ಲವೋ ಎಂಬುದಷ್ಟೇ ಈಗ ಯಶಸ್ಸಿನ ಅಳತೆಗೋಲು ಆಗಿದೆ. ಆದ್ದರಿಂದ ಸಾವಿರಾರು ಸೀಟ್ಗಳಿರುವ ಚಿತ್ರಮಂದಿರಗಳು ವರ್ಷಪೂರ್ತಿ ವ್ಯವಹಾರ ನಡೆಸುದು ನಿಜಕ್ಕೂ ಕಷ್ಟ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:11 pm, Wed, 8 May 24