ಅಣ್ಣಾವ್ರ ಕ್ರೇಜ್ ಹೇಗಿತ್ತು ಎಂಬುದಕ್ಕೆ ಈ ಚಿತ್ರ ಸಾಕ್ಷಿ
Dr Rajkumar fans: ಡಾ. ರಾಜ್‌ಕುಮಾರ್ ಅವರ ಮೇಲಿದ್ದ ಅಭಿಮಾನದ ಕ್ರೇಜ್ ಅನ್ನು ಸಂಪಾದಿಸುವುದು ಈಗಿನ ಸ್ಟಾರ್‌ಗಳಿಗೆ ಅಸಾಧ್ಯ. ಅಣ್ಣಾವ್ರ ಮೇಲಿದ್ದಿದ್ದು ಕೇವಲ ಅಭಿಮಾನ ಮಾತ್ರವೇ ಆಗಿರಲಿಲ್ಲ. ಅದಕ್ಕೂ ಮಿಗಿಲಾಗಿ ಪ್ರೀತಿ ಮತ್ತು ಭಕ್ತಿಯಾಗಿತ್ತು. ಕನ್ನಡಿಗರಿಗೆ ಅಣ್ಣಾವ್ರ ಮೇಲಿದ್ದ ಅಭಿಮಾನಕ್ಕೆ ಸಾಕ್ಷಿಯಾಗಿದೆ ಈ ಚಿತ್ರ.

ಈಗಿನ ಸ್ಟಾರ್ ಹೀರೋಗಳಿಗೆ ದೊಡ್ಡ ಮಟ್ಟದ ಕ್ರೇಜ್ ಇದೆ ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಸ್ಟಾರ್ ಹೀರೋ ಸಿನಿಮಾ ಒಂದು ಬಿಡುಗಡೆ ಆದರೆ ಕಟೌಟ್ಗಳನ್ನು ಕಟ್ಟಿ, ಹಾರಗಳನ್ನು ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ನಟರ ಅಭಿಮಾನಿ ಸಂಘಗಳು ಇದನ್ನೆಲ್ಲ ನೋಡಿಕೊಳ್ಳುತ್ತವೆ. ಆದರೆ ಈಗಿನ ನಟರ ಕ್ರೇಜಿಗೂ ಡಾ ರಾಜ್‌ಕುಮಾರ್ ಬಗ್ಗೆ ಅಭಿಮಾನಿಗಳಿದ್ದ ಪ್ರೀತಿ ಮತ್ತು ಭಕ್ತಿಗೂ ಅಜಗಜಾಂತರ ಅಂತರವಿದೆ. ಡಾ ರಾಜ್‌ಕುಮಾರ್ ಅವರ ಬಗ್ಗೆ ಅಭಿಮಾನಿಗಳಿಗೆ ಇದ್ದ ಕ್ರೇಜ್ಗೆ ಸಾಕ್ಷಿಯಾಗಿದೆ ಇಲ್ಲಿ ಹಂಚಿಕೊಂಡಿರುವ ಚಿತ್ರ ಮತ್ತು ಮಾಹಿತಿ.
ರಾಜ್‌ಕುಮಾರ್ ಅವರು ನಾಯಕನಾಗಿ ನಟಿಸಿದ ಕೊನೆಯ ಸಿನಿಮಾ ‘ಶಬ್ದವೇಧಿ’. 2000 ರಲ್ಲಿ ಆ ಸಿನಿಮಾ ಬಿಡುಗಡೆ ಆಗಿತ್ತು. ‘ಶಬ್ದವೇಧಿ’ ಸಿನಿಮಾದಲ್ಲಿ ನಟಿಸುವ ವೇಳೆಗೆ ರಾಜ್‌ಕುಮಾರ್ ಅವರಿಗೆ 71 ವರ್ಷ ವಯಸ್ಸು. ಆದರೆ ಆಗಲೂ ಸಹ ಅಣ್ಣಾವ್ರಿಗೆ ಅದ್ಯಾವ ಮಟ್ಟಿಗೆ ಕ್ರೇಜ್ ಇತ್ತೆಂದರೆ ‘ಶಬ್ದವೇಧಿ’ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಮಾತ್ರವಲ್ಲ ಅಣ್ಣಾವ್ರ ಸಿನಿಮಾ ನೋಡಿದ ಜನ ನಾಣ್ಯಗಳನ್ನು ಪರದೆ ಕಡೆಗೆ ಎಸೆಯುತ್ತಿದ್ದರು.
ಇಲ್ಲಿ ಹಂಚಿಕೊಂಡಿರುವ ನಾಣ್ಯಗಳ ರಾಶಿಯ ಚಿತ್ರ ಮೈಸೂರಿನ ಶಾಂತಲಾ ಚಿತ್ರಮಂದಿರದ್ದು. ಶಾಂತಲಾ ಚಿತ್ರಮಂದಿರದಲ್ಲಿ ‘ಶಬ್ದವೇಧಿ’ ಸಿನಿಮಾದ ನೂರನೇ ದಿನದ ಪ್ರದರ್ಶನದ ಒಂದು ಶೋನಲ್ಲಿ ಜನ ಎಸೆದಿದ್ದ ನಾಣ್ಯಗಳನ್ನು ರಾಶಿ ಹಾಕಿದ ಚಿತ್ರವಿದು. ಕೇವಲ ಒಂದು ಶೋಗೆ ಅದರಲ್ಲೂ ಅಣ್ಣಾವ್ರ ಎಂಟ್ರಿ ಸೀನ್ಗೆ ಎಸೆದ ನಾಣ್ಯಗಳ ಮೊತ್ತವೇ ಏಳು ಸಾವಿರ ರೂಪಾಯಿಗಳು ಆಗಿದ್ದವಂತೆ. ಈಗಿನ ಯಾವ ಸ್ಟಾರ್ ನಟರ ಸಿನಿಮಾಗಳಿಗೂ ಈ ರೀತಿಯ ಜನ ಪ್ರೀತಿಯನ್ನು ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲವೇನೋ.
ಇದನ್ನೂ ಓದಿ:ದಸರಾ ‘ಉದ್ಘಾಟನೆ’ ಪ್ರಾರಂಭವಾಗಿದ್ದು ಡಾ ರಾಜ್‌ಕುಮಾರ್ ಅವರಿಂದ, ಹೇಗೆ ಗೊತ್ತೆ?
ಅಂದಹಾಗೆ ಕರ್ನಾಟಕದಲ್ಲಿ ಈ ರೀತಿ ಸಿನಿಮಾ ನೋಡಿದ ಬಳಿಕ ಜನ ನಾಣ್ಯಗಳನ್ನು ಪರದೆಯ ಮುಂದೆ ಎಸೆಯುವ ಅಭ್ಯಾಸ ದಶಕಗಳಿಂದಲೂ ಇತ್ತು. ಇದು ಪ್ರಾರಂಭವಾಗಿದ್ದು ಸಹ ರಾಜ್‌ಕುಮಾರ್ ಅವರ ಸಿನಿಮಾಗಳಿಂದಲೇ. ಸಿನಿಮಾ ಇಷ್ಟವಾದರೆ ಜನ ಜೇಬಿನಿಂದ ನಾಣ್ಯ ತೆಗೆದು ಪರದೆಯತ್ತ ಎಸೆಯುತ್ತಿದ್ದರು. ಹಿರಿಯ ಸಿನಿಮಾ ಪ್ರೇಮಿಗಳು ಹೇಳುವಂತೆ ಅಣ್ಣಾವ್ರ ಸಿನಿಮಾಗಳು ಪ್ರದರ್ಶನವಾಗುವ ವೇಳೆ ಚಿತ್ರಮಂದಿರಗಳಲ್ಲಿ ನಾಣ್ಯಗಳ ರಾಶಿಯೇ ಬೀಳುತ್ತಿತ್ತಂತೆ. ಕೆಲವರು ಸಿನಿಮಾ ನೋಡುವುದು ಬಿಟ್ಟು ಆ ನಾಣ್ಯಗಳನ್ನು ಆಯ್ದುಕೊಂಡು ಮುಂದಿನ ಶೋ ನೋಡಲು ಬಳಸುತ್ತಿದ್ದರಂತೆ. ಕೆಲವೆಡೆ ಚಿತ್ರಮಂದಿರದ ಸಿಬ್ಬಂದಿಯೇ ನಾಣ್ಯಗಳನ್ನು ಆರಿಸಿ ಇರಿಸಿಕೊಳ್ಳುತ್ತಿದ್ದರಂತೆ.

ಡಾ ರಾಜ್‌ಕುಮಾರ್
ಅಣ್ಣಾವ್ರ ಸಿನಿಮಾಗಳಿಗೆ ಹೀಗೆ ನಾಣ್ಯ ಎಸೆಯುವುದು ಅವರ ಕೊನೆಯ ಸಿನಿಮಾವರೆಗೂ ಮುಂದುವರೆದಿತ್ತು. ಸಿನಿಮಾ ಬಿಡುಗಡೆ ದಿನ ಮಾತ್ರವಲ್ಲ ಸಿನಿಮಾ ಪ್ರದರ್ಶನ ಆಗುತ್ತಿದ್ದ ಅಷ್ಟೂ ದಿನ ಹೀಗೆಯೇ ನಾಣ್ಯಗಳು ಬೀಳುತ್ತಿದ್ದವಂತೆ, ಹೀಗೆಂದು ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ಮಲ್ಲಿಕಾರ್ಜುನ ಮೇಟಿ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಶಾಂತಲಾ ಚಿತ್ರಮಂದಿರದ ಈ ಚಿತ್ರ ಹಾಗೂ ಮಾಹಿತಿಯನ್ನು ಅವರದ್ದೇ ಫೇಸ್ಬುಕ್ ವಾಲ್ನಿಂದ ತೆಗೆದುಕೊಳ್ಳಲಾಗಿದೆ.
ರಾಜ್‌ಕುಮಾರ್ ಅವರ ಬಳಿಕ ಈ ರೀತಿ ನಾಣ್ಯ ಎಸೆಯುವ ಬಹುತೇಕ ನಿಂತೇ ಹೋಯ್ತು. ಈಗಂತೂ ಈ ರೀತಿಯ ಅಭಿಮಾನ ನಿರೀಕ್ಷಿಸಲು ಸಾಧ್ಯವೇ ಇಲ್ಲ. ಈಗಿನ ಅಭಿಮಾನ ವಿಧ್ವಂಸಕ ಅಭಿಮಾನವಾಗಿ ಮಾರ್ಪಾಡಾಗಿದೆ. ಈಗ ಅಭಿಮಾನಿಗಳು ಚಿತ್ರಮಂದಿರದ ಒಳಗೆ ಪಟಾಕಿ ಹಚ್ಚಿ ಇತರರಿಗೆ ತೊಂದರೆ ಕೊಡುವುದು, ಕಿಟಕಿ ಗಾಜುಗಳನ್ನು ಒಡೆಯುವುದು, ಚಿತ್ರಮಂದಿರದ ಒಳಗೆ ಹುಚ್ಚರಂತೆ ವರ್ತಿಸುವುದು ಮಾಡುತ್ತಿದ್ದಾರೆ. ಆದರೆ ಅಣ್ಣಾವ್ರ ಬಗ್ಗೆ ಜನರಿಗಿದ್ದ ಅಭಿಮಾನದ ಸ್ವರೂಪವೇ ಬೇರೆಯದ್ದಾಗಿತ್ತು. ಅದಕ್ಕೇ ಹೇಳುವುದು ಕರ್ನಾಟಕಕ್ಕೆ ಒಬ್ಬರೇ ಅಣ್ಣಾವ್ರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:55 pm, Tue, 14 October 25




