‘ಕೋಟಿಗೊಬ್ಬ 3’ ಸಿನಿಮಾ ಎಲ್ಲಾ ವಿಘ್ನಗಳನ್ನು ದಾಟಿ ಒಂದು ದಿನ ತಡವಾಗಿ ರಿಲೀಸ್ ಆಯಿತು. ಅನೇಕ ಕಡೆಗಳಲ್ಲಿ ಮುಂಜಾನೆ 7 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಕಂಡಿತು. ಪರಿಣಾಮ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಆಗಿದೆ. ರಾಜ್ಯಾದ್ಯಂತ ನೂರಾರು ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ಈ ಮೂಲಕ ಕೊವಿಡ್ ಎರಡನೇ ಅಲೆಯಿಂದ ತತ್ತರಿಸಿದ್ದ ಗಾಂಧಿ ನಗರಕ್ಕೆ ಹೊಸ ಚೈತನ್ಯ ಬಂದಿದೆ.
‘ಕೋಟಿಗೊಬ್ಬ 3’ ಸಿನಿಮಾ ಅಕ್ಟೋಬರ್ 14ರಂದು ತೆರೆಗೆ ಬರಬೇಕಿತ್ತು. ಆದರೆ, ಇದಕ್ಕೆ ನಾನಾ ಅಡ್ಡಿಗಳು ಎದುರಾದವು. ಇದಕ್ಕೆ ಕಾರಣರಾದವರು ಯಾರು ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಆದರೆ, ಇದರ ಹಿಂದೆ ಷಡ್ಯಂತರ ನಡೆದಿದೆ ಎಂದು ಆರೋಪಿಸಿತು. ಹೀಗಾಗಿ, ಅಕ್ಟೋಬರ್ 15ರಂದು ಸಿನಿಮಾ ತೆರೆಗೆ ಬಂತು. ಆದಾಗ್ಯೂ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಮಾಯಿ ಮಾಡಿದೆ.
ಮೊದಲ ದಿನ ‘ಕೋಟಿಗೊಬ್ಬ 3’ ಗಳಿಕೆ ಮಾಡಿದ್ದು ಬರೋಬ್ಬರಿ 12.5 ಕೋಟಿ ರೂಪಾಯಿ ಎನ್ನಲಾಗಿದೆ. ಈ ಬಗ್ಗೆ ಪೋಸ್ಟರ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಇದನ್ನು ನೋಡಿ ಸುದೀಪ್ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ.
ಸೂರಪ್ಪ ಬಾಬು ವಿರುದ್ಧ ಎಫ್ಐಆರ್
ಚಿತ್ರದುರ್ಗದ ಸಿನಿಮಾ ವಿತರಕ ಖಾಜಾಪೀರ್ ಅವರಿಗೆ ‘ಕೋಟಿಗೊಬ್ಬ 3’ ನಿರ್ಮಾಪಕ ಸೂರಪ್ಪ ಬಾಬು (ಎಂ.ಬಿ. ಬಾಬು) ಅವರು ಫೋನ್ ಕರೆ ಮೂಲಕ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಅದರ ಆಡಿಯೋ ಕ್ಲಿಪ್ ಕೂಡ ಲಭ್ಯವಾಗಿದೆ. ಈಗ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಖಾಜಾಪೀರ್ ದೂರು ದಾಖಲಿಸಿದ್ದಾರೆ. ಐಪಿಸಿ ಕಲಂ 506 ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
‘ಕೋಟಿಗೊಬ್ಬ 3’ ಚಿತ್ರದ ರಿಲೀಸ್ಗೆ ಗುರುವಾರ (ಅ.14) ವಿಘ್ನ ಎದುರಾಗಿದ್ದ ಹಿನ್ನೆಲೆಯಲ್ಲಿ ಅಭಿಮಾನಿಗಳು ನಿರಾಸೆಯಿಂದ ವಾಪಸ್ ತೆರಳಿದ್ದರು. ಇದರಿಂದ ಚಿತ್ರಕ್ಕೆ ಭಾರಿ ನಷ್ಟ ಉಂಟಾಯಿತು. ಇದಕ್ಕೆಲ್ಲ ಕೆಲವು ವಿತರಕರ ಮೋಸವೇ ಕಾರಣ ಎಂದು ನಿರ್ಮಾಪಕ ಸೂರಪ್ಪ ಬಾಬು ಆರೋಪಿಸಿದ್ದರು. ಅಲ್ಲದೇ, ತೊಂದರೆ ನೀಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಕಾನೂನು ಸಮರ ಸಾರುವುದಾಗಿ ಹೇಳಿದ್ದರು. ಆದರೆ ಈಗ ಚಿತ್ರದುರ್ಗದ ವಿತರಕ ಖಾಜಾಪೀರ್ ಅವರು ಸೂಪರ್ ಬಾಬು ವಿರುದ್ಧ ಕೊಲೆ ಬೆದರಿಕೆ ಆರೋಪ ಹೊರಿಸಿದ್ದಾರೆ.
ಇದನ್ನೂ ಓದಿ: ‘ಕೋಟಿಗೊಬ್ಬ 4’ ಮಾಡುವ ಬಗ್ಗೆ ಸೂರಪ್ಪ ಬಾಬು ಮಾತು; ಸುದೀಪ್ ಅಭಿಮಾನಿಗಳೇ ಇಲ್ಲಿ ಕೇಳಿ…