‘ದಂಗಲ್​’ ದಾಖಲೆ ಉಡೀಸ್​ ಮಾಡಿದ ಯಶ್​​; ಅತಿ ಹೆಚ್ಚು ಹಣ ಗಳಿಸಿದ​ 2ನೇ ಸಿನಿಮಾ ‘ಕೆಜಿಎಫ್​ 2’

‘ದಂಗಲ್​’ ದಾಖಲೆ ಉಡೀಸ್​ ಮಾಡಿದ ಯಶ್​​; ಅತಿ ಹೆಚ್ಚು ಹಣ ಗಳಿಸಿದ​ 2ನೇ ಸಿನಿಮಾ ‘ಕೆಜಿಎಫ್​ 2’
ಯಶ್​, ಆಮಿರ್ ಖಾನ್​

Dangal | KGF 2 Collection: ಭಾರತೀಯ ಮಾರುಕಟ್ಟೆಯಲ್ಲಿ ‘ದಂಗಲ್’​ ಸಿನಿಮಾ 387.38 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ 2ನೇ ಸ್ಥಾನದಲ್ಲಿತ್ತು. ಈಗ ಆ ಸ್ಥಾನವನ್ನು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಕಿತ್ತುಕೊಂಡಿದೆ.

TV9kannada Web Team

| Edited By: Madan Kumar

May 05, 2022 | 12:44 PM

ಎಲ್ಲ ನಿರೀಕ್ಷೆಗಳನ್ನೂ ಮೀರಿ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಗೆಲುವು ಕಂಡಿದೆ. ದೇಶಾದ್ಯಂತ ಈ ಸಿನಿಮಾ ಸಂಚಲನ ಮೂಡಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಈ ಚಿತ್ರದಿಂದ ಯಶ್​ (Yash) ವೃತ್ತಿಜೀವನಕ್ಕೆ ಬಹುದೊಡ್ಡ ಯಶಸ್ಸು ಸಿಕ್ಕಂತಾಗಿದೆ. ಉತ್ತರ ಭಾರತದ ಪ್ರೇಕ್ಷಕರು ಈ ಸಿನಿಮಾವನ್ನು ಹೆಚ್ಚು ಇಷ್ಟಪಟ್ಟಿದ್ದಾರೆ. ಅದರ ಪರಿಣಾಮವಾಗಿ ಹಿಂದಿ ವರ್ಷನ್​ನಲ್ಲಿ ‘ಕೆಜಿಎಫ್​ 2’ ಚಿತ್ರಕ್ಕೆ ಭರ್ಜರಿ ಕಲೆಕ್ಷನ್​ ಆಗಿದೆ. ಈವರೆಗೂ ಬಾಲಿವುಡ್​ನಲ್ಲಿ ಸ್ಟಾರ್​ ಹೀರೋಗಳ ಸಿನಿಮಾಗಳು ಮಾಡಿದ್ದ ಕಲೆಕ್ಷನ್​ ಅನ್ನು ಯಶ್​ ಸಿನಿಮಾ ಹಿಂದಿಕ್ಕಿದೆ. ಆಮಿರ್​ ಖಾನ್​ ನಟನೆಯ ‘ದಂಗಲ್​’ (Dangal) ಚಿತ್ರದ ದಾಖಲೆಯನ್ನು ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಧೂಳಿಪಟ ಮಾಡಿದೆ. ಆ ಮೂಲಕ ಭಾರತದಲ್ಲಿ ಹಿಂದಿ ವರ್ಷನ್​ನಿಂದ ಅತಿ ಹೆಚ್ಚು ಕಲೆಕ್ಷನ್​ ಮಾಡಿದ 2ನೇ ಸಿನಿಮಾ ಎಂಬ ಖ್ಯಾತಿ ‘ಕೆಜಿಎಫ್​ 2’ ಚಿತ್ರಕ್ಕೆ ಸಿಕ್ಕಿದೆ. ನಿರ್ದೇಶಕ ಪ್ರಶಾಂತ್​ ನೀಲ್​ ಅವರ ಜನಪ್ರಿಯತೆ ವಿಶ್ವಮಟ್ಟಕ್ಕೆ ಹೆಚ್ಚಿದೆ. ಎಲ್ಲರೂ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತಾಗಿದೆ.

‘ಕೆಜಿಎಫ್​ 1’ ಸೂಪರ್​ ಹಿಟ್​ ಆದಾಗಲೇ ‘ಕೆಜಿಎಫ್​ 2’ ಬಗ್ಗೆ ಅಭಿಮಾನಿಗಳಲ್ಲಿ ಬಹುದೊಡ್ಡ ನಿರೀಕ್ಷೆ ಸೃಷ್ಟಿಯಾಗಿತ್ತು. ‘ಕೆಜಿಎಫ್​ 1’ ತೆರೆಕಂಡಾಗ ಅದರ ಎದುರು ಶಾರುಖ್​ ಖಾನ್​ ನಟನೆಯ ‘ಜೀರೋ’ ಸಿನಿಮಾ ಕೂಡ ಮಣ್ಣು ಮುಕ್ಕಿತ್ತು. ಆದ್ದರಿಂದ ‘ಕೆಜಿಎಫ್​: ಚಾಪ್ಟರ್​ 2’ ಎದುರು ರಿಲೀಸ್​ ಆಗಲು ಹಿಂದಿಯ ಬೇರೆ ಯಾವುದೇ ಸಿನಿಮಾದ ಧೈರ್ಯ ತೋರಿಸಲಿಲ್ಲ. ಅದು ಯಶ್​ ಸಿನಿಮಾಗೆ ಪ್ಲಸ್​ ಪಾಯಿಂಟ್​ ಆಯಿತು.

22ನೇ ದಿನವೂ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರತಿ ವೀಕೆಂಡ್​ನಲ್ಲಿ ಹೌಸ್​ಫುಲ್​ ಆಗಿದೆ. ರಂಜಾನ್​ ಇದ್ದಿದ್ದರಿಂದ ಅದರ ಪ್ರಯೋಜನವನ್ನೂ ಈ ಸಿನಿಮಾ ಪಡೆದುಕೊಂಡಿದೆ. 21 ದಿನಕ್ಕೆ ಹಿಂದಿಯಲ್ಲಿ ಈ ಸಿನಿಮಾ ಮಾಡಿರುವುದು ಬರೋಬ್ಬರಿ 391.65 ಕೋಟಿ ರೂಪಾಯಿ! ದಂಗಲ್​ ಸಿನಿಮಾ ಭಾರತೀಯ ಮಾರುಕಟ್ಟೆಯಲ್ಲಿ 387.38 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ 2ನೇ ಸ್ಥಾನದಲ್ಲಿತ್ತು. ಈಗ ಆ ಸ್ಥಾನವನ್ನು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಕಿತ್ತುಕೊಂಡಿದೆ. ಮೊದಲ ಸ್ಥಾನದಲ್ಲಿ ‘ಬಾಹುಬಲಿ 2’ ಸಿನಿಮಾ ಇದೆ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರ ಚಾರ್ಮ್​ ಹೆಚ್ಚಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಯಶ್​ ಅವರು ತಮ್ಮ ಡಿಮ್ಯಾಂಡ್​ ಹೆಚ್ಚಿಸಿಕೊಂಡಿದ್ದಾರೆ. ಎಲ್ಲರ ಬಾಯಲ್ಲೂ ನಿರ್ದೇಶಕ ಪ್ರಶಾಂತ್​ ನೀಲ್​ ಹೆಸರು ಕೇಳಿಬರುವಂತಾಗಿದೆ. ನಟಿ ಶ್ರೀನಿಧಿ ಶೆಟ್ಟಿ ಅವರ ಕಾಲ್​ಶೀಟ್​ಗಾಗಿ ನಿರ್ಮಾಪಕರು ಕ್ಯೂ ನಿಲ್ಲುವಂತಾಗಿದೆ. ಇಂಥ ದೈತ್ಯ ಸಿನಿಮಾವನ್ನು ನಿರ್ಮಿಸಿದ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಗೆ ಸಖತ್​ ಲಾಭ ಆಗಿದೆ.

‘ದಂಗಲ್​’ ಕಲೆಕ್ಷನ್​ ಅನ್ನು ಹಿಂದಿಕ್ಕಿದ ಬಳಿಕ ‘ಕೆಜಿಎಫ್​ 2’ ಚಿತ್ರ ಈಗ 400 ಕೋಟಿ ಕ್ಲಬ್​ ಸೇರುವುದರತ್ತ ಗಮನ ಹರಿಸಿದೆ. ಇನ್ನೆರಡು ದಿನಗಳಲ್ಲಿ ಅದು ಕೂಡ ಸಾಧ್ಯವಾಗಲಿದೆ. ಇದು ಹಿಂದಿ ಕಲೆಕ್ಷನ್​ ಲೆಕ್ಕಾಚಾರ ಮಾತ್ರ. ವಿಶ್ವಾದ್ಯಂತ ‘ಕೆಜಿಎಫ್​ 2’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಗಳಿಸಿ ಬೀಗುತ್ತಿದೆ. ಚಿತ್ರದ ಟೋಟಲ್​ ಕಲೆಕ್ಷನ್​ ಎಷ್ಟು ಎಂಬ ಲೆಕ್ಕದ ವಿವರವನ್ನು ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ನೀಡಬೇಕಿದೆ. ಅದಕ್ಕಾಗಿ ಫ್ಯಾನ್ಸ್​ ಕಾದಿದ್ದಾರೆ.

ಸಂಜಯ್​ ದತ್​, ರವೀನಾ ಟಂಡನ್​, ಅಯ್ಯಪ್ಪ, ಅಚ್ಯುತ್​ ಕುಮಾರ್​, ವಸಿಷ್ಠ ಸಿಂಹ ಮುಂತಾದವರ ಪಾತ್ರಗಳು ಕೂಡ ‘ಕೆಜಿಎಫ್​ 2’ ಚಿತ್ರದಲ್ಲಿ ಶೈನ್​ ಆಗಿವೆ. ‘ಕೆಜಿಎಫ್​ 3’ ಬಗ್ಗೆ ಈಗ ಟಾಕ್​ ಶುರುವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada