ಲಂಬಾಣಿ ತಾಂಡಾದ ಸತ್ಯವತಿ, ಸೆಲೆಬ್ರಿಟಿ ಸಿಂಗರ್ ಮಂಗ್ಲಿ ಆದ ಕತೆ ಗೊತ್ತ?
Singer Mangli: ಗಾಯಕಿ ಮಂಗ್ಲಿ ಯಾರಿಗೆ ಗೊತ್ತಿಲ್ಲ. ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸೂಪರ್-ಡೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಇದೀಗ ಮಂಗ್ಲಿಯ ಮೇಲೆ ಮಾದಕ ವಸ್ತು ಬಳಕೆ ಆರೋಪ ಹೊರಿಸಲಾಗಿದೆ. ಅಂದಹಾಗೆ ಮಂಗ್ಲಿ ಇಷ್ಟು ಎತ್ತರಕ್ಕೆ ಏರಿದ ಹಾದಿ ಸುಲಭವಾಗಿರಲಿಲ್ಲ, ಮಂಗ್ಲಿ ನಡೆದ ಕಷ್ಟದ ಹಾದಿಯ ತಿರುಗು ನೋಟ ಇಲ್ಲಿದೆ...

ದರ್ಶನ್ (Darshan) ನಟನೆಯ ‘ರಾಬರ್ಟ್’ ಸಿನಿಮಾ ಕನ್ನಡದಲ್ಲಿ ಹಿಟ್ ಎನಿಸಿಕೊಂಡಿತು, ಆಂಧ್ರ-ತೆಲಂಗಾಣಗಳಲ್ಲಿಯೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತು. ಅದಕ್ಕೆ ಮುಖ್ಯ ಕಾರಣ ಗಾಯಕಿ ಮಂಗ್ಲಿಯ ಒಂದು ಹಾಡು. ‘ರಾಬರ್ಟ್’ ಸಿನಿಮಾದ ತೆಲುಗು ಆವೃತ್ತಿಗೆ ಮಂಗ್ಲಿ ಹಾಡಿದ್ದ ‘ಕಣ್ಣೇ ಅಧಿರಿಂದಿ’ ಹಾಡು ಭಾರಿ ವೈರಲ್ ಆಗಿತ್ತು. ಆ ಒಂದು ಹಾಡಿಗಾಗಿ ಸಿನಿಮಾ ನೋಡಿದವರು ಅದೆಷ್ಟೊ, ಅದೊಂದೆ ಅಲ್ಲ, ಗಾಯಕಿ ಮಂಗ್ಲಿ ಹಾಡಿರುವ ಹಲವಾರು ಹಾಡುಗಳು ಭಾರಿ ವೈರಲ್ ಆಗಿವೆ. ದಕ್ಷಿಣ ಭಾರತದ ಬಲು ಬೇಡಿಕೆಯ ಮತ್ತು ದುಬಾರಿ ಗಾಯಕಿಯರಲ್ಲಿ ಮಂಗ್ಲಿ ಸಹ ಒಬ್ಬರು. ಈಗ ಅವರ ಮೇಲೆ ಮಾದಕ ವಸ್ತು ಬಳಕೆ ಆರೋಪ ಬಂದಿದೆ. ಈ ಸಮಯದಲ್ಲಿ ಮಂಗ್ಲಿಯ ಸಂಕಷ್ಟದ ಹಾದಿಯ ತಿರುಗು ನೋಟ ಇಲ್ಲಿದೆ…
ಮಂಗ್ಲಿ ಜನಿಸಿದ್ದು ಬಹಳ ಕಡು ಬಡವ ಹಾಗೂ ಸಮಾಜದ ಮುಖ್ಯವಾಹಿನಿಯಿಂದ ಬಲು ದೂರ ಉಳಿದಿದ್ದ ಕುಟುಂಬದಲ್ಲಿ. ಲಂಬಾಣಿ ಸಮುದಾಯದ ಮಂಗ್ಲಿ ಜನಿಸಿದ್ದು ಆಂಧ್ರದ ಬರಡು ಪ್ರದೇಶ, ರಾಯಲ ಸೀಮೆಯ ಬಸನೇಪಲ್ಲಿ ಎಂಬ ತಾಂಡಾನಲ್ಲಿ. ಮಂಗ್ಲಿಯ ಮೂಲ ಹೆಸರು ಸತ್ಯವತಿ. ಮಂಗ್ಲಿಯ ಪೋಷಕರು ಅರಣ್ಯ ದೇವತೆಗೆ ಹರಕೆ ಹೊತ್ತುಕೊಂಡ ಬಳಿಕ ಹುಟ್ಟಿದ ಮಗುವಂತೆ ಮಂಗ್ಲಿ. ಹೆಣ್ಣು ಮಗು ಎಂದು ನಿರ್ಲಕ್ಷ್ಯದಲ್ಲಿಯೇ ಸಾಕಿದರು ಮಂಗ್ಲಿಯ ಪೋಷಕರು.
ಮಂಗ್ಲಿ ಜನಿಸಿದ ತಾಂಡಾನಲ್ಲಿ, ಹೆಣ್ಣು ಮಗು ಜನಿಸಿದರೆ ಅದನ್ನು ಹಣಕ್ಕೆ ಮಾರಿಬಿಡುವ, ಕೊಂದು ಬಿಡಲಾಗುತ್ತಿಂತೆ. ಆದರೆ ಮಂಗ್ಲಿಯ ಪೋಷಕರಿಗೆ ಮದುವೆಯಾದ 12 ವರ್ಷ ಮಗು ಜನಿಸಿರಲಿಲ್ಲ, 12 ವರ್ಷಗಳಾದ ಮೇಲೆ ಜನಿಸಿದ ಮಗುವಾದ್ದರಿಂದ ಹೆಣ್ಣು ಮಗುವಾದರೂ ಮಾರದೆ, ಕೊಲ್ಲದೆ ಕಷ್ಟದಲ್ಲೇ ಸಾಕಿಕೊಂಡರಂತೆ. ಮಂಗ್ಲಿಗೆ ಇಬ್ಬರು ತಂಗಿಯರು, ಒಬ್ಬ ತಮ್ಮ ಸಹ ಇದ್ದಾನೆ.
ಮನೆಯ ಮೊದಲ ಮಗಳಾದ್ದರಿಂದ ಮನೆಯ ಬಹುತೇಕ ಜವಾಬ್ದಾರಿ ಮಂಗ್ಲಿಯದ್ದೆ. ಮಂಗ್ಲಿಯ ಬಾಲ್ಯ ಬಹುತೇಕ ಕೂಲಿ ಮತ್ತು ತನ್ನ ತಂಗಿಯರು, ಸಹೋದರನನ್ನು ಸಾಕುವುದರಲ್ಲೇ ಕಳೆದು ಹೋಯ್ತು. ಮನೆಯ ಕೆಲಸ ಮಾಡುವುದು, ದುಡಿಯಲು ಹೋದ ಅಪ್ಪನಿಗೆ ಬುತ್ತಿ ಹೊತ್ತುಕೊಂಡು ಹೋಗುವುದು, ಹೊಲದ ಕೆಲಸ ಮಾಡುವುದು, ಶಾಲೆ ರಜೆ ಇದ್ದಾಗ ಇತರರ ಹೊಲಗಳಿಗೆ ಕೂಲಿಗೆ ಹೋಗುವುದು ಇವುಗಳಲ್ಲೇ ಮಂಗ್ಲಿಯ ಬಾಲ್ಯ ಕಳೆಯಿತು. ಕುಟುಂಬಕ್ಕಾಗಿ ಇದನ್ನೆಲ್ಲ ಮಾಡಲೇ ಬೇಕಿತ್ತು ಮಂಗ್ಲಿ. ಇದೆಲ್ಲದರ ಜೊತೆಗೆ ಶಿಕ್ಷಣವನ್ನೂ ಮುಂದುವರೆಸಿದ್ದರು ಮಂಗ್ಲಿ.
ಇದನ್ನೂ ಓದಿ:Breaking: ಗಾಯಕಿ ಮಂಗ್ಲಿ ಬರ್ತ್ಡೇ ಪಾರ್ಟಿಯಲ್ಲಿ ಡ್ರಗ್ಸ್: ಪ್ರಕರಣ ದಾಖಲು
ಲಂಬಾಣಿ ಸಮುದಾಯಕ್ಕೆ ಹಾಡು ಹಸೆ ಅವರ ರಕ್ತದಲ್ಲಿಯೇ ಇರುತ್ತದೆ. ಮಂಗ್ಲಿ ಸಹ ಬಾಲ್ಯದಲ್ಲಿಯೇ ಜನಪದ ಹಾಡುಗಳನ್ನು ಬಹಳ ಚೆನ್ನಾಗಿ ಹಾಡುತ್ತಿದ್ದರಂತೆ. ಮಂಗ್ಲಿ ಸುಮಾರು ಏಳು-ಎಂಟನೇ ತರಗತಿ ಓದುತ್ತಿದ್ದಾಗ ವಿದೇಶಿ ಎನ್ಜಿಓ ಒಂದು ಮಂಗ್ಲಿಯ ಲಂಬಾಣಿ ತಾಂಡಾಕ್ಕೆ ಬಂದು ಅವರ ಜೀವನ ಸುಧಾರಣೆ ಯತ್ನ ಮಾಡಿತು. ಎನ್ಜಿಓ ಸಿಬ್ಬಂದಿಗೆ ಮಂಗ್ಲಿಯ ಹಾಡು ಬಹಳ ಇಷ್ಟವಾಯ್ತು, ಮೂಡನಂಬಿಕೆಯ ವಿರುದ್ಧ ಹಾಡುಗಳನ್ನು ಬರೆದು ಅವನ್ನು ಮಂಗ್ಲಿಯಿಂದ ಹಾಡಿಸಿದರು ಎನ್ಜಿಓ ಮಂದಿ. ಆಗಲೂ ಸಮುದಾಯದ ವಿರೋಧವನ್ನು ಮಂಗ್ಲಿ ಹಾಗೂ ಅವರ ಕುಟುಂಬದವರು ಎದುರಿಸಬೇಕಾಯ್ತು.
ಆದರೆ ಎನ್ಜಿಓ ನವರು ಮಂಗ್ಲಿಯ ಶಿಕ್ಷಣಕ್ಕೆ ಇತರೆ ಖರ್ಚುಗಳಿಗೆ ಮಾಸಿಕವಾಗಿ ಸಣ್ಣ ಮೊತ್ತದ ಹಣ ಕೊಡುತ್ತಿದ್ದರಿಂದ, ಮಂಗ್ಲಿ ಗಾಯನ ಮುಂದುವರೆಸಿದರು. ಮಂಗ್ಲಿ ಒಂಬತ್ತನೇ ತರಗತಿಯಲ್ಲಿದ್ದಾಗ ಪಂಜಾಬ್ನಲ್ಲಿ ನಡೆದ ಜನಪದ ಗಾಯನ ಸ್ಪರ್ಧೆಗೆ ಹೋಗಿ ಅಲ್ಲಿ ಪ್ರಥಮ ಬಹುಮಾನ ಪಡೆದುಕೊಂಡರು. ಬಳಿಕ ಕೆಲವರ ಸಲಹೆಯಂತೆ ತಿರುಪತಿಯಲ್ಲಿ ಸಂಗೀತ ಮತ್ತು ಕಲೆಯ ಡಿಪ್ಲೋಮಾ ಕೋರ್ಸ್ ಸೇರಿಕೊಂಡರು. ಆದರೆ ಕೋರ್ಸ್ನ ಕೊನೆಯಲ್ಲಿದ್ದಾಗ ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಎದುರಾದ ಕಾರಣ ಕೋರ್ಸ್ ಬಿಟ್ಟು ತಾಂಡಾಕ್ಕೆ ಮರಳಿದರು.
ಅಪ್ಪನಿಗೆ ಹೊಲದಲ್ಲಿ ದುಡಿಯುವುದು ಆಗುತ್ತಿರಲಿಲ್ಲ. ಹಾಗಾಗಿ ಹೈದರಾಬಾದ್ಗೆ ತೆರಳಿದ ಮಂಗ್ಲಿ, ಅಲ್ಲಿ ಮಕ್ಕಳಿಗೆ ಸಂಗೀತ ಹೇಳಿಕೊಟ್ಟು ಬಂದ ಅಲ್ಪ-ಸ್ವಲ್ಪ ದುಡ್ಡಿನಲ್ಲೇ ಟಿಸಿಎಚ್ (ಶಿಕ್ಷಕರ ತರಬೇತಿ) ಪೂರ್ತಿ ಮಾಡಿ, ಶಿಕ್ಷಕಿಯಾಗಿ ಸೇರಿಕೊಂಡರು. ಆದರೆ ಗಾಯನ ಬಿಡಲಿಲ್ಲ. ಅದೇ ಸಮಯದಲ್ಲಿ ಖ್ಯಾತ ಜನಪದ ಗಾಯಕ ಭಿಕ್ಷು ನಾಯಕ್ ಅವರ ತಂಡ ಸೇರಿಕೊಂಡು ಅವರೊಟ್ಟಿಗೆ ಕಾರ್ಯಕ್ರಮಗಳನ್ನು ನೀಡಿದರು. ಭಿಕ್ಷು ಅವರೇ ವಿ-ಚಾನೆಲ್ನ ಕಾರ್ಯಕ್ರಮವೊಂದಕ್ಕೆ ಮಂಗ್ಲಿಯನ್ನು ಕಳಿಸಿಕೊಟ್ಟರು. ಅಲ್ಲಿ ಮಂಗ್ಲಿ ಮಾತನಾಡುವ ತೆಲಂಗಾಣ ತೆಲುಗು ಭಾಷೆ, ಅವರ ಗಾಯನ ಚಾನೆಲ್ ಅಧಿಕಾರಿಗೆ ಹಿಡಿಸಿ ತಮಗಾಗಿ ಕಾರ್ಯಕ್ರಮ ನಿರೂಪಣೆ ಮಾಡುವಂತೆ ಕೇಳಿಕೊಂಡರು.
ಇದನ್ನೂ ಓದಿ:‘ವಿಡಿಯೋ ಮಾಡೋದು ನಿಲ್ಲಿಸು’; ಡ್ರಗ್ ಪಾರ್ಟಿ ವೇಳೆ ಪೊಲೀಸರಿಗೆ ಗಾಯಕಿ ಮಂಗ್ಲಿ ಆವಾಜ್
ಅದಕ್ಕೆ ಎಸ್ ಹೇಳಿದ ಮಂಗ್ಲಿ (ಆಗಿನ್ನೂ ಸತ್ಯವತಿ) ಕಾರ್ಯಕ್ರಮಕ್ಕಾಗಿ ತಮ್ಮ ಮೂಲ ಹೆಸರು ಸತ್ಯವತಿಯನ್ನು ಬಿಟ್ಟು ತಮ್ಮ ಅಜ್ಜಿ ಹೆಸರು ಮಂಗ್ಲಿಯನ್ನು ತಮ್ಮ ಹೆಸರನ್ನಾಗಿ ಮಾಡಿಕೊಂಡರು. ‘ಮಾಟಕಾರಿ ಮಂಗ್ಲಿ’ ಎಂಬ ಶೋ ನಡೆಸಿಕೊಟ್ಟರು. ಆ ಶೋ ಭಾರಿ ದೊಡ್ಡ ಹಿಟ್ ಆಯ್ತು. ಮಂಗ್ಲಿ ತೆಲಂಗಾಣದ ಪ್ರತಿನಿಧಿ ಆಗಿಬಿಟ್ಟರು. ಅದರ ಬೆನ್ನಲ್ಲೆ ‘ತೀನ್ಮಾರ್’, ‘ತೀನ್ಮಾರ್ ನ್ಯೂಸ್’, ‘ಜಬರ್ದರ್ಸ್ ನ್ಯೂಸ್’ ಇನ್ನೂ ಕೆಲವು ಶೋಗಳನ್ನು ಮಾಡಿದರು. ಮಾಡಿದ ಎಲ್ಲ ಶೋ ಸೂಪರ್-ಡೂಪರ್ ಹಿಟ್ ಆಯ್ತು.
ಅದೇ ಸಮಯದಲ್ಲಿ ತೆಲಂಗಾಣ ವಿಭಜನೆ ಚಳವಳಿ ಜೋರಾಗಿತ್ತು, ಆಗ ಮಂಗ್ಲಿ ಹಾಡಿದ ‘ರೇ ಲಾ ರೇಲಾ’ ಹಾಡು ಒಂದು ರೀತಿ ಕ್ರಾಂತಿ ಗೀತೆಯೇ ಆಗಿಬಿಟ್ಟತು. ಇದೇ ಕಾರಣಕ್ಕೆ ತೆಲಂಗಾಣ ಸ್ಥಾಪನಾ ದಿನದಂದು ಸಿಎಂ ಚಂದ್ರಶೇಖರ ರಾವ್ ಅವರು ಮಂಗ್ಲಿಯಿಂದ ‘ತೆಲಂಗಾಣ ಹಾಡು’ ಹಾಡಿಸಿದರು. ಮಂಗ್ಲಿ ಹಾಡಿದ ‘ಓರಕಲ್ಲು ಕೋಟನಡುಗು’ ಹಾಡು ತೆಲಂಗಾಣದ ರಾಜ್ಯಗೀತೆಯಂತಾಗಿಬಿಟ್ಟಿತು. ಆ ಬಳಿಕ ಮಂಗ್ಲಿ ಗಾಯನವನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡರು. ಹಲವಾರು ಜನಪದ ಹಾಡುಗಳನ್ನು ಹಾಡಿದರು. ಪ್ರತಿ ಹಬ್ಬಕ್ಕೂ ಮಂಗ್ಲಿ ಹೊಸ ಹಾಡು ಹಾಡಿ ಯೂಟ್ಯೂಬ್ ಇನ್ನಿತರೆ ಕಡೆ ಹಂಚಿಕೊಳ್ಳುತ್ತಿದ್ದರು. ಮಂಗ್ಲಿಯ ‘ಬೋನಾಲ ಪಾಟ’ ಭಾರಿ ಜನಪ್ರಿಯವಾಯ್ತು.
ಮಂಗ್ಲಿ ಮೊದಲ ಸಿನಿಮಾ ಹಾಡು ಹಾಡಿದ್ದು 2018 ರಲ್ಲಿ. ನಾಗ ಚೈತನ್ಯ ನಟನೆಯ ‘ಶೈಲಜಾ ರೆಡ್ಡಿ ಅಲ್ಲುಡು’ ಸಿನಿಮಾದ ಟೈಟಲ್ ಹಾಡನ್ನು ಮಂಗ್ಲಿ ಹಾಡಿದರು. ಆ ನಂತರ ಮಂಗ್ಲಿ ತಿರುಗಿ ನೋಡಿದ್ದೇ ಇಲ್ಲ. ‘ಅಲಾ ವೈಕುಂಟಪುರಂಲೋ’ ಸಿನಿಮಾದ ‘ರಾಮುಲೋ ರಾಮುಲ’, ‘ಜಾರ್ಜ್ ರೆಡ್ಡಿ’ಯ ‘ಬುಲೆಟ್’ ಹಾಡು, ‘ಲವ್ ಸ್ಟೋರಿ’ ಸಿನಿಮಾದ ‘ಸಾರಂಗ ದರಿಯಾ’, ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾದ ‘ಕಣ್ಣೆ ಅಧಿರಿಂದಿ’, ಪುಷ್ಪ ಸಿನಿಮಾದ ‘ಊ ಅಂಟಾವ, ಊ ಹು ಅಂಟಾವ’, ‘ವಿಕ್ರಾಂತ್ ರೋಣ’ ಸಿನಿಮಾದ ‘ಎಕ್ಕ ಸಕ್ಕ’ (ತೆಲುಗಿನಲ್ಲಿ ಮಾತ್ರ) ಹಾಡು ಹೀಗೆ ಒಂದರ ಹಿಂದೆ ಒಂದು ಬ್ಲಾಕ್ ಬಸ್ಟರ್ ಹಾಡುಗಳನ್ನು ಹಾಡಿದರು. ಕನ್ನಡ, ತಮಿಳು, ತೆಲುಗು, ಶಾರುಖ್ ಖಾನ್ ನಟನೆಯ ಹಿಂದಿ ಸಿನಿಮಾ ‘ಜವಾನ್’ನಲ್ಲಿಯೂ ಮಂಗ್ಲಿ ಹಾಡಿದ್ದಾರೆ.
ಇತ್ತೀಚೆಗಂತೂ ಮಂಗ್ಲಿ ಲೈವ್ ಶೋಗಳಿಂದ ಭಾರಿ ಸದ್ದು ಮಾಡುತ್ತಿದ್ದರು. ಖಾಸಗಿ ಪಾರ್ಟಿಗಳಲ್ಲಿಯೂ ಹಾಡುತ್ತಿದ್ದರು. ಇತ್ತೀಚೆಗಷ್ಟೆ ಹೈದರಾಬಾದ್ನ ಐಶಾರಾಮಿ ಪಬ್ನಲ್ಲಿ ಯಶಸ್ವಿಯಾಗಿ ‘ಮಂಗ್ಲಿ ನೈಟ್ಸ್’ ಹೆಸರಿನ ಲೈವ್ ಗಾಯನ ಶೋ ಅನ್ನು ಯಶಸ್ವಿಯಾಗಿ ನಡೆಸಿದ್ದರು. ಮೊದಲೆಲ್ಲ ಉಡುಪಿನಲ್ಲಿ, ಮಾತಿನಲ್ಲಿ ಜನಪದವನ್ನು ಪ್ರತಿನಿಧಿಸುತ್ತಿದ್ದ ಮಂಗ್ಲಿ, ಬೇಡಿಕೆ, ಜನಪ್ರಿಯತೆ ಹೆಚ್ಚಾದಂತೆ ಅವರ ವೇಷ ಭೂಷಣಗಳು ತುಸು ಬದಲಾಗಿದ್ದವು. ಇದೀಗ ಮಂಗ್ಲಿ ಆಯೋಜಿಸಿದ್ದ ಬರ್ತ್ ಡೇ ಪಾರ್ಟಿಯ ಮೇಲೆ ಪೊಲೀಸರು ದಾಳಿ ಮಾಡಿದ್ದು, ಮಾದಕ ವಸ್ತು ಬಳಕೆ ಪ್ರಕರಣ ದಾಖಲಿಸಿದ್ದಾರೆ. ಮುಂದೇನಾಗುತ್ತದೆಯೋ ಕಾದು ನೋಡಬೇಕು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Wed, 11 June 25