ನಟ ನಾಗಾರ್ಜುನ ವಿರುದ್ಧ ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಿದ ಸಚಿವೆ ಕೊಂಡ ಸುರೇಖ
Akkineni Nagarjuna: ಹಿರಿಯ ನಟ, ಉದ್ಯಮಿ ಅಕ್ಕಿನೇನಿ ನಾಗಾರ್ಜುನ ಅವರಿಗೆ ತೆಲಂಗಾಣ ಸಚಿವೆ ಕೊಂಡ ಸುರೇಖ ಅವರು ಕ್ಷಮೆ ಯಾಚಿಸಿದ್ದಾರೆ. ಮಧ್ಯರಾತ್ರಿ ಟ್ವೀಟ್ ಮಾಡಿರುವ ಕೊಂಡ ಸುರೇಖ, ಈ ಹಿಂದೆ ನಾಗಾರ್ಜುನ ಅವರ ಬಗ್ಗೆ ಅವರ ಕುಟುಂಬದ ಬಗ್ಗೆ ನೀಡಿದ್ದ ಹೇಳಿಕೆಯನ್ನು ಬೇಷರತ್ ಹಿಂಪಡೆಯುವುದಾಗಿ ಕೊಂಡ ಸುರೇಖ ಹೇಳಿದ್ದಾರೆ.

ತೆಲುಗು ಚಿತ್ರರಂಗದ ಸ್ಟಾರ್ ನಟ ಮತ್ತು ಉದ್ಯಮಿ ಅಕ್ಕಿನೇನಿ ನಾಗಾರ್ಜುನ (Akkineni Nagarjuna). ಅವರ ಕುಟುಂಬದವರು ಚಿತ್ರರಂಗ ಮತ್ತು ಚಿತ್ರರಂಗಕ್ಕೆ ಸಂಬಂಧಿಸಿದ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ತೆಲುಗು ಚಿತ್ರರಂಗದ ಇತರೆ ಪ್ರಮುಖ ಕುಟುಂಬಗಳಾದ ನಂದಮೂರಿ ಮತ್ತು ಮೆಗಾಸ್ಟಾರ್ ಚಿರಂಜೀವಿ ಅವರ ಕೋನಿದೆಲ ಕುಟುಂಬದವರಂತೆ ರಾಜಕೀಯದ ಕಡೆಗೆ ಮುಖ ಮಾಡಿಲ್ಲ. ಆದರೆ ಇದೀಗ ತೆಲಂಗಾಣದ ಸಚಿವೆ ಕೊಂಡ ಸುರೇಖ ನಟ ನಾಗಾರ್ಜುನ ಅವರಿಗೆ ಬಹಿರಂಗ ಕ್ಷಮಾಪಣೆ ಕೇಳಿದ್ದಾರೆ. ಅವರ ಬಗ್ಗೆ ನೀಡಿದ್ದ ಹೇಳಿಕೆಯನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ.
ಕೊಂಡ ಸುರೇಖ, ತೆಲಂಗಾಣ ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಖಾತೆ ಸಚಿವೆ ಆಗಿದ್ದು, ತಮ್ಮ ಬಿಡುಬೀಸು ಮಾತುಗಳಿಂದಾಗಿ ಆಗಾಗ್ಗೆ ವಿವಾದಕ್ಕೆ ಗುರಿ ಆಗುತ್ತಲೇ ಇರುತ್ತಾರೆ. ಕೊಂಡ ಸುರೇಖ, ನಿನ್ನೆ ಮಧ್ಯರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಪತ್ರವೊಂದನ್ನು ಪ್ರಕಟಿಸಿದ್ದು, ನಾಗಾರ್ಜುನ ಅವರ ಕುಟುಂಬಕ್ಕೆ ಬಹಿರಂಗವಾಗಿ ಕ್ಷಮೆ ಕೇಳಿರುವುದಲ್ಲದೆ, ಹಿಂದೊಮ್ಮೆ ನಾಗಾರ್ಜುನ ಹಾಗೂ ಅವರ ಕುಟುಂಬದ ಬಗ್ಗೆ ನೀಡಿದ್ದ ಹೇಳಿಕೆಯನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ.
ನಾಗಾರ್ಜುನ ಅವರ ಪುತ್ರ ನಟ ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನದ ಬಗ್ಗೆ ಕೊಂಡ ಸುರೇಖ ಮಾತನಾಡಿದ್ದರು. ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ ವಿಪಕ್ಷ ನಾಯಕ ಕೆಟಿಆರ್ ಕಾರಣ ಎಂದು ಕೊಂಡ ಸುರೇಖ ಹೇಳಿದ್ದರು. ಕೆಟಿಆರ್ಗೂ ಸಮಂತಾಗೂ ಸಂಬಂಧ ಇತ್ತು ಎಂಬರ್ಥ ಮೂಡುವಂತೆ ಸುರೇಖ ಮಾಧ್ಯಮಗಳೆದುರು ಮಾತನಾಡಿದ್ದರು. ಅಲ್ಲದೆ ನಟ ನಾಗಾರ್ಜುನ ಮೇಲೂ ಸಹ ಕೆಲ ಅಕ್ರಮಗಳ ಆರೋಪಗಳನ್ನು ಮಾಡಿದ್ದರು.
ಇದನ್ನೂ ಓದಿ:ಸಚಿವೆ ಕೊಂಡ ಸುರೇಖಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಾಗಾರ್ಜುನ
2024 ರಲ್ಲಿ ಕೊಂಡ ಸುರೇಖ ಈ ಹೇಳಿಕೆ ನೀಡಿದ್ದರು. ಕೊಂಡ ಸುರೇಖ ಹೇಳಿಕೆಗೆ ಆಗಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧ ವ್ಯಕ್ತವಾದ ಬೆನ್ನಲ್ಲೆ, ‘ನಾನು ಕೆಟಿಆರ್ ಅನ್ನು ಟೀಕೆ ಮಾಡುವ ಭರದಲ್ಲಿ ಸಮಂತಾ ಮನಸ್ಸಿಗೆ ಘಾಸಿ ಮಾಡಿದ್ದೇನೆ’ ಎಂದು ಕ್ಷಮೆ ಕೇಳಿದ್ದರು. ಆದರೆ ನಟ ನಾಗಾರ್ಜುನ, ಕೊಂಡ ಸುರೇಖ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅದೇ ಸಮಯದಲ್ಲಿ ಬಿಆರ್ಎಸ್ ಪಕ್ಷದ ನಾಯಕ ಕೆಟಿಆರ್ ಸಹ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗಿ ವರ್ಷವಾಗುತ್ತಾ ಬಂದಿದ್ದು, ಇದೀಗ ಕೊಂಡ ಸುರೇಖ ಬಹಿರಂಗ ಕ್ಷಮೆ ಕೇಳಿದ್ದಾರೆ.
ಸಮಂತಾ ಹಾಗೂ ನಾಗ ಚೈತನ್ಯ ಪ್ರೀತಿಸಿ 2017 ರಲ್ಲಿ ವಿವಾಹವಾದರು. ಇಬ್ಬರೂ ಅನ್ಯೋನ್ಯವಾಗಿದ್ದರು. ಆದರೆ 2021 ರಲ್ಲಿ ಈ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ದೂರಾದರು. ಇಬ್ಬರ ವಿಚ್ಛೇದನದ ಹಿಂದೆ ರಾಜಕಾರಣಿಯೊಬ್ಬರ ಕೈವಾಡ ಇದೆ ಎನ್ನಲಾಗಿತ್ತು. ಅದೇ ಸಮಯದಲ್ಲಿ ಹೊರಬಂದ ಫೋನ್ ಟ್ಯಾಪಿಂಗ್ಗೂ ಸಮಂತಾ ವಿಚ್ಛೇದನಕ್ಕೆ ಸಂಬಂಧ ಇದೆ ಎಂಬ ಸುದ್ದಿಗಳು ಸಹ ಹರಿದಾಡಿದವು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




