ಕಿರುತೆರೆ ಪ್ರೇಕ್ಷಕರು ಮಾತ್ರವಲ್ಲ, ಟಿವಿ ಮುಂದೆ ಕೂರೋದಿಲ್ಲ ಎಂದು ಮಾರು ದೂರ ಹೋಗುವವರೂ ಬಿಗ್ ಬಾಸ್ (Bigg Boss) ಆರಂಭವಾಯಿತೆಂದರೆ ಕುತೂಹಲದಿಂದ ನೋಡುತ್ತಾರೆ. ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗೆ ಹೋಗಬಹುದು? ಯಾರು ಈ ಬಾರಿಯ ಸೂಪರ್ ಕಂಟೆಸ್ಟೆಂಟ್ಗಳು? ಅಭಿಮಾನಿಗಳ ಪ್ರೀತಿಯ ಕಿಚ್ಚ ಸುದೀಪ್ ವೇದಿಕೆಯ ಮೇಲೆ ಏನು ಮಾತನಾಡುತ್ತಾರೆ? ಹೇಗೆ ಕಾಣಿಸಿಕೊಳ್ಳುತ್ತಾರೆ? ಬಿಗ್ ಬಾಸ್ ಉದ್ಘಾಟನೆ ಹೇಗಿರಬಹುದು? ಹೀಗೆ ಹತ್ತು ಹಲವು ಕುತೂಹಲಗಳು ಅಭಿಮಾನಿಗಳ ಮನಸಲ್ಲಿ ಕುಣಿಯಲು ತೊಡಗಿರುತ್ತದೆ.
ಈ ಎಲ್ಲಾ ಪ್ರಶ್ನೆ, ಕುತೂಹಲಗಳಿಗೆ ತೆರೆಬೀಳುವ ದಿನ ದೂರವಿಲ್ಲ. ಕನ್ನಡ ಬಿಗ್ ಬಾಸ್ ಸೀಸನ್ 8 (Bigg Boss Kannada 8) ಆರಂಭವಾಗಲು ಇನ್ನು ಏಳು ದಿನಗಳಷ್ಟೇ ಬಾಕಿ ಇದೆ. ಬಿಗ್ ಬಾಸ್ ಚಾಲನೆಗೆ ಒಂದು ವಾರ ಉಳಿದಿರುವ ಈ ವೇಳೆ, ವಾಹಿನಿ ಹೊಸ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ, ಬಿಗ್ ಬಾಸ್ ನಿರೂಪಕ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಸ್ಮಾರ್ಟ್ ಆಗಿ ಕಾಣಿಸಿಕೊಂಡಿದ್ದಾರೆ.
ಸುದೀಪ್, ಸೇಬು ಹಣ್ಣು ತಿನ್ನುತ್ತಾ, ತಮ್ಮ ಎಂದಿನ ಖದರ್ನಲ್ಲಿ ಬಿಗ್ ಬಾಸ್ ಆರಂಭಕ್ಕೆ ಇನ್ನು ಏಳೇ ದಿನ ಬಾಕಿ ಎಂದು ಹೇಳಿದ್ದಾರೆ. ಕೈ ಬೆರಳ ಸನ್ನೆಯ ಮೂಲಕ ಬಿಗ್ ಬಾಸ್ ಆರಂಭಕ್ಕೆ ‘ಏಳು’ ದಿನವಷ್ಟೇ ಬಾಕಿ ಎಂದು ತಿಳಿಸಿದ್ದಾರೆ.
ಈ ಪ್ರೋಮೊವನ್ನು ವಾಹಿನಿಯ ಮುಖ್ಯಸ್ಥರು ಹಂಚಿಕೊಂಡಿದ್ದಾರೆ. ಜತೆಗೆ, Preparing, with nervousness, few days to go ಎಂದು ಕ್ರಿಕೆಟ್ ಪಂದ್ಯಾಟದ ಸಮಯದಲ್ಲಿ ತಂಡವೊಂದು ಎದುರಿಸುವ ಸಂದರ್ಭಗಳನ್ನು ಉಲ್ಲೇಖಿಸಿ ಅನುಭವ ಹಂಚಿಕೊಂಡಿದ್ದಾರೆ.
ಗೆಲ್ಲಬೇಕು ಅಂದುಕೊಂಡಿರುವ ಕೋಚ್ ಯಾವಾಗಲೂ ತಂಡದ ಬಗ್ಗೆ ಯೋಚನೆ ಮಾಡುತ್ತಾನೆ. ತನಗೆ ಇಷ್ಟ ಅಂತ ಯಾರನ್ನಾದರೂ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ಪಂದ್ಯ ಗೆಲ್ಲಲೇಬೇಕಾದ ಒತ್ತಡ ಇರುವ ಕೋಚ್ಗೆ ಇಲ್ಲ. ಐದು ಜನ ಬ್ಯಾಟ್ಸಮನ್ಗಳು, ಒಬ್ಬ ವಿಕೆಟ್ ಕೀಪರ್ ಬ್ಯಾಟ್ಸಮನ್, ಮೂರು ಜನ ವೇಗದ ಬೌಲರುಗಳು, ಇಬ್ಬರು ಸ್ಪಿನ್ನರುಗಳು. ಒಟ್ಟು ಹನ್ನೊಂದು ಜನ. ಈ ಕಾಂಬಿನೇಷನ್ ಸನ್ನಿವೇಶಕ್ಕೆ ತಕ್ಕಂತೆ, ಆಡೋ ಜಾಗಕ್ಕೆ ತಕ್ಕಂತೆ, ಎದುರಾಳಿಯ ಸಾಮರ್ಥ್ಯಕ್ಕೆ ತಕ್ಕಂತೆ ಬದಲಾಗಬಹುದು.. ಎನ್ನುತ್ತಾ ಬಿಗ್ ಬಾಸ್ ಯಶಸ್ವಿ ಆಗಲೇಬೇಕು ಎಂದು ಹೇಳಿಕೊಂಡಿದ್ದಾರೆ.
ಮನೇಲಿ ಕೂತು ಆರಾಮಾಗಿ ಮ್ಯಾಚ್ ನೋಡುವ ನಮಗೆ ಕೋಚ್ ಮಾಡಿದ್ದೆಲ್ಲಾ ತಪ್ಪು ಅನಿಸುವುದೂ ಇದೆ. ಟಾಸ್ ಗೆದ್ದರೆ ಬ್ಯಾಟಿಂಗ್ ಮಾಡಬೇಕೋ ಅಥವಾ ಬೌಲಿಂಗ್ ಮಾಡಬೇಕೋ ಅನ್ನುವ ತೀರ್ಮಾನ ತೆಗೆದುಕೊಳ್ಳುವ ಅರ್ಹತೆ ಸೋಫಾದಲ್ಲಿ ಕುಳಿತು ನೋಡುವ ನಮಗಿಂತ (ಅಂಥವರಲ್ಲಿ ನನ್ನಂಥ ಎಷ್ಟೋ ಜನ ಹೆಚ್ಚೆಂದರೆ ಟೆನಿಸ್ ಬಾಲಿನಲ್ಲಿ ಬೀದಿಯಲ್ಲಿ ಕ್ರಿಕೆಟ್ ಆಡಿ ಅನುಭವ ಇದ್ದವರು) ಬಹುಶಃ ಫೀಲ್ಡಿನಲ್ಲಿ ಇಳಿದು ಆಡುವ ಕ್ಯಾಪ್ಟನ್ನಿಗೆ ಅಥವಾ ಅವನನ್ನು ರೂಪಿಸುವ ಕೋಚ್ಗೆ ಹೆಚ್ಚಿರುತ್ತದೆ ಎಂದು ತಮ್ಮ ಜವಾಬ್ದಾರಿಯನ್ನು ಹೇಳಿದ್ದಾರೆ.
ಪಂದ್ಯಕ್ಕೆ ಮೊದಲಿನ ತಳಮಳ ಆಡುವವರಿಗೆ ಹೆಚ್ಚೋ? ನೋಡುವವರಿಗೆ ಹೆಚ್ಚೋ? ಹಿಂಜರಿಕೆ ಅನ್ನೋದು ಸಂಕೋಚದಿಂದ ಬರುತ್ತಾ, ಆತ್ಮವಿಶ್ವಾಸದ ಕೊರತೆಯಿಂದ ಬರುತ್ತಾ ಅಥವಾ ಆಟ ಎಷ್ಟು ದೊಡ್ಡದು ಎಂಬ ಗೌರವದಿಂದ ಬರುತ್ತಾ? ಗೊತ್ತಿಲ್ಲ ಎಂದು ತಮ್ಮ ತಯಾರಿಯನ್ನು ಉದಾಹರಣೆಯೊಂದಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: Bigg Boss Kannada 8: ಕನ್ನಡ ಬಿಗ್ ಬಾಸ್-8ಕ್ಕೆ ಆಯ್ಕೆಯಾದ ಸ್ಪರ್ಧಿಗಳು ಸ್ಟಾರ್ ಹೋಟೆಲ್ಗಳಲ್ಲಿ ಕ್ವಾರಂಟೈನ್?
Bigg Boss Kannada 8 ಪ್ರವೇಶಿಸುವ ಸ್ಪರ್ಧಿಗಳು ಯಾರು? ಇಲ್ಲಿದೆ ವಿವರ..