ಕನ್ನಡದ ಬಗ್ಗೆ ತಪ್ಪು ಮಾತನಾಡಿ ಬಹಿರಂಗವಾಗಿ ಕ್ಷಮೆ ಕೇಳಿದ ಆಶಿಕಾ ಪಡುಕೋಣೆ, ಚಂದು ಗೌಡ

Chandu Gowda | Ashika Padukone: ವಿಷಯ ಗಂಭೀರ ಆಗುತ್ತಿದ್ದಂತೆಯೇ ಚಂದು ಗೌಡ ಮತ್ತು ಆಶಿಕಾ ಪಡುಕೋಣೆ ಎಚ್ಚೆತ್ತುಕೊಂಡಿದ್ದಾರೆ. ಒಂದು ವಿಡಿಯೋ ಮೂಲಕ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

ಕನ್ನಡದ ಬಗ್ಗೆ ತಪ್ಪು ಮಾತನಾಡಿ ಬಹಿರಂಗವಾಗಿ ಕ್ಷಮೆ ಕೇಳಿದ ಆಶಿಕಾ ಪಡುಕೋಣೆ, ಚಂದು ಗೌಡ
ಆಶಿಕಾ ಪಡುಕೋಣೆ ಮತ್ತು ಚಂದು ಗೌಡ

ಕನ್ನಡಕ್ಕೆ ಗೂಗಲ್​ನಲ್ಲಿ ಅವಮಾನ ಆಗಿದ್ದರ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇ ಸಂದರ್ಭಕ್ಕೆ ಸರಿಯಾಗಿ ಕಿರುತೆರೆ ಕಲಾವಿದರಾದ ಚಂದು ಗೌಡ ಮತ್ತು ಆಶಿಕಾ ಪಡುಕೋಣೆ ಅವರು ಕನ್ನಡಿಗರ ಕೋಪಕ್ಕೆ ಗುರಿ ಆಗಿದ್ದಾರೆ. ಅಷ್ಟಕ್ಕೂ ಇವರಿಬ್ಬರು ಮಾಡಿದ ತಪ್ಪೇನು? ‘ಬೆಂಗಳೂರಿನಲ್ಲಿ ಇರುವ ಶೇ.70ರಿಂದ ಶೇ.80ರಷ್ಟು ಮಂದಿ ತೆಲುಗು ಜನರೇ ಇದ್ದಾರೆ’ ಎಂದು ನಟಿ ಆಶಿಕಾ ಪಡುಕೋಣೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದು ಕರುನಾಡ ಜನತೆಯ ಅಸಮಾಧಾನಕ್ಕೆ ಕಾರಣ ಆಗಿದೆ. ಅದಕ್ಕೆ ಈಗ ಚಂದು ಗೌಡ ಮತ್ತು ಆಶಿಕಾ ಪಡುಕೋಣೆ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ.

ಕನ್ನಡದ ಅನೇಕ ಕಲಾವಿದರು ತೆಲುಗು ಕಿರುತೆರೆಗೆ ಹೋಗಿ ಫೇಮಸ್​ ಆಗಿದ್ದಾರೆ. ಅದೇ ರೀತಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದು ಗೌಡ ಹಾಗೂ ಆಶಿಕಾ ಪಡುಕೋಣೆ ಕೂಡ ತೆಲುಗು ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲಿನ ‘ತ್ರಿನಯನಿ’ ಸೀರಿಯಲ್​ನಲ್ಲಿ ಅವರಿಬ್ಬರು ನಟಿಸುತ್ತಿದ್ದಾರೆ. ಈ ಧಾರಾವಾಹಿ ಸಲುವಾಗಿ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಂದು ಗೌಡ ಮತ್ತು ಆಶಿಕಾ ತಪ್ಪಾಗಿ ಮಾತನಾಡಿದ್ದಾರೆ.

ವಿಷಯ ಗಂಭೀರ ಆಗುತ್ತಿದ್ದಂತೆಯೇ ಅವರಿಬ್ಬರು ಎಚ್ಚೆತ್ತುಕೊಂಡಿದ್ದಾರೆ. ಒಂದು ವಿಡಿಯೋ ಮೂಲಕ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ‘ಬೆಂಗಳೂರಿನ ಶೇ.70ರಿಂದ 80ರಷ್ಟು ಜನರು ನಮ್ಮ ತೆಲುಗು ಸೀರಿಯಲ್​ ನೋಡುತ್ತಾರೆ ಎಂದು ಹೇಳುವುದು ನನ್ನ ಉದ್ದೇಶ ಆಗಿತ್ತು. ಅದನ್ನು ನಾನು ತೆಲುಗಿನಲ್ಲಿ ಹೇಳಿದೆ. ನಾನು ಈಗೀಗ ತೆಲುಗು ಕಲಿಯುತ್ತಿದ್ದೇನೆ. ಚಿಕ್ಕ-ಪುಟ್ಟ ತಪ್ಪುಗಳಾಗುತ್ತವೆ. ದಯವಿಟ್ಟು ಎಲ್ಲ ಕನ್ನಡಿಗರು ನನ್ನನ್ನು ಕ್ಷಮಿಸಬೇಕು ಅಂತ ಕೇಳಿಕೊಳ್ಳುತ್ತೇನೆ’ ಎಂದು ಆಶಿಕಾ ಪಡುಕೋಣೆ ಹೇಳಿದ್ದಾರೆ.

‘ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಕನ್ನಡ ನನ್ನ ಮಾತೃಭಾಷೆ. ಯಾವತ್ತಿದ್ದರೂ ಅದರ ಮೇಲಿರುವ ಪ್ರೇಮ ನನಗೆ ಶೇ.1ರಷ್ಟು ಕೂಡ ಕಡಿಮೆ ಆಗುವುದಿಲ್ಲ. ಆ ಸಂದರ್ಶನವನ್ನು ನೀವು ಪೂರ್ತಿಯಾಗಿ ನೋಡಿದರೆ, ನಾವು ಅದರಲ್ಲಿ ತಪ್ಪಾಗಿ ಮಾತನಾಡಿಲ್ಲ ಎಂಬುದು ತಿಳಿಯುತ್ತದೆ. ಬದುಕಿರುವವರೆಗೂ ನಾವು ಕನ್ನಡವನ್ನು ಕೆಳಗಿಳಿಸುವ ಕೆಲಸ ಮಾಡುವುದಿಲ್ಲ. ದುಡ್ಡಿಗೋಸ್ಕರ ಕನ್ನಡವನ್ನು ಮಾರಿಕೊಳ್ಳುತ್ತಿದ್ದಾರೆ ಎಂದೆಲ್ಲ ನಮ್ಮ ಮೇಲೆ ಆರೋಪಿಸಲಾಗುತ್ತಿದೆ. ಅಷ್ಟು ಕೀಳುಮಟ್ಟಕ್ಕೆ ನಾವು ಇಳಿದಿಲ್ಲ’ ಎಂದು ಚಂದು ಗೌಡ ಹೇಳಿದ್ದಾರೆ.

‘ನಮ್ಮಂಥ ಚಿಕ್ಕ ಕಲಾವಿದರನ್ನು ಯಾಕೆ ಟಾರ್ಗೆಟ್​ ಮಾಡುತ್ತಿದ್ದೀರಿ? ಸಂದರ್ಶನದ ಒಂದು ಚಿಕ್ಕ ತುಣುಕನ್ನು ಇಟ್ಟುಕೊಂಡು ಬೇರೆ ಅರ್ಥ ಕಲ್ಪಿಸಬೇಡಿ. ನಮ್ಮ ಮಾತುಗಳಿಂದ ಯಾರ ಭಾವನೆಗಳಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ನಾವು ಹೊರ ರಾಜ್ಯಕ್ಕೆ ಹೋದರೂ ಕನ್ನಡ ಮರೆತಿಲ್ಲ. ಇಲ್ಲಿ ಕೆಲಸ ಮಾಡಲು ಬಂದಿದ್ದೇವೆ ಅಷ್ಟೇ’ ಎಂದು ಚಂದು ಗೌಡ ಮತ್ತು ಆಶಿಕಾ ಪಡುಕೋಣೆ ಹೇಳಿದ್ದಾರೆ.

ಇದನ್ನೂ ಓದಿ:

Kannada Language: ಕನ್ನಡಕ್ಕೆ ಅವಮಾನ; ಸಿಡಿದೆದ್ದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು

Ugliest Language in India: ಕನ್ನಡಿಗರ ಸ್ವಾಭಿಮಾನ ಕೆಣಕಿದ ಗೂಗಲ್​; ಕನ್ನಡವನ್ನು ಕೊಳಕು ಭಾಷೆ ಎಂದು ಅಪಮಾನಿಸಿದ ಸರ್ಚ್​ ಎಂಜಿನ್