ಟ್ರೋಫಿ ಗೆಲ್ಲುವ ಕನಸು ಕಟ್ಟಿಕೊಂಡು ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದ ಧನುಶ್ರೀ ಅವರಿಗೆ ತೀವ್ರ ನಿರಾಸೆ ಆಗಿದೆ. ಭಾನುವಾರ (ಮಾ.7) ಅವರು ಎಲಿಮಿನೇಟ್ ಆಗಿದ್ದಾರೆ. ಈ ವಾರ ನಾಮಿನೇಟ್ ಆಗಿದ್ದ ಶುಭಾ ಪೂಂಜಾ ಮತ್ತು ವಿಶ್ವನಾಥ್ ಶನಿವಾರವೇ ಸೇಫ್ ಆಗಿದ್ದರು. ನಿರ್ಮಲಾ ಚೆನ್ನಪ್ಪ, ರಘು ಮತ್ತು ಧನುಶ್ರೀಗೆ ಢವಢವ ಮುಂದುವರಿದಿತ್ತು. ಅಂತಿಮವಾಗಿ ಧನುಶ್ರೀ ಅವರಿಗೆ ಅದೃಷ್ಟ ಕೈಕೊಟ್ಟಿದೆ.
ಫೆ.28ರಂದು ಅದ್ದೂರಿಯಾಗಿ ಆರಂಭವಾದ ‘ಬಿಗ್ ಬಾಸ್ ಕನ್ನಡ ಸೀಸನ್ 8’ ಶೋಗೆ 17 ಜನ ಸ್ಪರ್ಧಿಗಳು ಆಯ್ಕೆ ಆಗಿದ್ದರು. ಧನುಶ್ರೀ ಅವರ ಎಲಿಮಿನೇಷನ್ ಬಳಿಕ ಈಗ 16 ಸ್ಪರ್ಧಿಗಳ ನಡುವೆ ಪೈಪೋಟಿ ಮುಂದುವರಿದಿದೆ. ಎರಡನೇ ವಾರವೂ ಶಮಂತ್ ಬ್ರೋ ಗೌಡ ಕ್ಯಾಪ್ಟನ್ ಆಗಿ ಮುಂದುವರಿದಿದ್ದಾರೆ. ಮನೆಯಿಂದ ಹೊರಬಿದ್ದ ಧನುಶ್ರೀ ಅವರನ್ನು ಇನ್ನುಳಿದ ಸ್ಪರ್ಧಿಗಳು ಭಾವುಕವಾಗಿ ಬೀಳ್ಕೊಟ್ಟಿದ್ದಾರೆ.
ಅಷ್ಟಕ್ಕೂ ಅವರು ಮೊದಲ ವಾರವೇ ಎಲಿಮಿನೇಟ್ ಆಗಿದ್ದಕ್ಕೆ ಕಾರಣ ಏನು? ಬಿಗ್ ಬಾಸ್ ಮನೆಯೊಳಗೆ ಕಾಲಿಡುವುದಕ್ಕೂ ಮುನ್ನ ಟಿಕ್ ಟಾಕ್ ವಿಡಿಯೋಗಳ ಮೂಲಕ ಧನುಶ್ರೀ ಫೇಮಸ್ ಆಗಿದ್ದರು. ಆದರೆ ಬಿಗ್ ಬಾಸ್ ಮನೆಯೊಳಗೆ ಮನರಂಜನೆ ನೀಡುವಲ್ಲಿ ಅವರು ಎಡವಿದರು. ಟಾಸ್ಕ್ ವಿಚಾರದಲ್ಲಿಯೂ ಅವರು ಹಿಂದೆ ಬಿದ್ದರು. ಈ ಕಾರಣಕ್ಕಾಗಿ ಅವರನ್ನು ‘ಕಳಪೆ’ ಸ್ಪರ್ಧಿ ಎಂದು ಬ್ರ್ಯಾಂಡ್ ಮಾಡಲಾಯಿತು. ನಂತರ ಒಂದು ದಿನ ಜೈಲಿಗೂ ಕಳಿಸಲಾಗಿತ್ತು.
ಮನೆಯಿಂದ ಹೊರಬರುವುದಕ್ಕೂ ಮುನ್ನ ಧನುಶ್ರೀಗೆ ಬಿಗ್ ಬಾಸ್ ಒಂದು ವಿಶೇಷ ಅಧಿಕಾರ ನೀಡಿದರು. ಮನೆಯಲ್ಲಿ ಇರುವ ಒಬ್ಬರನ್ನು ಮುಂದಿನ ವಾರದ ನಾಮಿನೇಷನ್ ಇಂದ ಪಾರು ಮಾಡುವ ಅವಕಾಶವನ್ನು ಅವರಿಗೆ ನೀಡಲಾಯಿತು. ಹಾಗಾಗಿ ರಘು ಅವರನ್ನು ಧನುಶ್ರೀ ಸೇಫ್ ಮಾಡಿದರು. ‘ರಘು ತಮ್ಮ ಸಾಮರ್ಥ್ಯವನ್ನು ಖಂಡಿತಾ ಸಾಬೀತುಪಡಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗೆ ಇದೆ. ಅದಕ್ಕಾಗಿ ಅವರಿಗೆ ಕಾಲಾವಕಾಶ ಬೇಕು’ ಎಂದು ತಮ್ಮ ಆಯ್ಕೆಗೆ ಧನುಶ್ರೀ ಕಾರಣ ನೀಡಿದರು.
ಇದನ್ನೂ ಓದಿ: 7 ಭಾರಿ ಬಿಗ್ ಬಾಸ್ ಆಫರ್ ತಿರಸ್ಕರಿಸಿದ ನಟಿ ಶುಭ ಪೂಂಜಾ