Jothe Jotheyali: ಆರ್ಯ – ಅನು ಸಿರಿಮನೆ ಬದುಕಲ್ಲಿ ಮಹತ್ತರ ತಿರುವು, ಆರ್ಯವರ್ಧನ್​ ಮೊದಲ ಹೆಂಡತಿ ರಾಜನಂದಿನಿ ಪಾತ್ರಕ್ಕೆ ಬಹುಭಾಷಾ ನಟಿ?

Aryavardhan - Anu Sirimane: ಈಗಾಗಲೇ ಹಿಂದಿ ಕಿರುತೆರೆಯಲ್ಲಿ ಮನೆಮಾತಾಗಿರುವ ಎರಿಕಾ ಫರ್ನಾಂಡಿಸ್ ಕನ್ನಡದ ಪ್ರಸಿದ್ಧ ಸಿನಿಮಾಗಳಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಇಷ್ಟೆಲ್ಲಾ ಜನಪ್ರಿಯತೆ ಹೊಂದಿರುವ ನಟಿ ಧಾರಾವಾಹಿಗೆ ಕಾಲಿಡುತ್ತಿದ್ದಾರೆ ಎನ್ನುವುದೇ ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ.

  • TV9 Web Team
  • Published On - 17:34 PM, 19 Feb 2021
Jothe Jotheyali: ಆರ್ಯ - ಅನು ಸಿರಿಮನೆ ಬದುಕಲ್ಲಿ ಮಹತ್ತರ ತಿರುವು, ಆರ್ಯವರ್ಧನ್​ ಮೊದಲ ಹೆಂಡತಿ ರಾಜನಂದಿನಿ ಪಾತ್ರಕ್ಕೆ ಬಹುಭಾಷಾ ನಟಿ?
ಅನಿರುದ್ಧ, ಎರಿಕಾ ಫರ್ನಾಂಡಿಸ್​, ಮೇಘಾ ಶೆಟ್ಟಿ

ಕನ್ನಡ ಕಿರುತೆರೆಯಲ್ಲಿ ಹೊಸ ಅಲೆಯನ್ನು ಹುಟ್ಟುಹಾಕಿದ ಜೊತೆಜೊತೆಯಲಿ ಧಾರಾವಾಹಿ ಪ್ರಸಾರವಾಗಲು ಆರಂಭಿಸಿದ ಒಂದು ವಾರದೊಳಗೇ ಜನಪ್ರಿಯತೆಯ ಉತ್ತುಂಗಕ್ಕೇರಿತ್ತು. ಟಿಆರ್​ಪಿ ಪಟ್ಟಿಯಲ್ಲಿ ನಂಬರ್​ 1 ಸ್ಥಾನಕ್ಕೆ ಲಗ್ಗೆಯಿಟ್ಟ ಈ ಧಾರಾವಾಹಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮತ್ತು ಅದ್ದೂರಿತನದೊಂದಿಗೆ ಧಾರಾವಾಹಿ ಕ್ಷೇತ್ರಕ್ಕೆ ಹೊಸ ಸ್ಪರ್ಷ ನೀಡುವ ಮೂಲಕ ಎಲ್ಲರಲ್ಲೂ ಬೆರಗು ಮೂಡಿಸಿತ್ತು. ಇದೀಗ ಅನಿರುದ್ಧ ಜತ್ಕಲ್ ಮತ್ತು ಮೇಘಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ಈ ಧಾರಾವಾಹಿಗೆ ಬಹುಭಾಷಾ ನಟಿ ಎರಿಕಾ ಫರ್ನಾಂಡಿಸ್ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಬಹುಪೈಪೋಟಿಯ ಮಧ್ಯೆ ಕೊಂಚ ಇಳಿಮುಖವಾಗಿರುವ ಧಾರಾವಾಹಿಯ ಟಿಆರ್​ಪಿಯನ್ನು ಮತ್ತೆ ಮೇಲೆತ್ತಲು ಸಕಲ ಪ್ರಯತ್ನಗಳೂ ಆಗುತ್ತಿದ್ದು ಅದರ ಭಾಗವಾಗಿಯೇ ಆರ್ಯವರ್ಧನ್ ಅವರ ಮೊದಲ ಹೆಂಡತಿ ಪಾತ್ರದಲ್ಲಿ ಎರಿಕಾ ಕಾಲಿಡಲಿದ್ದಾರಾ ಎಂಬ ಕುತೂಹಲ ಮೂಡಿದೆ.

ಈಗಾಗಲೇ ಹಿಂದಿ ಕಿರುತೆರೆಯಲ್ಲಿ ಮನೆಮಾತಾಗಿರುವ ಎರಿಕಾ ಫರ್ನಾಂಡಿಸ್ ಕನ್ನಡದ ಪ್ರಸಿದ್ಧ ಸಿನಿಮಾಗಳಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ಪುನೀತ್ ರಾಜ್​ಕುಮಾರ್ ಅಭಿನಯದ ‘ನಿನ್ನಿಂದಲೇ’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಈ ಚೆಂದದ ಬೆಡಗಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬುಗುರಿ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು. ಸದ್ಯ ಇಷ್ಟೆಲ್ಲಾ ಜನಪ್ರಿಯತೆ ಹೊಂದಿರುವ ನಟಿ ಧಾರಾವಾಹಿಗೆ ಕಾಲಿಡುತ್ತಿದ್ದಾರೆ ಎನ್ನುವುದೇ ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ.

ವೀಕ್ಷಕರ ಆಸೆ ಈಡೇರಿಸಲಿದ್ದಾರೆ ಎರಿಕಾ ಫನಾಂಡಿಸ್
ಜೊತೆಜೊತೆಯಲಿ ಧಾರಾವಾಹಿಯ ಆರ್ಯವರ್ಧನ್​ ಅವರ ಬದುಕಿನ ಹಳೇ ಕಥೆಗಳನ್ನು ತಿಳಿದುಕೊಳ್ಳಲು ವೀಕ್ಷಕರು ತುದಿಗಾಲಿನಲ್ಲಿ ಕಾಯುತ್ತಿದ್ದು, ಅವರ ಆಸೆಯನ್ನು ಈಡೇರಿಸಲೆಂದೇ ಎರಿಕಾ ಫರ್ನಾಂಡಿಸ್ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆರ್ಯವರ್ಧನ್​ ಅವರ ಮೊದಲ ಹೆಂಡತಿ ರಾಜನಂದಿನಿ ಪಾತ್ರಕ್ಕಾಗಿ ಎರಿಕಾ ಅವರನ್ನು ಆಯ್ಕೆ ಮಾಡಿರುವುದಕ್ಕೆ ಅನಿರುದ್ಧ್ ಮತ್ತು ಎರಿಕಾ ಅವರ ಅದ್ದೂರಿ ಫೋಟೋಶೂಟ್ ಪುಷ್ಠಿ ನೀಡಿದೆ.

ರೆಟ್ರೋ ಸ್ಟೈಲ್​ನಲ್ಲಿ ಇವರಿಬ್ಬರೂ ಫೋಟೋಶೂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ವೀಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದು, ಧಾರಾವಾಹಿ ಮುಂದಿನ ದಿನಗಳಲ್ಲಿ ಹೇಗೆ ಮೂಡಿಬರಬಹುದು ಎಂದು ನೋಡಲು ಕಾಯುತ್ತಿದ್ದಾರೆ. ಧಾರಾವಾಹಿಯಲ್ಲಿ ಹಲವು ಅತಿಥಿ ಪಾತ್ರಗಳನ್ನು ಪರಿಚಯಿಸಲಾಗುತ್ತಿದ್ದು, ಕೆಲ ಅನಿರೀಕ್ಷಿತ ತಿರುವುಗಳೊಂದಿಗೆ ಕಥೆಯನ್ನು ಕುತೂಹಲಕರವಾಗಿ ಕೊಂಡೊಯ್ಯಲಾಗುತ್ತಿದೆ. ಇನ್ನು ಎರಿಕಾ ಫರ್ನಾಂಡಿಸ್​ ಹೇಗೆ ಪಾತ್ರ ನಿರ್ವಹಿಸಲಿದ್ದಾರೆ. ಕಥೆ ಯಾವ ಘಟ್ಟದಲ್ಲಿ ತಿರುವು ಪಡೆದುಕೊಳ್ಳಲಿದೆ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.

ಈ ನಡುವೆ ಧಾರಾವಾಹಿಯಲ್ಲಿ ಸೂರ್ಯ-ಅನು ಮದುವೆಗೆ ಸಿದ್ಧತೆ ನಡೆಯುತ್ತಿದೆ. ಅಲ್ಲದೇ ರಾಜನಂದಿನಿ ವಿಭಾಗಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳು ಅನುಗೆ ಸಿಗುತ್ತಿದ್ದು, ಹಿಂದಿನ ಫ್ಲಾಶ್​ಬ್ಯಾಕ್ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಸದ್ಯ ಅನು ವಧುವಿನಂತೆ ಅಲಂಕರಿಸಿಕೊಂಡಿರುವ ಫೋಟೋಗಳು ವೈರಲ್ ಆಗಿದ್ದು, ಇದೇ ಕ್ಷಣದಲ್ಲಿ ಎರಿಕಾ ಫರ್ನಾಂಡಿಸ್ ಎಂಟ್ರಿ ಬಗ್ಗೆಯೂ ಸುದ್ದಿಯಾಗುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಮರಾಠಿ ಧಾರವಾಹಿಯ ರಿಮೇಕ್ ಆಗಿರುವ ಜೊತೆಜೊತೆಯಲಿ ಕನ್ನಡದಲ್ಲಿ ಇಲ್ಲಿನ ವೀಕ್ಷಕರಿಗೆ ತಕ್ಕಂತೆ ರೂಪುಗೊಂಡು ಸಾಗುತ್ತಿರುವುದು ವಿಶೇಷ. ಒಟ್ಟಾರೆಯಾಗಿ ಧಾರಾವಾಹಿಯಲ್ಲಾಗುವ ಮುಂದಿನ ಬದಲಾವಣೆಗಳಿಗೆ ವೀಕ್ಷಕ ಮಹಾಪ್ರಭುಗಳು ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎನ್ನುವ ಸಂಗತಿಯೂ ಕುತೂಹಲಕಾರಿಯಾಗಿಯೇ ಉಳಿದಿದೆ.

ಇದನ್ನೂ ಓದಿ: ಗಟ್ಟಿಮೇಳ: ತಾಜ್ ಮಹಲ್ ಮುಂದೆ ಅಮೂಲ್ಯಾಗೆ ಪ್ರೇಮ ನಿವೇದನೆ ಮಾಡಲಿದ್ದಾರಾ ವೇದಾಂತ್?