ರಿಯಾಲಿಟಿ ಶೋ, ಸೀರಿಯಲ್​ ಶೂಟಿಂಗ್​ ಸ್ಥಗಿತ; ನಿಯಮ ಮೀರಿದ್ರೆ ಕ್ರಮ: ಟಿವಿ​ ಅಸೋಸಿಯೇಷನ್​ ಅಧ್ಯಕ್ಷ ಎಸ್​.ವಿ. ಶಿವಕುಮಾರ್

ಒಂದುವೇಳೆ ಯಾರಾದರೂ ಕದ್ದು ಮುಚ್ಚಿ ಚಿತ್ರೀಕರಣ ಮಾಡುತ್ತಿರುವುದು ತಿಳಿದುಬಂದಲ್ಲಿ, ಕೊವಿಡ್ ನಿಯಮ ಉಲ್ಲಂಘನೆ ಅಡಿಯಲ್ಲಿ, ಆ ಧಾರಾವಾಹಿಯ ತಂಡ ಮತ್ತು ವಾಹಿನಿಗಳು ಸರ್ಕಾರದ ಕೊವಿಡ್ ನಿಯಮಾವಳಿಗಳ ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಸ್​.ವಿ. ಶಿವಕುಮಾರ್​ ತಿಳಿಸಿದ್ದಾರೆ.

ರಿಯಾಲಿಟಿ ಶೋ, ಸೀರಿಯಲ್​ ಶೂಟಿಂಗ್​ ಸ್ಥಗಿತ; ನಿಯಮ ಮೀರಿದ್ರೆ ಕ್ರಮ: ಟಿವಿ​ ಅಸೋಸಿಯೇಷನ್​ ಅಧ್ಯಕ್ಷ ಎಸ್​.ವಿ. ಶಿವಕುಮಾರ್
ಸಾಂರ್ಭಿಕ ಚಿತ್ರ

ಕರ್ನಾಟಕದಲ್ಲಿ ಕೊರೊನಾ ಸೊಂಕಿನ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ರಾಜ್ಯ ಸರ್ಕಾರ 14 ದಿನಗಳ ಕಾಲ ಲಾಕ್​ಡೌನ್ ಘೋಷಣೆ ಮಾಡಿದೆ. ಮೇ 10ರಿಂದ ಲಾಕ್​ಡೌನ್​ ನಿಯಮ ಜಾರಿಗೆ ಬರಲಿದೆ. ಈ ಲಾಕ್​ಡೌನ್​ ಅವಧಿಯಲ್ಲಿ ಸೀರಿಯಲ್ ಹಾಗು ರಿಯಾಲಿಟಿ ಶೋ ಶೂಟಿಂಗ್​ ಮಾಡುವಂತಿಲ್ಲ ಎಂದು ಕರ್ನಾಟಕ ಟೆಲಿವಿಷನ್​ ಅಸೋಸಿಯೇಷನ್​ ಅಧ್ಯಕ್ಷ ಎಸ್​.ವಿ. ಶಿವಕುಮಾರ್​ ಪ್ರಕಟಣೆ ಹೊರಡಿಸಿದ್ದಾರೆ.

ಚಿತ್ರೀಕರಣಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಒಮ್ಮತದಿಂದ ತೀರ್ಮಾನಿಸಲಾಗಿದೆ. ಕರ್ನಾಟಕ ಸರ್ಕಾರವು ಇಡೀ ರಾಜ್ಯದಲ್ಲಿ ಸಂಪೂರ್ಣ ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಯಾವುದೇ ಮೂಲೆಯಲ್ಲಿ (ರೆಸಾರ್ಟ್, ಪ್ರವಾಸಿ ತಾಣ, ಬೆಂಗಳೂರಿನ ಹೊರವಲಯಗಳಲ್ಲಿ) ಧಾರಾವಾಹಿಗಳ ಚಿತ್ರೀಕರಣ ಮಾಡಬಾರದೆಂದು ತೀರ್ಮಾನಿಸಲಾಗಿದೆ. ಒಂದುವೇಳೆ ಯಾರಾದರು ಕದ್ದು ಮುಚ್ಚಿ ಚಿತ್ರೀಕರಣ ಮಾಡುತ್ತಿರುವುದು ತಿಳಿದು ಬಂದಲ್ಲಿ, ಕೋವಿಡ್ ನಿಯಮ ಉಲ್ಲಂಘನೆ ಅಡಿಯಲ್ಲಿ, ಆ ಧಾರಾವಾಹಿಯ ತಂಡ ಮತ್ತು ವಾಹಿನಿಗಳು ಸರ್ಕಾರದ ಕೊವಿಡ್ ನಿಯಮಾವಳಿಗಳ ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಸ್​.ವಿ. ಶಿವಕುಮಾರ್ ಸುತ್ತೋಲೆಯಲ್ಲಿ​ ತಿಳಿಸಿದ್ದಾರೆ.

ಮೇ 24ರಂದು ಅಂದಿನ ಸ್ಥಿತಿಗತಿಗಳನ್ನು ಅವಲೋಕಿಸಿ, ಚಿತ್ರೀಕರಣದ ಪುನರಾರಂಭದ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಕೂಡ ಅವರು ಸ್ಪಷ್ಟಪಡಿಸಿದ್ದಾರೆ. ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳು ಒಳಾಂಗಣ​ ಶೂಟಿಂಗ್​ ಮಾಡುತ್ತಿವೆ. ಇದಕ್ಕೆ ಏನಾದರೂ ನಿರ್ಬಂಧ ಇದೆಯೇ ಎನ್ನುವ ಪ್ರಶ್ನೆಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ಕೇಳಲಾಗಿತ್ತು. ಈ ಬಗ್ಗೆ ಉತ್ತರಿಸಿದ ಅವರು, ಈ ಬಾರಿ ಒಳಾಂಗಣ ಶೂಟಿಂಗ್​ಗೆ ಯಾವುದೇ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದಾದ ಬೆನ್ನಲ್ಲೇ ಎಸ್​.ವಿ. ಶಿವಕುಮಾರ್​  ಈ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: 

Ranjani Raghavan: ‘ಕನ್ನಡತಿ’ ಧಾರಾವಾಹಿ ನಟಿ ರಂಜನಿ ರಾಘವನ್​ ಫೇಸ್​ಬುಕ್​ ಹ್ಯಾಕ್​; ಯಾರ ಮೇಲಿದೆ ಅನುಮಾನ?