Sarkaru Vaari Paata Review: ಒಂದೊಳ್ಳೆಯ ಕಥೆಗೆ ಬೇಕಿತ್ತು ಇನ್ನಷ್ಟು ಒಳ್ಳೆಯ ಟ್ರೀಟ್​ಮೆಂಟ್

|

Updated on: May 12, 2022 | 3:31 PM

‘ಸರ್ಕಾರು ವಾರಿ ಪಾಟ’ ಮೂಲಕ ಮಹೇಶ್ ಬಾಬು 2 ವರ್ಷಗಳ ಬಳಿಕ ಮತ್ತೆ ಪ್ರೇಕ್ಷಕರ ಎದುರು ಬಂದಿದ್ದಾರೆ. ‘ಗೀತ ಗೋವಿಂದಂ’ ಖ್ಯಾತಿಯ ಪರಶುರಾಮ್ ನಿರ್ದೇಶನದ ಈ ಚಿತ್ರದ ವಿಮರ್ಶೆ ಟಿವಿ9 ಕನ್ನಡ ಡಿಜಿಟಲ್​ನಲ್ಲಿ.

Sarkaru Vaari Paata Review: ಒಂದೊಳ್ಳೆಯ ಕಥೆಗೆ ಬೇಕಿತ್ತು ಇನ್ನಷ್ಟು ಒಳ್ಳೆಯ ಟ್ರೀಟ್​ಮೆಂಟ್
ಮಹೇಶ್ ಬಾಬು
Follow us on

ಸಿನಿಮಾ: ಸರ್ಕಾರು ವಾರಿ ಪಾಟ

ಪಾತ್ರವರ್ಗ: ಮಹೇಶ್ ಬಾಬು, ಕೀರ್ತಿ ಸುರೇಶ್, ಕಿಶೋರ್, ಸುಬ್ಬರಾಜು, ಸಮುದ್ರಖಣಿ ಮೊದಲಾದವರು..

ನಿರ್ದೇಶನ: ಪರಶುರಾಮ್

ಇದನ್ನೂ ಓದಿ
ಹೇಗಿದೆ ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾದ ಮೊದಲಾರ್ಧ? ಇಲ್ಲಿದೆ ಮಾಹಿತಿ
ಬಾಲಿವುಡ್ ಬಗ್ಗೆ ಮಹೇಶ್ ಬಾಬು ಹೇಳಿಕೆ; ಹಿಂದಿಯ ಖ್ಯಾತ ನಿರ್ಮಾಪಕ ಕೊಟ್ರು ಉತ್ತರ
ಹೊಸ ಸಿನಿಮಾ ಬಗ್ಗೆ ಅಪ್​ಡೇಟ್ ನೀಡಿದ ಮಹೇಶ್ ಬಾಬು; ಶೂಟಿಂಗ್ ಯಾವಾಗ?
ಮಸ್ತ್​ ಮನರಂಜನೆ ನೀಡಲಿದ್ದಾರೆ ಮಹೇಶ್​ ಬಾಬು-ಕೀರ್ತಿ ಸುರೇಶ್​; ಈ ಫೋಟೋದಲ್ಲಿದೆ ಝಲಕ್​

ನಿರ್ಮಾಣ: ಮೈತ್ರಿ ಮೂವೀ ಮೇಕರ್ಸ್

ಸ್ಟಾರ್: 3/5

‘ಗೀತ ಗೋವಿಂದಂ’ ಫೇಮ್ ನಂತರದಲ್ಲಿ ನಿರ್ದೇಶಕ ಪರಶುರಾಮ್ ಅವರ ‘ಸರ್ಕಾರು ವಾರಿ ಪಾಟ’ ಚಿತ್ರಕ್ಕಾಗಿ ಮಹೇಶ್ ಬಾಬು ಜತೆ ಕೈ ಜೋಡಿಸಿದರು. ‘ಗೀತ ಗೋವಿಂದಂ’ ಸಿನಿಮಾದಲ್ಲಿ ಹಾಸ್ಯದ ರಸದೌತಣ ನೀಡಿದ್ದ ಅವರು ಇಲ್ಲಿಯೂ ಅದೇ ತಂತ್ರ ಬಳಕೆ ಮಾಡಿಕೊಂಡಿದ್ದಾರೆ. ಒಟ್ಟಾರೆ ಸಿನಿಮಾ ಹೇಗಿದೆ ಎಂಬ ಪ್ರಶ್ನೆಗೆ ಈ ವಿಮರ್ಶೆಯಲ್ಲಿದೆ ಉತ್ತರ.

ಕಥಾ ನಾಯಕ ಮಹೇಶ್​ (ಮಹೇಶ್ ಬಾಬು) ತಂದೆ-ತಾಯಿ ಚಿಕ್ಕ ವಯಸ್ಸಿನಲ್ಲೇ ಆತ್ಮಹತ್ಯೆಗೆ ಶರಣಾಗುತ್ತಾರೆ. ಆ ಬಳಿಕ ಹಾಸ್ಟೆಲ್ ಸೇರಿಕೊಳ್ಳುವ ಮಹೇಶ್ ವಿದೇಶಕ್ಕೆ ತೆರಳಿ ದೊಡ್ಡ ಫೈನಾನ್ಸರ್ ಆಗುತ್ತಾನೆ. ಆತನಿಗೆ ತಾನು ಕೊಟ್ಟ ಸಾಲದ ಮೇಲೆ ತೀವ್ರ ಮೋಹ. ಅದೆಷ್ಟರ ಮಟ್ಟಿಗೆ ಎಂದರೆ ಬಡ್ಡಿಗೆ ಬಿಟ್ಟ ಹಣ ಹಿಂದಿರುಗಿ ಬಂದಿಲ್ಲ ಎಂದರೆ ಮನೆಯವರೇ ತಿರುಗಿ ಬರಲಿಲ್ಲವೇನೋ ಎನ್ನುವ ಭಾವನೆ. ಹೀಗಾಗಿ, ಕೊಟ್ಟ ಹಣಕ್ಕಿಂತ ಹೆಚ್ಚು ಖರ್ಚು ಮಾಡಿಯಾದರೂ ಸರಿ ಆತ ಹಣ ವಸೂಲಿ ಮಾಡುತ್ತಾನೆ. ಈತನ ಬಾಳಲ್ಲ ಕಲಾವತಿಯ (ಕೀರ್ತಿ ಸುರೇಶ್) ಎಂಟ್ರಿ ಆಗುತ್ತದೆ. ಮೊದಲಾರ್ಧ ವಿದೇಶದಲ್ಲಿ ನಡೆಯುವ ಕಥೆ ದ್ವಿತೀಯಾರ್ಧ ಭಾರತಕ್ಕೆ ಬರುತ್ತದೆ. ಏಕೆ?ಏನು? ಎತ್ತ? ಅನ್ನೋ ಪ್ರಶ್ನೆಗೆ ಸಿನಿಮಾದಲ್ಲಿ ಉತ್ತರ ಹುಡುಕಬೇಕು.

‘ದೊಡ್ಡ ಉದ್ಯಮಿಗಳು ಸಾಲ ಪಡೆದು ಅದನ್ನು ಹಿಂದಿರುಗಿಸದಿದ್ದರೆ ಬ್ಯಾಂಕ್​ನವರು ಏನೂ ಮಾಡುವುದಿಲ್ಲ. ಆದರೆ, ರೈತರು, ಬಡವರು ಸಾಲ ಹಿಂದಿರುಗಿಸದಿದ್ದರೆ ಚಿತ್ರಹಿಂಸೆ ನೀಡುತ್ತಾರೆ’- ಹೀಗೊಂದು ಮಾತು ಚಾಲ್ತಿಯಲ್ಲಿದೆ. ಇದೇ ವಿಚಾರ ಇಡೀ ಸಿನಿಮಾದ ಜೀವಾಳ. ಇದನ್ನು ಹೇಳೋಕೇ ನಿರ್ದೇಶಕರು ಮೊದಲಾರ್ಧ ಬೇರೆಬೇರೆ ವಿಚಾರಗಳನ್ನು ಹೇಳಿ ಪೀಠಿಕೆ ಹಾಕಿದ್ದಾರೆ. ಅಸಲಿ ಕಥೆ ಶುರುವಾಗೋಕೆ ತುಂಬಾನೇ ಸಮಯ ಹಿಡಿಯುತ್ತದೆ. ಹೀಗಾಗಿ, ಇಷ್ಟೆಲ್ಲ ಪೀಠಿಕೆ ಹಾಕುವ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆ ಪ್ರೇಕ್ಷಕನಿಗೆ ಬರಬಹುದು. ಮೊದಲಾರ್ಧ ಪೂರ್ತಿ ಫನ್ನಿಯಾಗಿಯೇ ಸಾಗುತ್ತದೆ. ನೋಡುಗನಿಗೆ ನಗು ಉಕ್ಕಿಸುತ್ತದೆ. ಆದರೆ, ಮೊದಲಾರ್ಧದ ಕಥೆಗೂ ದ್ವಿತೀಯಾರ್ಧದ ಕಥೆಗೂ ಸಂಬಂಧವಿಲ್ಲ. ವಿದೇಶವೆಲ್ಲ ಸುತ್ತಾಡಿ ನಿರ್ದೇಶಕರು ಮುಖ್ಯ ಕಥೆಗೆ ಬಂದಿದ್ದಾರೆ. ದ್ವಿತೀಯಾರ್ಧ ಕೊಂಚ ನಿಧಾನ ಎಂದೂ ಪ್ರೇಕ್ಷಕನಿಗೆ ಅನಿಸುತ್ತದೆ.

ಮಹೇಶ್ ಬಾಬು ಅವರು ಭಿನ್ನ ಮ್ಯಾನರಿಸಂನಲ್ಲಿ ಮಿಂಚಿದ್ದಾರೆ. ಹಿಂದೆಂದೂ ಮಾಡಿರದ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇದು ಅವರ ಫ್ಯಾನ್ಸ್​ಗೆ ನಿಜಕ್ಕೂ ಹಬ್ಬವೇ ಸರಿ. ಮಾಸ್ ಆ್ಯಕ್ಷನ್ ಮೂಲಕ ಅವರು ಗಮನ ಸೆಳೆಯುತ್ತಾರೆ. ‘ಕಲಾವತಿ..’, ‘ಪೆನ್ನಿ..’ ಹಾಡುಗಳಲ್ಲಿ ಅವರ ಡ್ಯಾನ್ಸ್ ಇಷ್ಟವಾಗುತ್ತದೆ.

ದೇಶದ ಬಹುತೇಕ ಜನರು ಬ್ಯಾಂಕ್ ಖಾತೆ ಹೊಂದಿದ್ದಾರೆ. ಅನೇಕರು ಸಾಲ ಮಾಡಿ ಕಾರಣಾಂತರಗಳಿಂದ ಅದನ್ನು ಕಟ್ಟಲಾಗದೆ ಪರಿತಪಿಸುತ್ತಿದ್ದಾರೆ. ಹೀಗಾಗಿ, ನಿರ್ದೇಶಕ ಪರಶುರಾಮ್ ಹೇಳ ಹೊರಟಿರುವ ವಿಷಯ ನಿಜಕ್ಕೂ ಸಾಮಾನ್ಯರಿಗೆ ಕನೆಕ್ಟ್​ ಆಗುವಂತಹದ್ದು. ಆದರೆ, ಅದನ್ನು ಪ್ರೆಸೆಂಟ್ ಮಾಡುವ ವಿಚಾರದಲ್ಲಿ ಅವರು ಎಡವಿದ್ದಾರೆ. ಫಿಸಿಕ್ಸ್ ಹಾಗೂ ಲಾಜಿಕ್ ಇಲ್ಲದೆ ಅವರು ಹೇಳುವ ಕಥೆ ಅಷ್ಟಾಗಿ ಕನೆಕ್ಟ್​ ಆಗುವುದಿಲ್ಲ. ಸಿನಿಮಾ ಅದ್ದೂರಿಯಾಗಿಯೇ ಮೂಡಿ ಬಂದಿದೆ. ಆದರೆ, ಕಥೆಗೆ ಒಳ್ಳೆಯ ಟ್ರೀಟ್​ಮೆಂಟ್ ಸಿಕ್ಕಿಲ್ಲ.

ಸಿನಿಮಾದ ಆರಂಭದಲ್ಲಿ ಬರುವ ಫೈಟ್ ಸೀನ್ ಉತ್ತಮವಾಗಿದೆ. ಬೀಚ್​ ಪಕ್ಕ ನಡೆಯುವ ಫೈಟ್ ದೃಶ್ಯಗಳಲ್ಲಿ ಲಾಜಿಕ್ ಬಗ್ಗೆ ಗಮನ ಹರಿಸದಿದ್ದರೆ ಎಂಜಾಯ್ ಮಾಡಬಹುದು. ‘ಕಲಾವತಿ..’, ‘ಪೆನ್ನಿ..’ ಹಾಡುಗಳು ಇಷ್ಟವಾಗುತ್ತದೆ. ಎಸ್. ಥಮನ್​ ಅವರು ಸಂಗೀತ ಹಾಗೂ ಹಿನ್ನೆಲೆ ಸಂಗೀತದ ಮೂಲಕ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಕೀರ್ತಿ ಸುರೇಶ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಮುದ್ರಖಣಿ ವಿಲನ್ ಆಗಿ ಗಮನ ಸೆಳೆಯುತ್ತಾರೆ. ಕಿಶೋರ್, ಸುಬ್ಬರಾಜು ತೆರೆಮೇಲೆ ಇದ್ದಷ್ಟು ಹೊತ್ತು ನಗಿಸುತ್ತಾರೆ.

‘ಮಹರ್ಷಿ’ ಸಿನಿಮಾದಲ್ಲಿ ಮಹೇಶ್ ಬಾಬು ಸಿಟಿ ಮಂದಿ ಕೂಡ ಕೃಷಿ ಮಾಡಬೇಕು ಎನ್ನುವ ಸಂದೇಶ ನೀಡಿದ್ದರು. ಇದಕ್ಕಾಗಿ ಆ ಸಿನಿಮಾದಲ್ಲಿ ಸಾಕಷ್ಟು ಸರ್ಕಸ್ ನಡೆದಿತ್ತು. ಇಲ್ಲಿಯೂ ಅದೇ ರೀತಿಯ ಸರ್ಕಸ್​​ಗಳು ನಡೆದಿವೆ. ಆದರೆ, ಈ ಸರ್ಕಸ್​ನಿಂದ ಸರಿಯಾದ ಸಂದೇಶ ಹಾಗೂ ಮನರಂಜನೆ ಎರಡೂ ಸಿಕ್ಕಿಲ್ಲ ಅನ್ನೋದು ವಿಷಾದದ ಸಂಗತಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:26 am, Thu, 12 May 22