ಯಾರೋ ಮಾಡಿದ ತಪ್ಪಿಗೆ ವಿಜಯ್ ದೇವರಕೊಂಡಗೆ ತೊಂದರೆ; ಆರಂಭವಾಯ್ತು ಉಪವಾಸ ಸತ್ಯಾಗ್ರಹ
ಪುರಿ ಜಗನ್ನಾಥ್ ನಿರ್ದೇಶನದ, ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ನಟನೆಯ ‘ಲೈಗರ್’ ಸಿನಿಮಾ ಫ್ಲಾಪ್ ಆಯಿತು. ಈ ಚಿತ್ರ ಹೀನಾಯವಾಗಿ ಸೋಲು ಕಂಡಿತು.

ಸಿನಿಮಾ ಗೆದ್ದಾಗ ಎಲ್ಲರೂ ಹೀರೋನ ಹೊಗಳುತ್ತಾರೆ. ಹೀರೋಗೆ ಮೆಚ್ಚುಗೆಯ ಮಹಾಪೂರ ಬರುತ್ತದೆ. ನಿರ್ಮಾಪಕರಿಗೆ ಒಳ್ಳೆಯ ಲಾಭ ಆಗುತ್ತದೆ. ಸಿನಿಮಾ ಸೋತರೆ ಪರಿಸ್ಥಿತಿ ಹೀಗಿರುವುದಿಲ್ಲ. ಆ ಸಿನಿಮಾ ಆಯ್ಕೆ ಮಾಡಿಕೊಂಡ ನಟನಿಗೆ ಛೀಮಾರಿ ಹಾಕಲಾಗುತ್ತದೆ. ನಿರ್ದೇಶಕರನ್ನು ತೆಗಳಲಾಗುತ್ತದೆ. ನಿರ್ಮಾಪಕರು ನಷ್ಟ ಅನುಭವಿಸುತ್ತಾರೆ. ಇಷ್ಟಕ್ಕೇ ನಿಲ್ಲುವುದಿಲ್ಲ ಎಂಬುದಕ್ಕೆ ‘ಲೈಗರ್’ (Liger Movie) ಸೋಲು ಉತ್ತಮ ಉದಾಹರಣೆ. ಸಿನಿಮಾ ಸೋತಿದ್ದಕ್ಕೆ ವಿಜಯ್ ದೇವರಕೊಂಡ ಕೂಡ ತೊಂದರೆ ಅನುಭವಿಸುವಂತೆ ಆಗಿದೆ. ನಷ್ಟ ಭರಿಸುವಂತೆ ಹಂಚಿಕೆದಾರರು ವಿಜಯ್ ದೇವರಕೊಂಡ ಬಳಿಯೂ ಮನವಿ ಮಾಡಿದ್ದಾರೆ.
ಪುರಿ ಜಗನ್ನಾಥ್ ನಿರ್ದೇಶನದ, ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ನಟನೆಯ ‘ಲೈಗರ್’ ಸಿನಿಮಾ ಫ್ಲಾಪ್ ಆಯಿತು. ಈ ಚಿತ್ರ ಹೀನಾಯವಾಗಿ ಸೋಲು ಕಂಡಿತು. ಈ ಚಿತ್ರದಿಂದ ವಿಜಯ್ ದೇವರಕೊಂಡಗೆ ಹಿನ್ನಡೆ ಆಯಿತು. ಪುರಿ ಜಗನ್ನಾಥ್ ಜೊತೆ ಅವರು ಮಾಡಬೇಕಿದ್ದ ಮತ್ತೊಂದು ಸಿನಿಮಾ ಸೆಟ್ಟೇರಲಿಲ್ಲ. ಪುರಿ ಅವರ ಜೊತೆ ಕೆಲಸ ಮಾಡೋಕೆ ದೊಡ್ಡ ಹೀರೋಗಳು ಹಿಂದೇಟು ಹಾಕುತ್ತಿದ್ದಾರೆ.
‘ಲೈಗರ್’ನಿಂದ ನಷ್ಟ ಅನುಭವಿಸಿದ ಸಿನಿಮಾ ಹಂಚಿಕೆದಾರರು, ಪ್ರದರ್ಶಕರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಫಿಲ್ಮ್ನಗರದಲ್ಲಿರುವ ಫಿಲ್ಮ್ ಚೇಂಬರ್ ಎದುರು ಈ ಪ್ರತಿಭಟನೆ ಆರಂಭ ಆಗಿದೆ. ‘ಮುಖ್ಯ ಹಂಚಿಕೆದಾರ ವಾರಂಗಲ್ ಶ್ರೀನು ಅವರು ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ನಾವು ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಅವರನ್ನು ಕೇಳಿಕೊಳ್ಳುತ್ತಿದ್ದೇವೆ. ಈ ಸಮಸ್ಯೆ ಬಗೆಹರಿಸಿ’ ಎಂದು ಹಂಚಿಕೆದಾರರು ಹಾಗೂ ಪ್ರದರ್ಶಕರು ಕೋರಿದ್ದಾರೆ.
ಇದನ್ನೂ ಓದಿ: ‘ಲೈಗರ್’ ಸೋಲಿನ ಬಳಿಕ ಹೀನಾಯ ಪರಿಸ್ಥಿತಿ ತಲುಪಿದ ಪುರಿ ಜಗನ್ನಾಥ್; ಹುಡುಕಿದರೂ ಸಿಗ್ತಿಲ್ಲ ಹೀರೋಗಳು
ಸದ್ಯ 20ಕ್ಕೂ ಅಧಿಕ ಮಂದಿ ಪ್ರತಿಭಟನೆ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮತ್ತಷ್ಟು ಸಂಕಷ್ಟ ಉಂಟಾಗಬಹುದು. ವಿಜಯ್ ದೇವರಕೊಂಡ ವಿರುದ್ಧವೂ ಅನೇಕರು ಅಸಮಾಧಾನ ಹೊರಹಾಕಿದ್ದಾರೆ. ಅವರನ್ನು ನೋಡಿ ಸಿನಿಮಾ ಖರೀದಿಸಿರುವುದಾಗಿ ಕೆಲವರು ಹೇಳಿದ್ದಾರೆ. ಯಾರೋ ಮಾಡಿದ ತಪ್ಪಿಗೆ ವಿಜಯ್ ದೇವರಕೊಂಡ ಕೂಡ ಸಮಸ್ಯೆ ಅನುಭವಿಸುತ್ತಿದ್ದಾರೆ. ವಿಜಯ್ ದೇವರಕೊಂಡ ‘ಖುಷಿ’ ಮೊದಲಾದ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ