ದೊಡ್ಡ ಬಜೆಟ್ ಹಾಕಿದ ಸಿನಿಮಾಗಳೇ ದೊಡ್ಡ ಮೊತ್ತವನ್ನು ಗಳಿಸುತ್ತವೆ ಎಂಬುದು ಅಪ್ಪಟ ಸುಳ್ಳು. ಅತ್ಯಂತ ಕಡಿಮೆ ಬಜೆಟ್ನಲ್ಲಿ ನಿರ್ಮಾಣವಾದ ಸಿನಿಮಾಗಳು ಕೋಟ್ಯಂತರ ರೂಪಾಯಿ ಹಣ ಗಳಿಸಿದ ಉದಾಹರಣೆಗಳು ಇವೆ. ಆದರೆ ಇತ್ತೀಚೆಗೆ ಇಂಥಹಾ ಮಧ್ಯಮ ಬಜೆಟ್ನ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತಿವೆ. ಭಾರಿ ಬಜೆಟ್ನ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಠಕ್ಕರ್ ಕೊಡುತ್ತಿವೆ. ಕನ್ನಡದ ‘ಕಾಂತಾರ’ ಸಹ ಇದಕ್ಕೊಂದು ಒಳ್ಳೆಯ ಉದಾಹರಣೆ. ಮಲಯಾಳಂನ ‘ಮಂಜುಮೆಲ್ ಬಾಯ್ಸ್’, ‘ಆವೇಶಂ’ ಸಹ ಕಡಿಮೆ ಬಜೆಟ್ನಲ್ಲಿ ನಿರ್ಮಾಣಗೊಂಡು ನೂರಾರು ಕೋಟಿ ಕಲೆಕ್ಷನ್ ಮಾಡಿದವು. ಇದೇ ಸಾಲಿಗೆ ಸೇರುವ ತಮಿಳು ಸಿನಿಮಾ ಒಂದು ಈಗಾಗಲೇ ಭಾರತದಲ್ಲಿ ನೂರಾರು ಕೋಟಿ ಗಳಿಸಿದೆ. ಈಗ ಚೀನಾದಲ್ಲಿ 700 ಕೋಟಿ ಗಳಿಸುವ ಭರವಸೆ ಹುಟ್ಟುಹಾಕಿದೆ.
ವಿಜಯ್ ಸೇತುಪತಿ ನಟಿಸಿರುವ ‘ಮಹಾರಾಜ’ ತಮಿಳು ಸಿನಿಮಾ ಕೆಲ ತಿಂಗಳ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಸರಳವಾದ ಕತೆ, ಭಿನ್ನ ನಿರೂಪಣೆ ಹೊಂದಿದ್ದ ಈ ಸಿನಿಮಾ ಪ್ರೇಕ್ಷಕರನ್ನು ಬಹುವಾಗಿ ಸೆಳೆಯಿತು. 25 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ಚಿತ್ರಮಂದಿರದಲ್ಲಿ ನೂರು ಕೋಟಿಗೂ ಹೆಚ್ಚು ಹಣ ಗಳಿಸಿತ್ತು. ತಮಿಳಿನಲ್ಲಿ ಮಾತ್ರವೇ ಬಿಡುಗಡೆ ಆಗಿದ್ದ ಈ ಸಿನಿಮಾವನ್ನು ಆ ನಂತರ ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಯ್ತು. ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕವಂತೂ ಸಿನಿಮಾದ ಜನಪ್ರಿಯ ಇನ್ನೂ ದೊಡ್ಡ ಮಟ್ಟದಲ್ಲಿ ಹೆಚ್ಚಿತು.
ಇದೀಗ ಈ ಸಿನಿಮಾ ಚೀನಾದಲ್ಲಿ ಬಿಡುಗಡೆ ಆಗಲಿದ್ದು, ಚೀನಾದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಚೀನಾದ ಜನರಿಗೆ ಇಂಥಹಾ ಡ್ರಾಮಾ, ಸೆಂಟಿಮೆಂಟ್ ಕತೆಗಳು ಮೊದಲಿನಿಂದಲೂ ಬಹಳ ಇಷ್ಟವಾಗುತ್ತವೆ. ಈ ಸಿನಿಮಾವನ್ನು ಚೀನಾದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಈ ಸಿನಿಮಾ ಚೀನಾ ಮಾರುಕಟ್ಟೆಯಲ್ಲಿ ಸುಮಾರು 700 ಕೋಟಿ ರೂಪಾಯಿ ಕಮಾಯಿ ಮಾಡಲಿದೆ ಎಂಬ ಲೆಕ್ಕಾಚಾರ ಇದೆ.
ಇದನ್ನೂ ಓದಿ:‘ಡಾಕು ಮಹಾರಾಜ್’ ಆದ ಬಾಲಯ್ಯ; ಈಗ ಟೀಸರ್, ಸಂಕ್ರಾಂತಿಗೆ ಮಾಸ್ ಮಸಾಲ
ಚೀನಾದ ಯೀ ಶೀ ಫಿಲಮ್ಸ್ ‘ಮಹಾರಾಜ’ ಸಿನಿಮಾವನ್ನು ಚೀನಾದಲ್ಲಿ ಬಿಡುಗಡೆ ಮಾಡಲಿದ್ದಾರೆ. ಒಟ್ಟಿಗೆ ಬರೋಬ್ಬರಿ 40 ಸಾವಿರ ಸ್ಕ್ರೀನ್ಗಳಲ್ಲಿ ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ. ಸ್ಥಳೀಯ ಮ್ಯಾಂಡರೀನ್ ಭಾಷೆಗೆ ಸಿನಿಮಾವನ್ನು ಡಬ್ ಮಾಡಲಾಗಿದ್ದು, ಯೀ ಶೀ ಫಿಲಮ್ಸ್ ವಿತರಣಾ ಸಂಸ್ಥೆ ‘ಮಹಾರಾಜ’ ಸಿನಿಮಾದ ಕಂಟೆಂಟ್ ಬಗ್ಗೆ ಬಹಳ ನಂಬಿಕೆ ಇರಿಸಿಕೊಂಡಿದೆ. ಭಾರತದ ಇನ್ಯಾವುದೇ ಸಿನಿಮಾ ಚೀನಾದಲ್ಲಿ ಒಟ್ಟಿಗೆ 40 ಸಾವಿರ ಸ್ಕ್ರೀನ್ಗಳಲ್ಲಿ ಬಿಡುಗಡೆ ಆಗಿಲ್ಲವಂತೆ. ಆ ಮೂಲಕ ‘ಮಹಾರಾಜ’ ಸಿನಿಮಾ ದಾಖಲೆ ಬರೆಯುತ್ತಿದೆ.
40 ಸಾವಿರ ಸ್ಕ್ರೀನ್ಗಳಲ್ಲಿ ಒಟ್ಟಿಗೆ ಸಿನಿಮಾ ಬಿಡುಗಡೆ ಆಗಲಿದ್ದು, ಪ್ರತಿ ಸ್ಕ್ರೀನ್ನಿಂದ ಸರಾಸರಿ 2000 ಡಾಲರ್ ಗಳಿಕೆ ಕಾಣುವ ನಿರೀಕ್ಷೆಯನ್ನು ಸ್ವತಃ ಯೀ ಶೀ ಫಿಲಮ್ಸ್ ವಿತರಣಾ ಸಂಸ್ಥೆ ವ್ಯಕ್ತಪಡಿಸಿದೆ. ಅಲ್ಲಿಗೆ ಸಿನಿಮಾದ ಕಲೆಕ್ಷನ್ 80 ಮಿಲಿಯನ್ ಡಾಲರ್ ಆಗಲಿದ್ದು, ಭಾರತದ ರೂಪಾಯಿ ಲೆಕ್ಕದಲ್ಲಿ ಇದು 700 ಕೋಟಿಗೂ ಹೆಚ್ಚಾಗಲಿದೆ.
‘ಮಹಾರಾಜ’ ಸಿನಿಮಾವನ್ನು ನಿತಿಲನ್ ಸಾಮಿನಾಥನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಸುಧನ್ ಸುಂದರನ್ ಮತ್ತು ಜಗದೀಶ್ ಪಳನಿಸ್ವಾಮಿ ನಿರ್ಮಾಣ ಮಾಡಿದ್ದಾರೆ. ವಿಜಯ್ ಸೇತುಪತಿ ಸಹ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ ಎನ್ನಲಾಗಿದೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ವಿಜಯ್ ಸೇತುಪತಿ, ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, ಮಮತಾ ಮೋಹನ್ದಾಸ್, ನಟರಾಜನ್ ಸುಬ್ರಹ್ಮಣ್ಯನ್ ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಕನ್ನಡದ ಅಜನೀಶ್ ಲೋಕನಾಥ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ