ಕೊಪ್ಪಳದಲ್ಲಿ ಇಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ಎಸ್ ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಸರಿಯಾದ ತನಿಖೆ ನಡೆಸದೆ ಜನರ ದಿಕ್ಕು ತಪ್ಪಿಸುವಂಥ ಕೆಲಸ ಮಾಡುತ್ತಿದೆ, ಯಾವ್ಯಾವ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೆ ನಡೆದಿರುವುದು ಗೊತ್ತಾಗಿದೆಯೋ ಆ ಠಾಣೆಗಳ ಇನ್ಸ್ಪೆಕ್ಟರ್ಗಳನ್ನು ಸಹ ಬಂಧಿಸಬೇಕೆಂದರು.
‘‘ಒಂದಷ್ಟು ಸಿನಿಮಾ ನಟಿಯರನ್ನು ವಶಕ್ಕೆ ಪಡೆದು ಏನೆಲ್ಲಾ ಚರ್ಚೆಗಳು ನಡೆಯುತ್ತಿವೆ. ಸಚಿವ ಸಿ.ಟಿ. ರವಿ ಯಾವುದೇ ಒತ್ತಡಕ್ಕೆ ಮಣಿಯಲ್ಲವೆಂದು ದೊಡ್ಡದಾಗಿ ಹೇಳಿಕೆ ನೀಡುತ್ತಾರೆ. ಇಷ್ಟಕ್ಕೂ ಅವರ ಮೆಲೆ ಯಾರು ಒತ್ತಡ ಹೇರುತ್ತಿದ್ದಾರೆ ಅಂತಾದರೂ ಹೇಳಲಿ. ನಾಯಕ ಮತ್ತು ಖಳನಾಯಕ ಎರಡೂ ಪಾತ್ರಗಳನ್ನೂ ರವಿ ಅವರೇ ನಿರ್ವಹಿಸುತ್ತಿದ್ದಾರೆ. ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಬೇರೆಯವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ,‘‘ ಎಂದು ಚಂದ್ರಶೇಖರ್ ಹೇಳಿದರು.
ಡ್ರಗ್ಸ್ ಮಾಫಿಯಾ ಪತ್ತೆ ಹಚ್ಚುವುದು ದೊಡ್ಡ ಕೆಲಸವಲ್ಲ, ಒಂದು ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ಗೆ ಅವನ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳ ಬಗ್ಗೆ ಗೊತ್ತಿರುತ್ತದೆ. ಅವನ ಪರಿಜ್ಞಾನಕ್ಕೆ ಮೀರಿದ ಯಾವುದೇ ಅಕ್ರಮ ದಂಧೆ ಅಲ್ಲಿ ನಡೆಯುವುದಿಲ್ಲ. ಅವನನ್ನೇ ಬಂಧಿಸಿ ಅಪರಾಧಿಗಳಿಂದ ಮಾಹಿತಿ ಕಕ್ಕಿಸುವ ರೀತಿಯಲ್ಲೇ ‘ವಿಚಾರಣೆ’ ನಡೆಸಿದರೆ ವಿಷಯವೆಲ್ಲ ಹೊರಬೀಳುತ್ತದೆ. ಆಯಾ ಠಾಣೆಯ ಇನ್ಸ್ಪೆಕ್ಟರ್ ಹೆಸರನ್ನು ಎಫ್ಐಆರ್ನಲ್ಲಿ ಸೇರಿಸಿ ಅವನ ಮೇಲೆ ಒಬ್ಬ ಅಧಿಕಾರಿಯನ್ನು ನೇಮಕ ಮಾಡಿ ಬಾಯಿ ಬಿಡಿಸುವ ಕೆಲಸ ಈ ಸರ್ಕಾರ ಯಾಕೆ ಮಾಡಬಾರದು? ಎಂದು ಚಂದ್ರಶೇಖರ್ ಪ್ರಶ್ನಿಸಿದರು.
‘‘ಸರ್ಕಾರ ನಡೆಸುತ್ತಿರುವವರಿಗೆ ನೈತಿಕತೆ ಇಲ್ಲ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದ್ದರೆ, ಸರ್ಕಾರ ನಡೆಸುತ್ತಿರುವವರಲ್ಲಿ ವೈಚಾರಿಕತೆಯ ದಿವಾಳಿತನ. ಆದರೆ ರಾಜ್ಯದ ಜನರ ಅದರಲ್ಲೂ ವಿಶೇಷವಾಗಿ ಯುವಜನಾಂಗದ ಹಿತದೃಷ್ಟಿಯಿಂದ ಮಾದಕ ವಸ್ತುಗಳ ಮಾರಾಟ ಜಾಲವನ್ನು ಹತ್ತಿಕ್ಕಲೇಬೇಕು,’’ ಎಂದು ಚಂದ್ರಶೇಖರ್ ಆಗ್ರಹಿಸಿದರು.