ಬೆಳ್ಳುಳ್ಳಿ ದರ ಕುಸಿತಕ್ಕೆ ಅನ್ನದಾತ ಕಂಗಾಲು: ದಲ್ಲಾಳಿಗಳ ಮಹಾಮೋಸಕ್ಕೆ ರೈತರ ಸಿಟ್ಟು

ಗದಗ: ಅನ್ನದಾತ ದೇಶದ ಬೆನ್ನೆಲುಬು. ಭೂಮಿಯಲ್ಲಿ ಬೆವರು ಹರಿಸಿ.. ಬೆಳೆಯೋ ಬೆಳೆಯನ್ನ ಮಗುವಂತೆ ಸಾಕಿ ಮಾರುಕಟ್ಟೆಗೆ ತರೋ ಮಹಾಸೇನಾನಿಗಳು ಇವರು. ಆದ್ರೆ, ಅದೆಷ್ಟು ಕಷ್ಟ ಬಿದ್ರೂ ರೈತರಿಗೆ ಸಂಕಷ್ಟ ತಪ್ತಿಲ್ಲ. ಇದಕ್ಕೆ ಸಾಕ್ಷಿ ಗದಗ ಎಪಿಎಂಸಿ ಆವರಣದಲ್ಲಿ ಅನ್ನದಾತರಿಗೆ ನಡೆದ ಮಹಾಮೋಸ. ಬೆಳ್ಳುಳ್ಳಿ ಬೆಳೆಗೆ ಸೂಕ್ತ ಬೆಲೆ ಸಿಗದೆ ಪಡ್ತಿರೋ ಪರದಾಟ.

ಬೆಳ್ಳುಳ್ಳಿ ದರ ದಿಢೀರ್ ಕುಸಿತ, ಸಿಡಿದೆದ್ದ ಅನ್ನದಾತರು!
ಯೆಸ್.. ಗದಗ ಜಿಲ್ಲೆಯಲ್ಲಿ ಅನ್ನದಾತರು ರೊಚ್ಚಿಗೆದ್ದಿದ್ರು. ಪ್ರಮುಖ ವಾಣಿಜ್ಯ ಬೆಳೆಯಾದ ಬೆಳ್ಳುಳ್ಳಿ ದರ ದಿಢೀರ್ ಕುಸಿತದಿಂದಾಗಿ ಎಲ್ಲರೂ ಕಂಗಾಲಾಗಿದ್ದಾರೆ. ಸತತ ಬರಗಾಲದ ಸುಳಿಗೆ ಸಿಲುಕಿದ್ರಿಂದ ಬೆಳ್ಳುಳ್ಳಿ ಬೆಳೆಗೆ ಯೋಗ್ಯ ಬೆಲೆ ಸಿಗ್ತಿಲ್ಲ. ಕಳೆದ ಶನಿವಾರ ಕ್ವಿಂಟಾಲ್​​ಗೆ 21 ಸಾವಿರ ರೂಪಾಯಿ ಇದ್ದ ಬೆಳ್ಳುಳ್ಳಿ ರೇಟ್ ದಿಢೀರ್ 9 ಸಾವಿರಕ್ಕೆ ಕುಸಿದಿದೆ. ಇದಕ್ಕೆ ದಲ್ಲಾಳಿಗಳ ಮೋಸವೇ ಕಾರಣ ಅಂತ ರೈತರು ಆಕ್ರೋಶ ಹೊರಹಾಕಿದ್ರು. ಅಲ್ಲದೇ, ಎಪಿಎಂಸಿ ಮಾರುಕಟ್ಟೆಯಲ್ಲಿ ಇಟ್ಟಿರೋ ಬೆಳ್ಳುಳ್ಳಿಯನ್ನ ಕಳವು ಮಾಡಿ ತೂಕದಲ್ಲಿ ವಂಚಿಸ್ತಿದ್ದಾರೆ ಅಂತಾ ಆರೋಪಿಸಿದ್ರು. ಬೆಳ್ಳುಳ್ಳಿ ಖರೀದಿದಾರರ ವಿರುದ್ಧ ಆರೋಪದ ಮಳೆ ಸುರಿಸಿದ್ರು.

ರೈತರ ಜೀವ ಹಿಂಡುತ್ತಿರುವ ದಲ್ಲಾಳಿಗಳು:
ಇನ್ನು, ಗದಗ ವರ್ತಕರಿಂದ ಪ್ರತೀ ಕ್ವಿಂಟಾಲ್​ ಬೆಳ್ಳುಳ್ಳಿ ಬೀಜವನ್ನ 21 ಸಾವಿರ ರೂಪಾಯಿಯಂತೆ ರೈತರು ಪರ್ಚೇಸ್ ಮಾಡಿದ್ದಾರೆ. ಆದ್ರೀಗ ಅದೇ ವರ್ತಕರು ಪ್ರತೀ ಕ್ವಿಂಟಾಲ್​ ಬೆಳ್ಳುಳ್ಳಿಯನ್ನ 9 ಸಾವಿರ ರೂಪಾಯಿಗೆ ಖರೀದಿಸೋಕೆ ಸಜ್ಜಾಗಿದ್ದಾರೆ. ಇದ್ರಿಂದ ರೈತರಿಗೆ ಸಾಕಷ್ಟು ನಷ್ಟವಾಗ್ತಿದೆ. ಅದ್ರಲ್ಲೂ 60 ದಿನಗಳೊಳಗಾಗಿ ಮಾರದಿದ್ದರೆ ಗುಣಮಟ್ಟ ಕಳೆದ್ಕೊಂಡು ಯಾರೂ ಕೇಳೋರೂ ಇರಲ್ಲ. ಇದನ್ನೆಲ್ಲಾ ಬಂಡವಾಳ ಮಾಡ್ಕೊಂಡಿರೋ ದಲ್ಲಾಳಿಗಳು ರೈತರ ಜೀವ ಹಿಂಡುತ್ತಿದ್ದಾರೆ. ನಮ್ಮ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗ್ಬೇಕು ಅಂತಾ ಆಗ್ರಹಿಸಿದ್ದಾರೆ.

ಒಟ್ನಲ್ಲಿ ಮಳೆ.. ಗಾಳಿ.. ಚಳಿ ಲೆಕ್ಕಿಸದೆ ರೈತ ಕೃಷಿ ಭೂಮಿಯಲ್ಲಿ ರಕ್ತ ಹರಿಸಿದ್ದಾನೆ. ಆದ್ರೀಗ ಕಷ್ಟಪಟ್ಟು ದುಡಿದಿರೋ ಬೆಳೆಗೆ ಲಾಭವೇಕೆ.. ಅಸಲು ಸಿಗದೆ ಕಂಗಾಲಾಗಿದ್ದಾರೆ. ಇನ್ನಾದ್ರೂ ದಲ್ಲಾಳಿಗಳ ಆಟಕ್ಕೆ ಬ್ರೇಕ್​ ಬೀಳುತ್ತಾ ಕಾದು ನೋಡ್ಬೇಕು.


Related Posts :

Category:

error: Content is protected !!