ತಂದೆಯೇ ಸುಪಾರಿ ನೀಡಿ ಮಗನ ಹತ್ಯೆ ಮಾಡಿಸಿದ್ದ! ಯಾಕೆ? ಹಂತಕರಿಗೆ ಕೊಟ್ಟ ಅಡ್ವಾನ್ಸ್​ ಎಷ್ಟು?

ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಹೊಸೂರು ಬಳಿ ಯುವಕನ ಗುಂಡಿಟ್ಟು  ಸಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 15 ದಿನಗಳ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಗಸ್ಟ್ 27 ರಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಹೊಸೂರು ಕೆರೆ ಏರಿ ಮೇಲೆ ಪುನೀತ್‌ ಎಂಬ ಯುವಕನನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಆರೋಪಿಗಳು ಘಟನೆಯ ನಂತರ ತಲೆಮರಿಸಿಕೊಂಡಿದ್ದರು.

ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಘಟನೆಯ ಸಂಬಂಧ ಆರೋಪಿಗಳಾದ ಪುನೀತ್ ತಂದೆ ಹೇಮಂತ್, ಸಹೋದರ ಪ್ರಶಾಂತ್ ಸೇರಿ ಐವರನ್ನು ಬಂಧಿಸಿದ್ದಾರೆ.

ಆಘಾತಕಾರಿ ಸಂಗತಿಯೆಂದರೆ ಮಗನ ಕೊಲ್ಲಲು ತಂದೆ ಹೇಮಂತ್ ಎರಡು ಲಕ್ಷಕ್ಕೆ ಸುಫಾರಿ‌ ಕೊಟ್ಟಿದ್ದ. ಶ್ರವಣಬೆಳಗೊಳ ಹೋಬಳಿಯ ಸುನಿಲ್(27) ಹಾಗು ನಂದೀಶ್(28) ರಿಗೆ ಎರಡು ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ ಹೇಮಂತ್ ಮುಂಗಡವಾಗಿ 5 ಸಾವಿರ ಹಣ ನೀಡಿದ್ದ.

ಹಣ ಪಡೆದು ಅಗಸ್ಟ್ 27 ರಂದು ಪುನೀತ್​ನನ್ನು ಹತ್ಯೆ ಮಾಡಿದ ಆರೋಪಿಗಳು ತಲೆಮರಿಸಿಕೊಂಡಿದ್ದರು. ಘಟನೆಯಲ್ಲಿ ಬಂದೂಕು ನೀಡಿದ ಮಂಡ್ಯ ಮೂಲದ ನಾಗರಾಜ್ (65) ನನ್ನು ಸಹ ಬಂಧಿಸಿದ್ದು, ಬಂಧಿತರಿಂದ ಆರು ಬಂದೂಕು, 1.88 ಲಕ್ಷ ಹಣ ಹಾಗು ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

Related Tags:

Related Posts :

Category: