ಒಂದು ದಿನದ ಪಂದ್ಯಗಳ ಆವೃತ್ತಿಯಲ್ಲಿ ಕೊಹ್ಲಿ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್: ಆರನ್ ಫಿಂಚ್

ಆರ್​ಸಿಬಿಗೆ ಐಪಿಎಲ್​ನಲ್ಲಿ ಆಡುವ ಆಸ್ಟ್ರೇಲಿಯಾದ ಸೀಮಿತ ಓವರ್​ಗಳ ನಾಯಕ ಆರನ್ ಫಿಂಚ್ ವಿರಾಟ್ ಕೊಹ್ಲಿಯನ್ನು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಸರಣಿಗೆ ಮೊದಲು ಆಸ್ಟ್ರೇಲಿಯನ್ನರು ಎದುರಾಳಿಗಳನ್ನು ಮಾನಸಿಕವಾಗಿ ದುರ್ಬಲಗೊಳಿಸಲು ಪ್ರಯತ್ನಿಸುತ್ತಾರೆ, ಫಿಂಚ್ ಹೊಸ ಪರಂಪರಗೆ ನಾಂದಿ ಹಾಡಿರುವಂತಿದೆ.

  • Arun Belly
  • Published On - 16:22 PM, 26 Nov 2020

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳ ಸಂಖ್ಯೆ ಬೆಳೆಯುತ್ತಲೇ ಇದೆ. ಅವರ ಅಭಿಮಾನಿಗಳ ಕ್ಲಬ್​ಗೆ ಇತ್ತೀಚಿನ ಸೇರ್ಪಡೆಯೆಂದರೆ ಆಸ್ಟ್ರೇಲಿಯಾದ ಸೀಮಿತ ಓವರ್ ಪಂದ್ಯಗಳ ನಾಯಕ ಆರನ್ ಫಿಂಚ್. ಈ ಆಸ್ಸೀ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡುವುದರಿಂದ ಕೊಹ್ಲಿಯನ್ನು ಹತ್ತಿರದಿಂದ ಬಲ್ಲರು. ಫಿಂಚ್ ಗುರುವಾರದಂದು ಸುದ್ದಿಸಂಸ್ಥೆಯೊಂದರ ಜೊತೆ ಮಾತಾಡುವಾಗ, ಒಂದು ದಿನದ ಪಂದ್ಯಗಳಲ್ಲಿ ಕೊಹ್ಲಿ ವಿಶ್ವದ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್ ಎಂದು ಹೇಳಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಬಹು-ನಿರೀಕ್ಷಿತ ಸರಣಿಯ ಮೊದಲ ಪಂದ್ಯ (ಒಂದು ದಿನದ ಅಂತರರಾಷ್ಟ್ರೀಯ) ನಾಳೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. 2018-19ರ ಸರಣಿಯಲ್ಲಿ ಒಂದು ದಿನದ ಪಂದ್ಯಗಳ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದಿದ್ದರಿಂದ ಫಿಂಚ್ ಪಡೆ ಮುಯ್ಯಿ ತೀರಿಸಿಕೊಳ್ಳಲು ತವಕಿಸುತ್ತಿದೆ. ಆ ಸರಣಿಯಲ್ಲಿ ಭಾರತ ಟಿ20ಐ ಪಂದ್ಯಗಳನ್ನು 1-1ರಿಂದ ಸಮ ಮಾಡಿಕೊಂಡರೆ ಟೆಸ್ಟ್ ಸರಣಿಯನ್ನು 2-1 ರಿಂದ ಗೆದ್ದಿತ್ತು. ಈ ಹಿನ್ನೆಲೆಯಲ್ಲಿ ಅತಿಥೇಯ ತಂಡವು ತನ್ನೆಲ್ಲ ಬಲವನ್ನು ಬಳಸಿ ಭಾರತವನ್ನು ಮಣಿಸಲು ಪ್ರಯತ್ನಿಸುವುದು ನಿಶ್ಚಿತ.

ಸರಣಿ ಆರಂಭಗೊಳ್ಳುವ ಮೊದಲು ಸಾಮಾನ್ಯವಾಗಿ ಆಸ್ಟ್ರೇಲಿಯನ್ನರು ಎದುರಾಳಿಗಳನ್ನು ಮಾನಸಿಕವಾಗಿ ಹಣಿಯಲು ನೋಡುತ್ತಾರೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಆಸ್ಸೀ ನಾಯಕ ತನ್ನ ಎದುರಾಳಿ ನಾಯಕನ್ನು ಮನಸೋ ಇಚ್ಛೆ ಶ್ಲಾಘಿಸುತ್ತಿದ್ದಾರೆ.

‘‘ನನ್ನ ವೈಯಕ್ತಿಕ ಅನಿಸಿಕೆಯನ್ನು ಹೇಳುತ್ತಿದ್ದೇನೆ. ಒಂದು ದಿನದ ಪಂದ್ಯಗಳಲ್ಲಿ ವಿರಾಟ್​ ಕೊಹ್ಲಿ ಕೇವಲ ಪ್ರಸಕ್ತ ಆಟಗಾರರಲ್ಲಿ ಮಾತ್ರವಲ್ಲ, ಸರ್ವಕಾಲಿಕ ಶ್ರೇಷ್ಠ ಆಟಗಾರ. ಒಂದು ದಿನದ ಪಂದ್ಯಗಳಲ್ಲಿ ಅವರ ದಾಖಲೆಯನ್ನೊಮ್ಮೆ ನೋಡಿ. ಅಂಕಿ-ಅಂಶಗಳು ಸುಳ್ಳಾಗಲಾರವು. ಅವರನ್ನು ನಿಯಂತ್ರಿಸಲು ಪ್ರಯತ್ನಿಸಿದರೆ ಅವರ ವಿರುದ್ಧ ನಾವು ಮಾಡಿಕೊಂಡಿರುವ ಯೋಜನೆಯಲ್ಲಿನ ಕೆಲ ಅಂಶಗಳನ್ನು ಮರೆತುಬಿಡುವ ಸಾಧ್ಯತೆಯಿರುತ್ತದೆ. ಹಾಗಾಗಿ ನಾವು ಕೊಹ್ಲಿಯನ್ನು ನಿಯಂತ್ರಿಸಲು ಪ್ರಯತ್ನಿಸದೆ, ಔಟ್​ ಮಾಡುವುದೆಡೆ ಮಾತ್ರ ಗಮನ ಕೇಂದ್ರೀಕರಿಸುತ್ತೇವೆ. ನಾವು ರೂಪಿಸಿಕೊಂಡಿರುವ ಯೋಜನೆಗೆ ಅಂಟಿಕೊಂಡು ಅದಕ್ಕೆ ಬದ್ಧರಾಗಿರುತ್ತೇವೆ,’’ ಅಂತ ಫಿಂಚ್ ಹೇಳಿದ್ದಾರೆ.

ಆಸ್ಟ್ರೇಲಿಯ ಟೀಮಿನಲ್ಲಿ ಮೂವರು ಕ್ವಾಲಿಟಿ ಆಲ್​ರೌಂಡರ್​ಗಳಿರುವುದು ಹೆಚ್ಚು ಪ್ರಯೋಜನವಾಗಲಿದೆಯೆಂದು ಫಿಂಚ್ ಹೇಳಿದ್ದಾರೆ. ಮಿಚೆಲ್ ಮಾರ್ಶ್, ಮಾರ್ಕಸ್ ಸ್ಟಾಯ್ನಿಸ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್-ಈ ಮೂವರನ್ನೂ ಆಸ್ಟ್ರೇಲಿಯ ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಆಡಿಸುವ ಸಾಧ್ಯತೆಯಿದೆ.

‘‘ಮ್ಯಾಕ್ಸಿಯ (ಮ್ಯಾಕ್ಸ್​ವೆಲ್) ಬೌಲಿಂಗ್ ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಿದೆ. ಅವರ ಬ್ಯಾಟಿಂಗ್ ಬಗ್ಗೆ ಯಾವುದೇ ತಕರಾರಿಲ್ಲ. ಸ್ಟಾಯ್ನಿಸ್ ಈಗ ಪರಿಪೂರ್ಣ ಆಲ್​ರೌಂಡರ್ ಆಗಿ ರೂಪುಗೊಂಡಿದ್ದಾರೆ. ಇನ್ನಿಂಗ್ಸ್​ನ ಕೊನೆ ಓವರ್​ಗಳಲ್ಲಿ (ಡೆತ್ ಓವರ್ಸ್) ಅವರು ಅದ್ಭುತವಾಗಿ ಬೌಲ್ ಮಾಡುತ್ತಿದ್ದಾರೆ. ಮಿಚ್ (ಮಿಚೆಲ್ ಮಾರ್ಶ್) ಬಹಳ ಉಪಯುಕ್ತ ಆಟಗಾರನೆನ್ನುವುದು ಸಾಬೀತಾಗಿರುವ ಅಂಶ. ಟೀಮಿನಲ್ಲಿ ಈ ಮೂವರ ಉಪಸ್ಥಿತಿ ಹೆಚ್ಚಿನ ಆಯ್ಕೆಗಳನ್ನು ನಮಗೆ ಒದಗಿಸುತ್ತದೆ. ಐದನೇ ಬೌಲರ್​ನ 10 ಓವರ್​ಗಳನ್ನು ನಾವು ಮೂವರಲ್ಲಿ ಹಂಚಬಹುದು. ಅದು ಒಬ್ಬ ಹೆಚ್ಚುವರಿ ಬ್ಯಾಟ್ಸ್​ಮನ್ ಇಲ್ಲವೇ ಹೆಚ್ಚ್ಚುವರಿ ಬೌಲರ್​ನನ್ನು ಆಡಿಸುವ ಅವಕಾಶ ನಮಗೆ ಒದಗಿಸುತ್ತದೆ,’’ ಎಂದು ಫಿಂಚ್ ಹೇಳಿದ್ದಾರೆ.

ಮಿಚೆಲ್ ಮಾರ್ಶ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್

ವಿರಾಟ್ ಕೊಹ್ಲಿ