ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ: ಫೆ. 19ರಂದು ಟ್ರಸ್ಟ್​ನ ಮೊದಲ ಸಭೆ

ದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸೋದು ಕೋಟ್ಯಂತರ ಹಿಂದೂಗಳ ಕನಸು. ಸುಪ್ರೀಂ ನೀಡಿದ್ದ ಐತಿಹಾಸಿಕ ತೀರ್ಪು ಈ ಕನಸು ನನಸು ಮಾಡುವ ಮುನ್ಸೂಚನೆ ನೀಡಿತ್ತು. ಸುಪ್ರೀಂಕೋರ್ಟ್​ನ ನಿರ್ದೇಶನದಂತೆ ಈಗಾಗಲೇ ಕೇಂದ್ರ ಸರ್ಕಾರ ಕೂಡ ಟ್ರಸ್ಟ್ ರಚಿಸಿದ್ದು, ರಾಮಮಂದಿರ ಟ್ರಸ್ಟ್ ಸದಸ್ಯರ ಮೊದಲ ಸಭೆಗೆ ಡೇಟ್ ಫಿಕ್ಸ್ ಆಗಿದೆ.

ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಈಗಾಗಲೇ ಪ್ರಧಾನಿ ಮೋದಿ ಅವರು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಾಮಮಂದಿರ ನಿರ್ಮಾಣಕ್ಕೆ ಟ್ರಸ್ಟ್ ಕೂಡ ರಚಿಸಿದ್ದಾರೆ. ಈ ನಡುವೆ ಮಂದಿರ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನ ಸಜ್ಜುಗೊಳಿಸಲು ಟ್ರಸ್ಟ್ ಮುಂದಾಗಿದ್ದು, ರಾಮಮಂದಿರ ಟ್ರಸ್ಟ್​ನ ಮೊದಲ ಸಭೆಗೆ ಡೇಟ್ ಕೂಡ ಫಿಕ್ಸ್ ಆಗಿದೆ. ಮೊದಲಿಗೆ ಉತ್ತರ ಪ್ರದೇಶದಲ್ಲಿ ಆಯೋಜಿಸಿದ್ದ ಸಭೆಯನ್ನ ಇದೀಗ ರಾಷ್ಟ್ರ ರಾಜಧಾನಿಗೆ ಸ್ಥಳಾಂತರಿಸಲಾಗಿದ್ದು, ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ಸಭೆಯಲ್ಲಿ ನಿರ್ಧಾರವಾಗಲಿದೆ ಅಡಿಗಲ್ಲು ಹಾಕುವ ದಿನಾಂಕ..!
ಅಂದಹಾಗೆ 15 ಸದಸ್ಯರಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಮೊದಲ ಸಭೆಯನ್ನ ಫೆಬ್ರವರಿ 19ರಂದು ನಡೆಸಲು ತೀರ್ಮಾನಿಸಲಾಗಿದೆ. ಈ ಮೊದಲು ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದ್ರೆ ಸಭೆಯನ್ನ ರಾಷ್ಟ್ರರಾಜಧಾನಿ ದೆಹಲಿಗೆ ಸ್ಥಳಾಂತರ ಮಾಡಲಾಗಿದೆ. ಸಭೆ ಫೆಬ್ರವರಿ 19ಕ್ಕೆ ಫಿಕ್ಸ್ ಆಗಿದ್ದರೂ ಫೆಬ್ರವರಿ 18ರಂದೇ ಟ್ರಸ್ಟ್​ನ ಸದಸ್ಯರು ದೆಹಲಿಗೆ ಆಗಮಿಸಿ ಸಿದ್ಧತೆ ನಡೆಸಲಿದ್ದಾರೆ. ವಿಶೇಷ ಅಂದ್ರೆ ಇದೇ ಸಭೆಯಲ್ಲಿ ದೇವಾಲಯಕ್ಕೆ ಅಡಿಗಲ್ಲು ಹಾಕುವ ದಿನಾಂಕವನ್ನೂ ಫಿಕ್ಸ್ ಮಾಡಲಾಗುವುದು.

ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಪಿಎಂ ನರೇಂದ್ರ ಮೋದಿಗೆ ಆಹ್ವಾನ:
ಹೌದು, ಇನ್ನೇನು ಕೆಲವೇ ಕೆಲವು ವರ್ಷಗಳಲ್ಲಿ ಕೋಟ್ಯಂತರ ರಾಮಭಕ್ತರ ಕನಸು ಈಡೇರಲಿದೆ. 2022ರ ಒಳಗಾಗಿ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಲಿದೆ. ಮಂದಿರಕ್ಕಾಗಿ ಸುಮಾರು 67 ಎಕರೆ ಭೂಮಿ ಸಮತಟ್ಟು ಮಾಡಲಾಗುತ್ತಿದ್ದು, ಮತ್ತಷ್ಟು ಜಾಗಕ್ಕೆ ಕೇಂದ್ರದ ಬಳಿ ಬೇಡಿಕೆ ಇಡಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಸದಸ್ಯರು ತೀರ್ಮಾನಿಸಿದ್ದಾರೆ. ಇನ್ನು ಫೆಬ್ರವರಿ 19ರಂದು ನಡೆಯಲಿರುವ ಸಭೆಯ ಬಳಿಕ ಅಡಿಗಲ್ಲು ಕಾರ್ಯಕ್ರಮಕ್ಕೆ ಡೇಟ್ ಫಿಕ್ಸ್ ಆಗಲಿದ್ದು, ಪಿಎಂ ನರೇಂದ್ರ ಮೋದಿಗೆ ಆಹ್ವಾನ ನೀಡಲಾಗುವುದು.

ಒಟ್ನಲ್ಲಿ ವಿಶ್ವದ ಗಮನ ಸೆಳೆದಿದ್ದ ರಾಮಮಂದಿರ ನಿರ್ಮಾಣ ವಿಚಾರ, ಇದೀಗ ಮತ್ತಷ್ಟು ಮಹತ್ವ ಪಡೆದಿದೆ. ದೇಗುಲ ನಿರ್ಮಾಣಕ್ಕೆ ಸಕಲ ಸಿದ್ಧತೆಗಳು ಭರದಿಂದ ನಡೀತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮಂದಿರ ನಿರ್ಮಿಸಲು ಸ್ಪಷ್ಟವಾದ ಬ್ಲೂಪ್ರಿಂಟ್ ಸಿದ್ಧವಾಗಲಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!