ಪ್ರಿಯಕರನ ಜೊತೆ ಸೇರಿ ತಂದೆಯನ್ನೇ ಹತ್ಯೆ ಮಾಡಿದ ಅಪ್ರಾಪ್ತೆ

ಬೆಂಗಳೂರು: ಮಗಳು.. ಸಂತೋಷದ ಗೊಂಚಲು. ತಂದೆಗೆ ಗಂಡು ಮಕ್ಕಳಿಗಿಂತಾ ಜಾಸ್ತಿ ಹೆಣ್ಣು ಮಕ್ಕಳ ಮೇಲೆಯೇ ಪ್ರೀತಿ. ಆದ್ರೆ ಅದೊಬ್ಬಳು ಮಗಳು ಮಾತ್ರ ತನ್ನ ತಂದೆ ಪಾಲಿಗೆ ಕ್ರೂರಿಯಾಗಿದ್ಳು. ಆವತ್ತು ಆಗಸ್ಟ್ 18, 2019. ಬೆಂಗಳೂರಿನ ರಾಜಾಜಿನಗರದ5ನೇ ಬ್ಲಾಕ್‌ನಲ್ಲಿರೋ ಮನೆ ಬಳಿಯಲ್ಲಿ ಜನಸಂದಣಿ. ಬೆಂಗಳೂರಿನಲ್ಲಿ ಬ್ಯುಸಿನೆಸ್ ಮಾಡ್ತಾ ಇದ್ದ ರಾಜಸ್ಥಾನ ಮೂಲದ ಜಯಕುಮಾರ್‌ ಎಂಬಾತನ ಮನೆ ಇದು. ಈ ಮನೆಗೆ ಮರುದಿನ ಬೆಳಗ್ಗೆ ಬೆಂಕಿ ಬಿದ್ದಿದೆ ಅನ್ನೋ ಸುದ್ದಿ. ಮನೆಯಲ್ಲಿದ್ದ ಮಗಳು ಕೂಗಿ ಎಚ್ಚರಿಸಿದ್ದ ಕಾರಣ ಅಕ್ಕಪಕ್ಕದವರು ಕ್ಷಣ ಮಾತ್ರದಲ್ಲಿಯೇ ಅಗ್ನಿಶಾಮಕ ದಳಕ್ಕೆ ಫೋನ್‌ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮನೆಯ ಮೇಲ್ಭಾಗದಿಂದ ಕೆಳಗಿಳಿದು ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಬಂದಿದ್ದ ಪೊಲೀಸರಿಗೆ ಬಾತ್‌ರೂಂನಲ್ಲಿ ಮನೆಯೊಡೆಯನ ಮೃತ ದೇಹ ಸುಟ್ಟು ಕರಕಲಾಗಿ ಬಿದ್ದಿದ್ದು ಕಾಣಿಸಿದೆ.

ಪೊಲೀಸರಿಗೆ ಆರಂಭದಲ್ಲಿಯೇ ಈ ನಿಗೂಢ ಸಾವಿನ ಬಗ್ಗೆ ಅನುಮಾನ ಬಂದಿತ್ತು. ಯಾರೋ ಭಾರೀ ಷಡ್ಯಂತ್ರ ಮಾಡಿ ಕೊಲೆ ಮಾಡಿದ್ದಾರೆ. ಅದು ಗೊತ್ತಾಗಬಾರದು ಅಂತಾ ಸಾಕಷ್ಟು ಪ್ಲಾನ್‌ ಮಾಡಿದ್ದಾರೆ ಅನ್ನೋ ಅನುಮಾನ. ಮನೆಯ ಬೆಡ್‌ರೂಂನಲ್ಲಿ ಪೊಲೀಸರಿಗೆ ರಕ್ತದ ಕಲೆಗಳು ಕಾಣಿಸಿತ್ತು. ಸ್ಟೇರ್‌ ಕೇಸ್‌ನಲ್ಲಿ ರಕ್ತ ಇತ್ತು. ಯಾರು ಮಾಡಿದ್ರು ಕೊಲೆ. ಹೊರಗಿನಿಂದ ಯಾರೂ ಮನೆಯೊಳಗೆ ಬಂದಿರಲಿಲ್ಲ ಜಯಕುಮಾರ್ ಜೊತೆಯಲ್ಲಿ ಮನೆಯಲ್ಲಿದ್ದಿದ್ದು ಎಸ್‌ಎಸ್‌ಎಲ್‌ಸಿ ಓದ್ತಾ ಇದ್ದ ಅವರ ಮಗಳು ಮಾತ್ರ. ಮಡದಿ ತನ್ನ ಮಗನೊಂದಿಗೆ ಪಾಂಡಿಚೇರಿಗೆ ಹೋಗಿದ್ರು. ಮುಂದೆ ಪೊಲೀಸರು ಮಗಳ ಕೈಗಾಗಿದ್ದ ಸುಟ್ಟ ಗಾಯಕ್ಕೆ ಚಿಕಿತ್ಸೆ ಕೊಡಿಸಿದ್ದಾರೆ. ಆ ನಂತ್ರ ಏನಾಯ್ತು ಹೇಳಮ್ಮಾ ಅಂದಿದ್ದಾರೆ. ಬಿಚ್ಚಿಕೊಂಡಿದ್ದೊಂದು ಭೀಕರ ಸತ್ಯ.

ಸೀನಿಯರ್ ಜೊತೆ ಪ್ರೇಮದಲ್ಲಿ ಬಿದ್ದಿದ್ದ ಅಪ್ರಾಪ್ತೆ:
ಜಯಕುಮಾರ್ ಮಗಳು ತಾನು ಓದುತ್ತಿದ್ದ ಶಾಲೆಯಲ್ಲಿ ಸೀನಿಯರ್ ಆಗಿದ್ದ ಪ್ರವೀಣ್‌ ಎಂಬಾತನೊಂದಿಗೆ ಗೆಳೆತನವಿತ್ತು. ಅದು ಪ್ರೀತಿಗೆ ತಿರುಗಿತ್ತು. ವಿಚಾರ ಗೊತ್ತಾಗ್ತಾ ಇದ್ದಂತೆ ಜಯಕುಮಾರ್‌ ಮಗಳಿಗೆ ಹೊಡೆದು ಬಡಿದು ಬುದ್ದಿ ಹೇಳಿದ್ರು. ಆದ್ರೂ ಮಗಳು ಸರಿಯಾಗದಿದ್ದಾಗ ತಂದೆ ಎರಡ್ಮೂರು ದಿನ ಮನೆಯಿಂದ ಹೊರಗೇ ಹೋಗದಂತೆ ತಡೆದಿದ್ದಾನೆ. ಮೊಬೈಲ್‌ ತೆಗೆದಿಟ್ಟುಕೊಂಡಿದ್ದಾರೆ. ಆದ್ರೆ ಮಗಳು ಅತಿರೇಕದ ನಿರ್ಧಾರ ತೆಗೆದುಕೊಂಡಿದ್ಳು. ಪ್ರವೀಣ್‌ ಜೊತೆ ಸೇರಿ ತಂದೆಯ ಹತ್ಯೆಗೆ ನಿರ್ಧರಿಸಿದ್ದಾಳೆ.

ಚಾಕುವಿನಿಂದ ಇರಿದು ಹತ್ಯೆ:
ಅಮ್ಮ ಮತ್ತು ಸಹೋದರ ಊರಲ್ಲಿಲ್ಲದ ಆ ದಿನ ಮಗಳೇ ತಂದೆಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಹಾಕಿ ಕುಡಿಸಿದ್ಳು. ನಂತ್ರ ರಾತ್ರಿ ಪ್ರವೀಣ ತಾನೊಂದು ಚಾಕುವಿನಂತಾ ವಸ್ತುವನ್ನ ಹಿಡಿದುಕೊಂಡು ಜಯಕುಮಾರ್‌ ಮನೆಗೆ ಬಂದಿದ್ದ. ಗಾಢ ನಿದ್ದೆಗೆ ಜಾರಿದ್ದ ಜಯಕುಮಾರ್‌ನನ್ನ ಇರಿದು ಹತ್ಯೆ ಮಾಡಿದ್ದಾರೆ. ಆದ್ರೆ ಶವ ಸಾಗಿಸೋಕೆ ಸಾಧ್ಯವಾಗಿರಲಿಲ್ಲ. ಬೆಳಗ್ಗೆ ಮನೆಗೆ ಬೆಂಕಿ ಬಿದ್ದ ನಾಟಕವಾಡಲು ನಿರ್ಧರಿಸಿದ್ದಾರೆ. ಬೆಳಬೆಳಗ್ಗೆ ಪೆಟ್ರೋಲ್ ತಂದು ಶವವನ್ನ ಬಾತ್‌ರೂಂನಲ್ಲಿ ಹಾಕಿ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಇಬ್ಬರಿಗೂ ಸ್ವಲ್ಪ ಪ್ರಮಾಣದ ಸುಟ್ಟ ಗಾಯಗಳಾಗಿದೆ. ನಂತ್ರ ನಾಟಕವಾಡಿದ್ದಾರೆ. ಆದ್ರೆ ಪೊಲೀಸರು ಈ ಪ್ರಕರಣವನ್ನ ಬಯಲಿಗೆಳೆದಿದ್ರು. ಪ್ರವೀಣ ಜೈಲು ಸೇರಿದ್ದ. ಇನ್ನು ಜೈಕುಮಾರ್ ಮಗಳು ಅಪ್ರಾಪ್ತೆಯಾಗಿದ್ದ ಕಾರಣ ಪೊಲೀಸರು ಬಾಲಮಂದಿರಕ್ಕೆ ಕಳುಹಿಸಿದ್ರು. ಪ್ರಕರಣದ ಚಾರ್ಚ್‌ಶೀಟ್‌ನ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಇನ್ನಷ್ಟೇ ಈ ಪ್ರಕರಣದ ವಿಚಾರಣೆ ಶುರುವಾಗಬೇಕಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!