ರಷ್ಯಾದ ವೋಲ್ಗಾ ನದಿಯಲ್ಲಿ ಈಜಾಡುತ್ತಿದ್ದ ತಮಿಳುನಾಡಿನ 4 ಯುವಕರ ಸಾವು

ರಷ್ಯಾದಲ್ಲಿ ವೈದ್ಯಕೀಯ ಶಿಕ್ಷಣ ಅಧ್ಯಯನ ಮಾಡುತ್ತಿದ್ದ ತಮಿಳುನಾಡಿನ ನಾಲ್ವರು ಯುವಕರು ಶನಿವಾರ ವೋಲ್ಗಾ ನದಿಯಲ್ಲಿ ಈಜಲು ತೆರಳಿದ್ದಾಗ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮೃತ ವಿದ್ಯಾರ್ಥಿಗಳೆಲ್ಲ ಚೆನ್ನೈ ಮೂಲದವರೆಂದು ತಿಳಿದುಬಂದಿದೆ. ಒಟ್ಟೇರಿಯದ ಎಂ ಸ್ಟೀಫನ್ (20), ತಾರಾಪುರದ ಮೊಹಮ್ಮದ್ ಆಶಿಕ್, ತಿಟ್ಟಕುಡಿನ ರಾಮು ವಿಘ್ನೇಶ್ ಮತ್ತು ಸೇಲಂನ ತಲೈವಾಸಲ್ ನ ಮನೋಜ್ ಆನಂದ್ ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ. ನಾಲ್ವರೂ ವೋಲ್ಗೊಗ್ರಾಡ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.

ಶನಿವಾರ ರಾತ್ರಿ ನಾಲ್ವರು ಸೇರಿದಂತೆ ಕೆಲವು ವಿದ್ಯಾರ್ಥಿಗಳು ನದಿಯಲ್ಲಿ ಈಜಲು ಹೋಗಿದ್ದರು, ಅವರಲ್ಲಿ ಒಬ್ಬ ನದಿಯಲ್ಲಿ ಮುಳುಗುವುದನ್ನು ಕಂಡ ಮಿಕ್ಕವರು ಆತನನ್ನು ರಕ್ಷಿಸಲು ತೆರಳಿದ್ದಾರೆ. ಆದರೆ ಇತರರು ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ರಷ್ಯಾದ ಸ್ಥಳೀಯ ಪೊಲೀಸರ ಸಹಾಯದಿಂದಾಗಿ ಕೆಲವು ಗಂಟೆಗಳ ನಂತರ, ನಾಲ್ವರ ಶವಗಳನ್ನು ಹೊರಗೆ ತೆಗೆಯಲಾಗಿದೆ.

ಭಾರತೀಯ ರಾಯಭಾರ ಕಚೇರಿಯ ಮೂಲಕ ವಿದ್ಯಾರ್ಥಿಗಳ ಕುಟುಂಬಗಳಿಗೆ ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳ ಶವಗಳನ್ನು ಮರಳಿ ಮನೆಗೆ ತರುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕುಟುಂಬ ಸದಸ್ಯರು ಮುಖ್ಯಮಂತ್ರಿಯನ್ನು ಕೋರಿದ್ದಾರೆ. ಕುಟುಂಬಸ್ಥರ ಮನವಿಗೆ ಸ್ಪಂದಿಸಿದ ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ, ವಿದೇಶಾಂಗ ಸಚಿವಾಲಯ ಮತ್ತು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ತಕ್ಷಣ ಸಂಪರ್ಕಿಸಿ ನಾಲ್ವರ ಶವಗಳನ್ನು ತರಲು ವ್ಯವಸ್ಥೆ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದಿದ್ದಾರೆ.

Related Tags:

Related Posts :

Category: