ಈವ್​ ಟೀಸಿಂಗ್​: ಪುಂಡರ ಹುಚ್ಚಾಟಕ್ಕೆ ಪ್ರತಿಭಾನ್ವಿತ ಯುವತಿ ಬಲಿ, ಎಲ್ಲಿ?

ದೆಹಲಿ: ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಯುವತಿಯೊಬ್ಬಳು ಬೈಕ್​ನಿಂದ ಬಿದ್ದು ಮೃತಪಟ್ಟಿರುವ ಘಟನೆ ಕಳೆದ ಸೋಮವಾರ ಸಂಭವಿಸಿದೆ. ಅಮೆರಿಕಾದಲ್ಲಿ ಅಧ್ಯಯನ ಮಾಡಲು ಈಕೆಗೆ 3.83 ಕೋಟಿ ರೂಪಾಯಿ ವಿದ್ಯಾರ್ಥಿವೇತನ ಬರುತ್ತಿತ್ತು.

ಉತ್ತರ ಪ್ರದೇಶದ ಗೌತಮ್ ಬುದ್ಧನಗರದ ಸುದೀಕ್ಷಾ ಎಂಬ ಯುವತಿ ತನ್ನ ಚಿಕ್ಕಪ್ಪ ಮನೋಜ್ ಭಾಟಿಯೊಂದಿಗೆ ಸಿಕಂದ್ರಬಾದ್‌ನಲ್ಲಿರುವ ತನ್ನ ಸಂಬಂಧಿಕರನ್ನು ಭೇಟಿಯಾಗಲು ಹೋಗುತ್ತಿದ್ದಾಗ ಅವರನ್ನು ಕೆಲ ದುಷ್ಕರ್ಮಿಗಳು ಬೆನ್ನಟ್ಟಿ ಕಿಚಾಯಿಸಲು ಪ್ರಾರಂಭಿಸಿದ್ದರು.  ನಂತರ ಸುದೀಕ್ಷಾ ಮತ್ತು ಮನೋಜ್​ರ ಬೈಕ್ ಮುಂದೆ ಸ್ಟಂಟ್ ಮಾಡಲು ಮುಂದಾದರು.

ಇಷ್ಟಕ್ಕೆ ನಿಲ್ಲಿಸದೆ, ಕಿಡಿಗೇಡಿಗಳು ಮನೋಜ್ ಬೈಕಿಗೆ ಗುದಿದ್ದಾರೆ. ಈ ವೇಳೆ ಬೈಕ್​ನ ಸಮತೋಲನ ತಪ್ಪಿ ನೆಲಕ್ಕೆ ಬಿದ್ದ ಪರಿಣಾಮ ಸುದೀಕ್ಷಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಸುದೀಕ್ಷಾ ಉತ್ತರ ಪ್ರದೇಶದ ದಾದ್ರಿಯಲ್ಲಿರುವ ಬುಲಂದ್‌ಶಹರ್ ಎಂಬ ಊರಿನವಳು. ತಂದೆ ಜಿತೇಂದ್ರ ಭಾಟಿ ಚಹದ ಅಂಗಡಿ ಇಟ್ಟಿದ್ದು ಅದರಿಂದಲೇ ಕುಟುಂಬದ ನಿರ್ವಹಣೆ ಮಾಡುತ್ತಿದ್ದರು. ಓದಿನಲ್ಲಿ ಸದಾ ಮುಂದಿದ್ದ ಸುದೀಕ್ಷಾ ತನ್ನ ಪ್ರತಿಭೆಯಿಂದಲೇ ಅಮೆರಿಕಾದ ವಿದ್ಯಾರ್ಥಿ ವೇತನ ಪಡೆದು ವ್ಯಾಸಂಗ ಮಾಡುತ್ತಿದ್ದಳು. ಕೊರೊನಾ ಲಾಕ್‌ಡೌನ್‌ನಿಂದಾಗಿ ಜೂನ್‌ನಲ್ಲಿ ಸುದೀಕ್ಷಾ ತನ್ನ ಊರಿಗೆ ಮರಳಿದ್ದಳು.

ಸುದೀಕ್ಷಾ HCL ಫೌಂಡೇಶನ್‌ನ ಶಾಲೆಯಲ್ಲಿ ತನ್ನ ಶಾಲಾ ಶಿಕ್ಷಣ ಮುಗಿಸಿದ್ದಳು. ಜೊತೆಗೆ, 2018 ರಲ್ಲಿ ತನ್ನ ಜಿಲ್ಲೆಗೆ ಸಿಬಿಎಸ್‌ಇ ಟಾಪರ್ ಆಗಿದ್ದಳು.ಇದೇ ಆಗಸ್ಟ್ 20 ರಂದು ಅಮೆರಿಕಾಗೆ ಮರಳಲು ತಯಾರಿ ಸಹ ನಡೆಸುತ್ತಿದ್ದಳು. ಅಷ್ಟರಲ್ಲೇ ಈ ದುರ್ಘಟನೆ ಸಂಭವಿಸಿದ್ದು ಜೀವನದಲ್ಲಿ ಮತ್ತಷ್ಟು ಮಿಂಚಬೇಕಿದ್ದ ಪ್ರತಿಭೆ ಅಸುನೀಗಿದ್ದಾಳೆ.

Related Tags:

Related Posts :

Category: