ಆ ಘಟನೆಯಿಂದ.. ಕೊರೊನಾ ‘ಆಪದ್ಬಾಂಧವ’ ತನ್ನ ಕಾರು ಮಾರಿ ಏನು ಮಾಡ್ತಿದ್ದಾನೆ ನೋಡಿ!

ಮುಂಬೈ: ಕೊರೊನಾ ಮಹಾಮಾರಿಯ ಈ ನೋವು ಮತ್ತು ಆತಂಕ ತುಂಬಿರುವ ವೇಳೆಯಲ್ಲಿ ಕೆಲವು ಸಹೃದಯಿಗಳು ಸೋಂಕಿತರಿಗೆ ನೆರವಿನ ಹಸ್ತ ಚಾಚುತ್ತಿದ್ದಾರೆ. ತಮ್ಮ ಜೀವವನ್ನೇ ಪಣಕ್ಕಿಡುತ್ತಿದ್ದಾರೆ. ಅನೇಕ ಆಪದ್ಬಾಂಧವರು ಸಕಾಲಕ್ಕೆ ಉದಯಿಸಿದ್ದಾರೆ. Super Hero ಗಳೂ ಅನೇಕ ಮಂದಿ ಬೆಳಕಿಗೆ ಬಂದಿದ್ದಾರೆ. ಅಂಥದ್ದೇ ಒಬ್ಬ ಹೃದಯವಂತ 31 ವರ್ಷದ ಶಹನವಾಜ್​ ಶೇಖ್​.
ದೇಶದಲ್ಲಿ ಮಹಾಮಾರಿಯ ಆರ್ಭಟ ಹೆಚ್ಚಾಗುತ್ತಿದ್ದಂತೆ ಸೋಂಕಿತರ ನೆರವಿಗೆ ಮುಂದಾದ ಶಹನವಾಜ್​ ತಮ್ಮ ಕಾರ್​ ಅನ್ನೇ ಌಂಬುಲೆನ್ಸ್​ ಆಗಿ ಪರಿವರ್ತಿಸಿ ಸೋಂಕಿತರನ್ನ ಆಸ್ಪತ್ರೆಗೆ ಸಾಗಿಸಲು ಪ್ರಾರಂಭಿಸಿದರು. ಆದರೆ, ಈ ಮಧ್ಯೆ ಘಟಿಸಿದ ಒಂದು ಪ್ರಸಂಗದಿಂದ ಶಹನವಾಜ್​ ತಮ್ಮ ಪ್ರೀತಿಯ ಕಾರ್​ ಮಾರೋಕೆ ಮುಂದಾದರು. ಆ ಪ್ರಸಂಗವೇ ತನ್ನ ಸ್ನೇಹಿತನ ಗರ್ಭಿಣಿ ತಂಗಿಯ ಹಠಾತ್ ನಿಧನ.

ಶಹನವಾಜ್​ ಕಾರ್​ ಮಾರಲು ಕಾರಣವೇನು ಗೊತ್ತಾ?
ಸೋಂಕಿಗೆ ತುತ್ತಾಗಿದ್ದ ಸ್ನೇಹಿತೆಯ ಗರ್ಭಿಣಿ ತಂಗಿಯನ್ನ ಯಾವ ಆಸ್ಪತ್ರೆಯೂ ದಾಖಲಿಸಿಕೊಳ್ಳಲು ಒಪ್ಪಲಿಲ್ಲ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಆಕೆಗೆ ವೆಂಟಿಲೇಟರ್​ ಇಲ್ಲ ಎಂಬ ಸಬೂಬು ಹೇಳಿ ಕಳಿಸಿ ಬಿಟ್ಟಿದ್ದರು. ಹಾಗಾಗಿ, ಸೂಕ್ತ ಚಿಕಿತ್ಸೆ ಸಿಗದೆ ಆಕೆ ಕೊನೆಯುಸಿರೆಳೆದಿದ್ದಳು. ಗರ್ಭಿಣಿಗೆ ಸಮಯಕ್ಕೆ ಆಕ್ಸಿಜನ್​ ದೊರಕಿದ್ದರೆ ಅವಳು ಮತ್ತು ಮಗು ಇಬ್ಬರೂ ಬದುಕುತ್ತಿದ್ದರೂ ಎಂಬುದು ಶಹನವಾಜ್​ಗೆ ಅರಿವಾಯಿತು.

ಹೀಗಾಗಿ, ಅವರು ಸೋಂಕಿತರಿಗೆ ಉಚಿತವಾಗಿ ಆಕ್ಸಿಜನ್​ ಸಿಲಿಂಡರ್​ ಪೂರೈಸಲು ಮುಂದಾದರು. ಇದಕ್ಕೆ ತಗಲುವ ವೆಚ್ಚವನ್ನ ಭರಿಸಲು ಕೊನೆಗೆ ತಮ್ಮ ನೆಚ್ಚಿನ ಕಾರ್​ ಮಾರಿಬಿಟ್ಟರು. ಅದರಿಂದ ಬಂದ ಹಣದಿಂದ ಸುಮಾರು 250 ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸೋಂಕಿತರಿಗೆ ಆಕ್ಸಿಜನ್​ ಸಿಲಿಂಡರ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.

ಸೋಷಿಯಲ್​ ಮೀಡಿಯಾ ಮೂಲಕ ಸೋಂಕಿತರ ಕುಟುಂಬಗಳನ್ನ ಸಂಪರ್ಕಿಸಿ ಸಹಾಯ ಮಾಡುತ್ತಿದ್ದಾರೆ. ಇದಲ್ಲದೆ, ಸೋಂಕಿತರ ಕುಟುಂಬಸ್ಥರಿಗೆ ಸ್ವಸಹಾಯಕರ ಮೂಲಕ ತರಬೇತಿ ನೀಡಿ ಅದರ ಬಳಕೆಯ ವಿಧಾನವನ್ನು ತಿಳಿಸಿಕೊಡುತ್ತಿದ್ದಾರೆ.

ಅಂದ ಹಾಗೆ, ಕಾರ್​ ಕಳೆದುಕೊಂಡ ಬೇಜಾರು ಶಹನವಾಜ್​ಗೆ ಈಗಲೂ ಕಾಡುತ್ತಿದೆಯಂತೆ. ಆದರೆ, ಸೋಂಕಿತನೊಬ್ಬನ ಜೀವ ಉಳಿಸಿ ಆತನ ಕುಟುಂಬ ನನ್ನನ್ನು ಹರಸಿದರೆ ಮುಂದೆ ನಾನು ಇಂಥದ್ದೇ ನಾಲ್ಕು ಕಾರುಗಳನ್ನ ಖರೀದಿಸುವೆ ಎಂದು ಈ ಸಹೃದಯಿ ಶಹನವಾಜ್​ ಹಂಚಿಕೊಂಡಿದ್ದಾರೆ.

Related Tags:

Related Posts :

Category:

error: Content is protected !!